ಗದಗ: ಹಾನಗಲ್ ಶ್ರೀ ಕುಮಾರ ಶಿವಯೋಗಿಗಳ ಜೀವನ ಚರಿತ್ರೆ ಆಧಾರಿತ ವಿರಾಟಪುರ ವಿರಾಗಿ ಚಲನಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ಇಂದು ನಡೆಯಿತು. ಉತ್ತರ ಕರ್ನಾಟಕದ ವಟುಗಳ ಪಿತಾಮಹ ಶಿವಯೋಗ ಮಂದಿರದ ಜಗದ್ಗುರು ಹಾನಗಲ್ ಕುಮಾರ ಶಿವಯೋಗಿಗಳ ಜೀವನ ಚರಿತ್ರೆಯನ್ನು ಜಗತ್ತಿಗೆ ಸಾರುವ ಪ್ರಯತ್ನ ಇದಾಗಿದ್ದು ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರು ಸೇರಿದಂತೆ ಹಲವು ಸ್ವಾಮೀಜಿಗಳು, ನಟ ನಟಿಯರು ಭಾಗಿಯಾಗಿದ್ದರು.
ಬಿಜೆಪಿಯ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಮಾತನಾಡಿ, ನಮ್ಮ ನಾಡಿನ ಯುಗಪುರುಷರು, ಸ್ವಾಮೀಜಿಗಳು ತ್ರಿವಿಧ ದಾಸೋಹದ ಮಹತ್ವವನ್ನು ಜಗತ್ತಿಗೆ ಸಾರಿದ್ದಾರೆ. ಹಾನಗಲ್ ಗುರುಕುಮಾರ ಶಿವಯೋಗಿಗಳ ಜೀವನ ಚರಿತ್ರೆಯನ್ನು ಚಲನಚಿತ್ರವನ್ನಾಗಿ ಮಾಡಿರುವುದು ಸಂತಸದ ವಿಷಯವಾಗಿದೆ. ಕುಮಾರ ಶಿವಯೋಗಿಗಳು ನಡೆದು ಬಂದ ಹಾದಿ, ಸಮಾಜಕ್ಕೆ ನೀಡಿದ ಉತ್ತಮ ಸಂದೇಶ, ನೀತಿ ಪಾಠಗಳನ್ನು ಯವಕರಿಗೆ ತಲುಪಿಸುವ ಉದ್ದೇಶದಿಂದ ನಿರ್ಮಾಣ ಮಾಡಿರುವ ವಿರಾಟಪುರ ವಿರಾಗಿ ಚಲನಚಿತ್ರ ರಾಜ್ಯ, ದೇಶದ ಜನರ ಮನೆಮನ ತಲುಪಲಿ ಎಂದು ಹಾರೈಸಿದರು.