ದಕ್ಷಿಣ ಭಾರತದ ಸಿನಿಮೋದ್ಯಮದಲ್ಲಿ ಹಿರಿಯ ನಟ, ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ಕಮಲ್ ಹಾಸನ್ ಇಂದು ತಮ್ಮ 69ನೇ ವರುಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಅವರು ತಮಿಳುನಾಡಿನ ಚೆನ್ನೈನಲ್ಲಿ ಸ್ನೇಹಿತರು, ಸಹದ್ಯೋಗಿಗಳಿಗಾಗಿ ಪಾರ್ಟಿಯನ್ನು ಆಯೋಜಿಸಿದ್ದರು. ಈ ಸಂತೋಷಕೂಟದಲ್ಲಿ ತಮಿಳು ಚಿತ್ರರಂಗದ ಅನೇಕ ಗಣ್ಯರು ಭಾಗಿಯಾಗಿದ್ದರು. ಜೊತೆಗೆ ಬಾಲಿವುಡ್ ಸೂಪರ್ಸ್ಟಾರ್ ಅಮೀರ್ ಖಾನ್ ಕೂಡ ಭಾಗಿಯಾಗಿದ್ದು, ಅಭಿಮಾನಿಗಳಿಗೆ ಅಚ್ಚರಿ ತಂದಿತು.
'ಉಲಗ ನಾಯಗನ್' ಎಂದೇ ಕರೆಯಲ್ಪಡುವ ಕಮಲ್ ಹಾಸನ್ ಅವರು ತಮ್ಮ ಬರ್ತ್ಡೇ ಪಾರ್ಟಿಯನ್ನು ಚೆನ್ನೈನ ಬೆಲೆಬಾಳುವ ದೊಡ್ಡ ಹೋಟೆಲ್ನಲ್ಲಿ ಆಯೋಜಿಸಿದ್ದರು. ಸೆಲೆಬ್ರೇಶನ್ನಲ್ಲಿ ತಮಿಳು ಚಿತ್ರೋದ್ಯಮ ಭಾಗಿಯಾಗಿತ್ತು. ಕಾಲಿವುಡ್ ಸೂಪರ್ಸ್ಟಾರ್ ನಟ ಸೂರ್ಯ ಹಾಜರಿದ್ದರು. ಆದರೆ, ಬಾಲಿವುಡ್ ನಟ ಅಮೀರ್ ಖಾನ್ ಅವರು ಅನಿರೀಕ್ಷಿತವಾಗಿ ಕಾಣಿಸಿಕೊಂಡಿದ್ದು, ಬರ್ತ್ಡೇ ಪಾರ್ಟಿಯ ಸಂಭ್ರಮವನ್ನು ಮತ್ತಷ್ಟು ವಿಶೇಷವಾಗಿಸಿತ್ತು. ಈ ವೇಳೆ ಅಮೀರ್ ಖಾನ್ ಮತ್ತು ಸೂರ್ಯ ಒಂದೇ ಫ್ರೇಮ್ನಲ್ಲಿ ಸೆರೆಯಾಗಿದ್ದಾರೆ.
ಖ್ಯಾತ ಛಾಯಾಗ್ರಾಹಕ ರವಿ ಕೆ ಚಂದ್ರನ್ ಅವರು ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಅವರು ಅಮೀರ್ ಖಾನ್ ಮತ್ತು ಸೂರ್ಯ ಇಬ್ಬರನ್ನೂ ಒಳಗೊಂಡ ಸ್ಮರಣೀಯ ಸೆಲ್ಫಿಯನ್ನು ಹಂಚಿಕೊಂಡಿದ್ದಾರೆ. "ಕಮಲ್ ಹಾಸನ್ ಬರ್ತ್ಡೇ ಪಾರ್ಟಿಯಲ್ಲಿ ಒಂದೇ ಫ್ರೇಮ್ನಲ್ಲಿ ಎರಡು ಗಜಿನಿಗಳು" ಎಂದು ಕ್ಯಾಪ್ಶನ್ ನೀಡಿದ್ದಾರೆ. ಈ ಫೋಟೋವು 119.9K ವೀಕ್ಷಣೆಯನ್ನು ಪಡೆದಿದೆ. ಅಪರೂಪಕ್ಕೆ ಸ್ಟಾರ್ ನಟರಿಬ್ಬರು ಒಂದೇ ಫ್ರೇಮ್ನಲ್ಲಿ ಕಾಣಿಸಿಕೊಂಡಿದ್ದು, ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.