ಬೆಂಗಳೂರು:ಕನ್ನಡ ಚಿತ್ರರಂಗವಲ್ಲದೇ ಭಾರತೀಯ ಸಿನಿಮಾ ರಂಗದ ಬಹುನಿರೀಕ್ಷಿತ ಸಿನಿಮಾ 'ವಿಕ್ರಾಂತ್ ರೋಣ'. ಕಿಚ್ಚ ಸುದೀಪ್ ಡೇರಿಂಗ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 'ರಾ ರಾ ರಕ್ಕಮ್ಮ..' ಹಾಡಿನ ಮುಖಾಂತರ ಚಿತ್ರ ಭಾರಿ ಸುದ್ದಿಯಲ್ಲಿದೆ. ವಿಕ್ರಾಂತ್ ರೋಣ ಟ್ರೈಲರ್ ನಾಳೆ ಸಂಜೆ 5 ಗಂಟೆಗೆ ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಹಿಂದಿ ಹಾಗು ಇಂಗ್ಲಿಷ್‌ನಲ್ಲಿ ಬಿಡುಗಡೆ ಆಗಲಿದೆ.
ಇದಕ್ಕೂ ಮುನ್ನ ಇಂದು ಸಿನಿಮಾದ ತ್ರಿಡಿ ಟ್ರೈಲರ್ ಅನ್ನು ಒರಾಯನ್ ಮಾಲ್ನಲ್ಲಿ ಅನಾವರಣ ಮಾಡಲಾಯಿತು. ಕಾರ್ಯಕ್ರಮಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಕ್ರೇಜಿಸ್ಟಾರ್ ರವಿಚಂದ್ರನ್, ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್, ರಮೇಶ್ ಅರವಿಂದ್, ಧನಂಜಯ್, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ಸೃಜನ್ ಲೋಕೇಶ್, ರಾಜ್ ಬಿ.ಶೆಟ್ಟಿ, ನಿರ್ದೇಶಕ ಇಂದ್ರಜಿತ್ ಲಂಕೇಶ್, ಯೋಗರಾಜ್ ಭಟ್ ಸೇರಿದಂತೆ ಇಡೀ ವಿಕ್ರಾಂತ್ ರೋಣ ಚಿತ್ರತಂಡ ಸಾಕ್ಷಿಯಾದರು.
ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಬಂದಿದ್ದ ಶಿವರಾಜ್ ಕುಮಾರ್ ತ್ರಿಡಿ ಟ್ರೈಲರ್ ನೋಡಿ ಸಖತ್ ಥ್ರಿಲ್ ಆದರು. "ಸುದೀಪ್ ನಮ್ಮ ಸಹೋದರ ಇದ್ದಂತೆ. ಅವರಿಗೆ ಸಿನಿಮಾ ಬಗ್ಗೆ ಹೆಚ್ಚು ವ್ಯಾಮೋಹ ಇದೆ ಅನ್ನೋದನ್ನು ನಾನು ಶಾಂತಿ ನಿವಾಸ ಸಿನಿಮಾದ ಟೈಮ್‌ನಲ್ಲೇ ನೋಡಿದ್ದೀನಿ" ಎಂದರು.