ವಿಕ್ರಾಂತ್ ರೋಣ ಕನ್ನಡ ಮಾತ್ರವಲ್ಲ ಭಾರತೀಯ ಸಿನಿಮಾ ರಂಗದಲ್ಲಿ ಅದ್ಧೂರಿ ಮೇಕಿಂಗ್ ಹಾಗು ಟ್ರೈಲರ್ನಿಂದ ಸುದ್ದಿಯಲ್ಲಿದೆ. ನಟ ಸುದೀಪ್ ಸೂಪರ್ ಕಾಪ್ ಪಾತ್ರದಲ್ಲಿ ಬೆಳ್ಳಿ ತೆರೆ ಮೇಲೆ ವಿಜೃಂಭಿಸಲು ರೆಡಿಯಾಗಿದ್ದಾರೆ. ಚಿತ್ರ ಬಿಡುಗಡೆಗೆ ಎರಡು ದಿನ ಬಾಕಿ ಇರುವಾಗಲೇ ವಿಕ್ರಾಂತ್‌ರೋಣ ಬಗ್ಗೆ ನಿರ್ಮಾಪಕರು ಸಾಕಷ್ಟು ವಿಚಾರಗಳನ್ನು ಹಂಚಿಕೊಂಡರು.
ನಿರ್ಮಾಪಕ ಜಾಕ್ ಮಂಜು ಹೇಳುವ ಹಾಗೆ, ಇದೇ ಮೊದಲ ಬಾರಿಗೆ ನಾಳೆ 27 ದೇಶಗಳಲ್ಲಿ ಸಿನೆಮಾ ಪ್ರೀಮಿಯರ್ ಶೋ ಆಗುತ್ತಿದೆ. ದುಬೈನಲ್ಲಿ 5 ಭಾಷೆಯಲ್ಲೂ ಪ್ರದರ್ಶನವಾಗಲಿದೆ. ನಿನ್ನೆಯಷ್ಟೇ ನೇಪಾಳ ಕನ್‌ಫರ್ಮ್ ಆಗಿದ್ದು, ಪಾಕಿಸ್ತಾನದಲ್ಲೂ ಚಿತ್ರ ರಿಲೀಸಾಗುವ ಸಾಧ್ಯತೆಯಿದೆ. ಒಟ್ಟಾರೆ ಪ್ರಪಂಚದಾದ್ಯಂತ 3,200ರಿಂದ 3500 ಚಿತ್ರಮಂದಿರಗಳಲ್ಲಿ ವಿಕ್ರಾಂತ್ ರೋಣ ರಿಲೀಸಾಗುತ್ತಿದೆ ಎಂದರು. ಶೇ 60 ರಷ್ಟು ತ್ರಿಡಿಯಲ್ಲಿ ವಿಕ್ರಾಂತ್ ರೋಣ ಬಿಡುಗಡೆ ಆಗುತ್ತಿದೆ. ತ್ರಿಡಿ ಇಲ್ಲದೆಡೆ ಮಾತ್ರವೇ 2ಡಿ ವರ್ಷನ್ ಪ್ರದರ್ಶನವಾಗಲಿದೆ ಎಂದು ಅವರು ಮಾಹಿತಿ ಒದಗಿಸಿದರು.
ನಿಮ್ಮಿಷ್ಟದ ಭಾಷೆಯಲ್ಲೇ ನೋಡುವ ಅವಕಾಶ:ಇತ್ತೀಚೆಗೆ ದುಬೈನಲ್ಲಿ ಚಿತ್ರದ ವರ್ಲ್ಡ್ ಪ್ರೀಮಿಯರ್ ಮುಗಿಸಿರುವ ಸಿನಿಮಾ ಇದೀಗ 'ಸಿನೆಬಡ್ಸ್' ಎಂಬ ಆ್ಯಪ್ ಮೂಲಕ ತಮಗಿಷ್ಟವಾದ ಭಾಷೆಗಳಲ್ಲಿ ಸಿನೆಮಾ ನೋಡುವ ಅವಕಾಶವನ್ನು ಪ್ರೇಕ್ಷಕರಿಗೆ ಕಲ್ಪಿಸುತ್ತಿದೆ.
