ಇಂದು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತಮ್ಮ 35ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅವರು ಪತಿ, ಕ್ರಿಕೆಟಿಗ ವಿರಾಟ್ ಕೊಹ್ಲಿಯಿಂದ ಬೆಚ್ಚಗಿನ ಹುಟ್ಟುಹಬ್ಬದ ಶುಭಾಶಯಗಳನ್ನು ಸ್ವೀಕರಿಸಿದ್ದಾರೆ. ಅನುಷ್ಕಾ ಅವರ ಬಗೆಬಗೆಯ ಫೋಟೋಗಳನ್ನು ಹಂಚಿಕೊಂಡಿರುವ ಕೊಹ್ಲಿ ತಮಗೆ ಎಲ್ಲವೂ ಆಗಿರುವ ಪತ್ನಿಗೆ ಪ್ರೀತಿಯಿಂದ ಬರ್ತ್ಡೇ ವಿಶ್ ಮಾಡಿದ್ದಾರೆ. "ನಿನ್ನೆಲ್ಲಾ ಮುದ್ದಾದ ಹುಚ್ಚುತನವನ್ನು ನಾನು ಪ್ರೀತಿಸುತ್ತೇನೆ. ನನಗೆ ಎಲ್ಲವೂ ಆಗಿರುವ ನಿನಗೆ ಹುಟ್ಟುಹಬ್ಬದ ಶುಭಾಶಯಗಳು" ಎಂದು ಬರೆದಿದ್ದಾರೆ.
ವಿರಾಟ್ ಈ ಪೋಸ್ಟ್ ಹಂಚಿಕೊಂಡ ನಂತರ ಇದಕ್ಕೆ ಪ್ರತಿಕ್ರಿಯಿಸಿದ ಅನುಷ್ಕಾ ರೆಡ್ ಹಾರ್ಟ್ ಎಮೋಜಿ ಅನ್ನು ಕೈಬಿಟ್ಟರು. ಈ ಮಧ್ಯೆ ನಟಿಗೆ ಕುಟುಂಬಸ್ಥರು, ಸ್ನೇಹಿತರು, ಸೆಲೆಬ್ರಿಟಿಗಳು ಸೇರಿದಂತೆ ಅಭಿಮಾನಿಗಳು ಹುಟ್ಟುಹಬ್ಬದ ಶುಭಾಶಯವನ್ನು ಕೋರಿದರು. ಸಮಂತಾ ರುತ್ ಪ್ರಭು, ನೇಹಾ ಧೂಪಿಯಾ, ರಶ್ಮಿಕಾ ಮಂದಣ್ಣ, ಕಿಯಾರಾ ಅಡ್ವಾಣಿ ಸೇರಿದಂತೆ ಅನೇಕ ತಾರೆಯರು ಅನುಷ್ಕಾಗೆ ಬರ್ತ್ಡೇ ವಿಶ್ ತಿಳಿಸಿದರು. ಇದಕ್ಕೆ ಪ್ರತಿಯಾಗಿ ಅನುಷ್ಕಾ ಪ್ರತಿಯೊಬ್ಬರಿಗೂ ಧನ್ಯವಾದ ಹೇಳಿದ್ದಾರೆ.
ಇನ್ನು ಸಿನಿಮಾ ವಿಚಾರವಾಗಿ ಹೇಳುವುದಾದರೆ, ಅನುಷ್ಕಾ ಶರ್ಮಾ ಅವರು ಜೂಲನ್ ಗೋಸ್ವಾಮಿ ಅವರ ಜೀವನಾಧಾರಿತ ಚಕ್ಡಾ ಎಕ್ಸ್ಪ್ರೆಸ್ನೊಂದಿಗೆ ತೆರೆ ಮೇಲೆ ಬರಲಿದ್ದಾರೆ. ಅವರ ಸಹೋದರ ಸರ್ಣೇಶ್ ಶರ್ಮಾ ಅವರು ಬ್ಯಾನರ್ ಕ್ಲೀನ್ ಸ್ಲೇಟ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಚಕ್ಡಾ ಎಕ್ಸ್ಪ್ರೆಸ್ ನೆಟ್ಪ್ಲಿಕ್ಸ್ನಲ್ಲಿ ಬರಲಿದೆ. ಇನ್ನು ಐಪಿಎಲ್ನಲ್ಲಿ ಆರ್ಸಿಬಿ ಪರ ಆಡುತ್ತಿರುವ ವಿರಾಟ್ ಕೊಹ್ಲಿ ಇಂದು ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಕಣಕ್ಕಿಳಿಯಲಿದ್ದಾರೆ. ಕಳೆದ ಪಂದ್ಯದಲ್ಲಿ ಸೋಲು ಕಂಡಿರುವ ಆರ್ಸಿಬಿ ಈ ಪಂದ್ಯದಲ್ಲಿ ಗೆಲ್ಲಲಿದೆಯಾ? ಎಂಬುದನ್ನು ಕಾದುನೋಡಬೇಕಿದೆ.