ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿ ಹೋದ ವಿಷ್ಣುವರ್ಧನ್ ಅವರ 13ನೇ ಪುಣ್ಯಸ್ಮರಣೆಯನ್ನು ವಿವಿಧೆಡೆ ನಾನಾ ರೀತಿಯಲ್ಲಿ ಆಚರಿಸಲಾಗುತ್ತಿದೆ. 2009ರ ಡಿಸೆಂಬರ್ 30ರಂದು ಸಾಹಸಸಿಂಹ ವಿಷ್ಣುವರ್ಧನ್ ಅವರು ಹೃದಯಾಘಾತದಿಂದ ಇಹಲೋಕ ತ್ಯಜಿಸಿದರು. ಆದರೆ, ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಇಂದಿಗೂ ವಿಷ್ಣು ದಾದ ಅಜರಾಮರ. ಅವರನ್ನ ಇಂದು ನಾನಾ ರೀತಿಯಲ್ಲಿ ಸ್ಮರಿಸುವ ಕಾರ್ಯ ಆಗುತ್ತಿದೆ.
18 ಸೆಪ್ಟೆಂಬರ್ 1950ರಲ್ಲಿ ಶ್ರೀ ಹೆಚ್.ಎಲ್. ನಾರಾಯಣ ರಾವ್ ಹಾಗೂ ಶ್ರೀಮತಿ ಕಾಮಾಕ್ಷಮ್ಮ ಪುತ್ರನಾಗಿ ವಿಷ್ಣುವರ್ಧನ್ ಮೈಸೂರಿನಲ್ಲಿ ಜನಿಸಿದರು. 2009 ಡಿಸೆಂಬರ್ 30 ಬೆಳಗಿನ ಜಾವ ಅವರು ನಿಧನರಾಗಿದ್ದು ಕೂಡಾ ಮೈಸೂರಿನ ಕಿಂಗ್ಸ್ ಕೋರ್ಟ್ ಹೋಟೆಲ್ನಲ್ಲಿ. ಇಂದು ಅವರಿಗೆ ಗೌರವ ಸಲ್ಲಿಸುವ ಕಾರ್ಯ ನಡೆಯುತ್ತಿದೆ.
ನಾಗರಹಾವು ಸಿನಿಮಾಗೆ 50 ವರ್ಷ: ಡಾ ವಿಷ್ಣುವರ್ಧನ್ ಹಾಗೂ ಅಂಬರೀಶ್ ಅವರಂತಹ ದಿಗ್ಗಜ ನಟರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ ಚಿತ್ರ ನಾಗರಹಾವು. ಕನ್ನಡ ಸಿನಿಮಾರಂಗದ ಚಿತ್ರಬ್ರಹ್ಮ ಅಂತಾ ಕರೆಯಿಸಿಕೊಂಡಿರುವ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಈ ಮಾಸ್ಟರ್‌ಪೀಸ್ ಚಿತ್ರ 1972ರ ಡಿಸೆಂಬರ್ 29ರಂದು ತೆರೆಕಂಡು ನಿನ್ನೆಗೆ 50 ವರ್ಷ ತುಂಬಿದೆ.