ಈ ಬಗ್ಗೆ ಆ್ಯಪ್ ಹೊರತಂದಿರುವ ಆದಿತ್ಯ ಕಶ್ಯಪ್ ಮಾತನಾಡಿ, ಸಿನಿಬಡ್ಸ್ ಆ್ಯಪ್ ಅನ್ನು ವಿನೀತ್ ಕಶ್ಯಪ್ ಡೆವಲಪ್ ಮಾಡಿದ್ದು, ಪ್ಲೇಸ್ಟೋರ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡು ತೆರೆಮೇಲೆ ಸಿನಿಮಾ ಯಾವುದೇ ಭಾಷೆಯಲ್ಲಿ ಪ್ರದರ್ಶನವಾಗುತ್ತಿದ್ದರೂ, ನಾವು ಮೊಬೈಲ್ನಲ್ಲಿ ನಮ್ಮಿಷ್ಟದ ಭಾಷೆ ಆಯ್ಕೆ ಮಾಡಿಕೊಂಡು ಚಿತ್ರ ಎಂಜಾಯ್ ಮಾಡಬಹುದು. ಕಳೆದ ವಾರ ರಿಲೀಸಾದ ತಮಿಳಿನ ರಾಕೆಟ್ರಿ ಚಿತ್ರದ ಜೊತೆ ನಾವು ಟೈಅಪ್ ಆಗಿದ್ದು, ಅದಕ್ಕೆ ಉತ್ತಮ ಪ್ರತಿಕ್ರಿಯೆ ದೊರಕಿದೆ. ಇದಲ್ಲದೆ ಓಟಿಟಿಯಲ್ಲಿ ಬರುವ ಚಿತ್ರಗಳನ್ನೂ ನಮ್ಮ ಭಾಷೆಯಲ್ಲೇ ವೀಕ್ಷಿಸಬಹುದು ಎಂದರು.
ನಿರ್ಮಾಪಕ ಜಾಕ್ ಮಂಜು ಮಾತನಾಡಿ, ಇವರು ಒಂದೆರಡು ತಿಂಗಳ ಹಿಂದೆಯೇ ನನ್ನಬಳಿ ಬಂದಿದ್ದರೆ ಬೆಂಗಾಳಿ, ಮರಾಠಿ, ಗುಜರಾತಿ ಭಾಷೆಯಲ್ಲೂ ನಮ್ಮ ಚಿತ್ರವನ್ನು ಡಬ್ ಮಾಡಬಹುದಿತ್ತು. ನಾವು ಡಬ್ ಮಾಡಿದ ಅಷ್ಟೂ ಭಾಷೆಯ ಸೌಂಡ್‌ಟ್ರ‍್ಯಾಕನ್ನು ಇವರಿಗೆ ಕೊಡುತ್ತೇವೆ. ಅವರು ಅದನ್ನು ತಮ್ಮ ಆ್ಯಪ್‌ಗೆ ಅಳವಡಿಸುತ್ತಾರೆ. ಕೆಲ ಕೇಂದ್ರಗಳಲ್ಲಿ ಎಲ್ಲಾ ಭಾಷೆಯಲ್ಲಿ ರಿಲೀಸ್ ಮಾಡಲು ಸಾಧ್ಯವಾಗದಿದ್ದಾಗ ಆ ಭಾಷೆಯ ಜನರಿಗೆ ಇದರಿಂದ ಅನುಕೂಲವಾಗುತ್ತದೆ. ಇದು ಚಿತ್ರದ ಯಾವುದೇ ಕಂಟೆಂಟನ್ನು ಕಾಪಿ ಮಾಡಲ್ಲ, ಇದೆಲ್ಲ ತಿಳಿದುಕೊಂಡೇ ನಾವು ಮುಂದುವರೆಯುತ್ತಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ:ಸೌತ್ v/s ಬಾಲಿವುಡ್: ವಿಕ್ರಾಂತ್ ರೋಣ ಸಮಾರಂಭದಲ್ಲಿ ಸುದೀಪ್, ಸಲ್ಮಾನ್ ಮಾತನಾಡಿದ್ದೇನು?