ಆ ದಿನಗಳು ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆದ ನಟ ಚೇತನ್ ಸದ್ಯ ತಮ್ಮ ಹೇಳಿಕೆಗಳ ಮೂಲಕ ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗೆ ಹಿಂದೂ ವಿರೋಧಿ ಹೇಳಿಕೆ ಆರೋಪದಲ್ಲಿ ಜೈಲಿಗೆ ಹೋಗಿ ಜಾಮೀನು ಪಡೆದು ಬಂದಿದ್ದಾರೆ. ಸದ್ಯ ಚೇತನ್ ಅವರ ವೀಸಾ ರದ್ದುಗೊಳಿಸಿರುವ ನೋಟಿಸ್ ಅನ್ನು ಕೇಂದ್ರ ಗೃಹ ಇಲಾಖೆ ಕಳುಹಿಸಿದೆ.
ಈ ವಿಚಾರವಾಗಿ ಚೇತನ್ ಶೇಷಾದ್ರಿಪುರಂನಲ್ಲಿರೋ ನಿವಾಸದಲ್ಲಿ ಮಾಧ್ಯಮಗೋಷ್ಟಿ ಕರೆದು ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ನಾನು ಭಾರತದಲ್ಲಿ 18 ವರ್ಷದಿಂದ ಇದ್ದೇನೆ. ಜಾನಪದ, ರಂಗಭೂಮಿ ಮತ್ತು ಅದರಿಂದ ಸಾಮಾಜಿಕ ಬದಲಾವಣೆ ತರುವ ವಿಚಾರದ ಮೇಲೆ ರಿಸರ್ಚ್ ಮಾಡಿದ್ದೇನೆ. 2005ರಲ್ಲಿ ನಾನು ಭಾರತಕ್ಕೆ ಬಂದೆ. 2015ರಿಂದ ಪೂರ್ಣ ಪ್ರಮಾಣದಲ್ಲಿ ನಾನು ಭಾರತದಲ್ಲಿಯೇ ಇದ್ದೇನೆ. ನನ್ನ ತಂದೆ ಮತ್ತು ತಾಯಿ ಭಾರತದವರೇ. 2018ರಲ್ಲಿ OCI ಕೊಟ್ರು. ಆದ್ರೆ ಜೊತೆಗೆ ನನ್ನ ಬಳಿ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಎಲ್ಲವೂ ಇದೆ. ನಾನು ತೆರಿಗೆಯನ್ನು ಇದೇ ದೇಶಕ್ಕೆ ಕಟ್ಟುತ್ತೇನೆ. ಈಗ ತಕ್ಷಣ OCI ರದ್ದು ಮಾಡಿದ್ದೇವೆಂದು ನೋಟಿಸ್ ನೀಡಿದ್ದಾರೆ. ಇದ್ರಲ್ಲಿ ಯಾವುದೇ ಅರ್ಥ ಇಲ್ಲ. ನಾನು ಇದೇ ದೇಶದವನು. ನನಗೆ ಅಮೆರಿಕಕ್ಕೆ ಹೋಗುವ ಮನಸ್ಸಿಲ್ಲ ಎಂದು ಚೇತನ್ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.
23 ವರ್ಷ ನಾನು ಇದ್ದಿದ್ದು, ಓದಿದ್ದು ಅಮೆರಿಕದಲ್ಲಿ. ಆ ನಂತ್ರ ಸೇವೆ ಸಲ್ಲಿಸಲು ಭಾರತಕ್ಕೆ ಬಂದೆ. ಆದಾದ ಬಳಿಕ ಸಿನಿಮಾ ಸೇರಿದಂತೆ ಸಾಕಷ್ಟು ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಿದ್ದೇನೆ. ಹೋರಾಟ ಮಾಡಿ ಆದಿವಾಸಿಗಳಿಗಾಗಿ 528 ಮನೆಗಳನ್ನು ಕಟ್ಟಿಸಿಕೊಟ್ಟ ಬಗ್ಗೆ ನನಗೆ ಹೆಮ್ಮೆ ಇದೆ. ನಮ್ಮ ಸಿದ್ಧಾಂತ, ಅಂಬೇಡ್ಕರ್ ವಾದ, ಪೆರಿಯಾರ್ ವಾದ ಸರ್ಕಾರಕ್ಕೆ ಇಷ್ಟವಾಗಿಲ್ಲ. ಒಂದು ಸಮುದಾಯದ ಲಾಬಿ ಎನ್ನುವ ಮಾತು ಹೇಳಿದ್ದಕ್ಕೆ 295A ಕೇಸ್ ಹಾಕಿದ್ರು. ಗನ್ ಮ್ಯಾನ್ನನ್ನು ಒಂದುವರೆ ವರ್ಷದ ಹಿಂದೆಯೇ ತೆಗೆದಿದ್ದಾರೆ. ಒಂದು ಸತ್ಯದ ಟ್ವೀಟ್ ಮಾಡಿದ್ದಕ್ಕೆ ಧಾರ್ಮಿಕ ಭಾವನೆಗಳಿಗೆ ದಕ್ಕೆ ಮಾಡಲಾಗಿದೆ ಅಂತ ಮೂರು ದಿನ ಜೈಲಿಗೆ ಕಳಿಸಿದ್ರು. OCI (ಓವರ್ ಸೀಸ್ ಸಿಟಿಜನ್ ಆಫ್ ಇಂಡಿಯಾ )ನನಗೆ ನೀಡಿದ್ದಾರೆ. ಇದರಲ್ಲಿ ಮತ ಹಾಕೋದು, ಚುನಾವಣೆಗೆ ನಿಲ್ಲುವುದು, ಸರ್ಕಾರಿ ನೌಕರನಾಗಿ ಕೆಲಸ ಮಾಡೋದು ಬಿಟ್ರೆ ಎಲ್ಲಾ ಹಕ್ಕು ನನಗೆ ಇದೆ. ಆದರೆ ಈಗ ನೀವು ಬಹಳ ಕ್ರಿಮಿನಲ್ ಕೆಲಸಗಳಲ್ಲಿ ಭಾಗಿಯಾಗುತ್ತಿದ್ದೀರ ಎಂದು ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಚೇತನ್ ಹೇಳಿದರು.