ಕನ್ನಡ ಚಿತ್ರರಂಗದ ಕನಸುಗಾರ ರವಿಚಂದ್ರನ್ ದ್ವಿತೀಯ ಪುತ್ರ ವಿಕ್ರಮ್ ರವಿಚಂದ್ರನ್ ಅವರ ಮುಂದಿನ ಸಿನಿಮಾ ಕುರಿತು ಹಲವು ಪ್ರಶ್ನೆಗಳು ಅಭಿಮಾನಿಗಳಲ್ಲಿದ್ದವು. 'ತ್ರಿವಿಕ್ರಮ' ಸಿನಿಮಾ ಆದ ಬಳಿಕ ವಿಕ್ರಮ್ ರವಿಚಂದ್ರನ್ ಏನು ಮಾಡುತ್ತಿದ್ದಾರೆ ಅನ್ನೋ ಪ್ರಶ್ನೆ ಅವರ ಅಭಿಮಾನಿಗಳು ಹಾಗೂ ಗಾಂಧಿನಗರದಲ್ಲಿ ಎದ್ದಿದೆ. ಇದೀಗ ಆ ಪ್ರಶ್ನೆಗೆ ಮರಿ ರಣಧೀರ ಉತ್ತರ ಕೊಟ್ಟಿದ್ದಾರೆ.
ನಟ ವಿಕ್ರಮ್ ಅವರ ಎರಡನೇ ಸಿನಿಮಾ ಅನೌನ್ಸ್ ಆಗಿದೆ. 'ಮಧೋಳ್' ಎಂಬ ಕ್ಯಾಚಿ ಟೈಟಲ್ ಮೂಲಕ ಗಮನ ಸೆಳೆಯುತ್ತಿದ್ದಾರೆ. ಬೆಂಗಳೂರಿನ ನವರಂಗ ಚಿತ್ರಮಂದಿರದಲ್ಲಿ ಅಭಿಮಾನಿಗಳ ನಡುವೆ ವಿಕ್ರಮ್ ಮತ್ತು ಚಿತ್ರತಂಡ ತಮ್ಮ ಹೊಸ ಚಿತ್ರದ ಶೀರ್ಷಿಕೆ ಬಿಡುಗಡೆಗೊಳಿಸಿದರು.
ಟೈಟಲ್ ಟೀಸರ್ ಮೂಲಕ ಎಂಟ್ರಿ ಕೊಟ್ಟ ವಿಕ್ರಮ್ ರವಿಚಂದ್ರನ್ ಕಂಪ್ಲೀಟ್ ಗ್ಯಾಂಗ್ಸ್ಟರ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಪುತ್ರನ ಚಿತ್ರಕ್ಕೆ 'ಮುಧೋಳ್' ಎಂಬ ಟೈಟಲ್ ಕೊಟ್ಟಿದ್ದೇ ಕ್ರೇಜಿಸ್ಟಾರ್ ರವಿಚಂದ್ರನ್. ತ್ರಿವಿಕ್ರಮ ಸಿನಿಮಾ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿರುವ ವಿಕ್ರಮ್ ಈ ಬಾರಿ ಗ್ಯಾಂಗ್ಸ್ಟರ್ ಸಬ್ಜೆಕ್ಟ್ ಮೂಲಕ ಸಿನಿರಸಿಕರನ್ನು ರಂಜಿಸಲು ರೆಡಿಯಾಗಿದ್ದಾರೆ.
ತಮ್ಮ ಚಿತ್ರದ ಬಗ್ಗೆ ಮಾತು ಶುರು ಮಾಡಿದ ವಿಕ್ರಮ್ ರವಿಚಂದ್ರನ್, ತ್ರಿವಿಕ್ರಮ ರಿಲೀಸ್ ಆಗಿದ್ದು 2022ರ ಜೂನ್ 24. ಏಪ್ರಿಲ್ 26 ಅಂದ್ರೆ ಇಂದು ನನ್ನ ಎರಡನೇ ಸಿನಿಮಾದ ಟೈಟಲ್ ಲಾಂಚ್ ಮಾಡುತ್ತಿದ್ದೇವೆ. ಬಹಳ ಮಂದಿ ವಿಕೆಆರ್ ಅಂದ್ರೇನು ಅಂತಾ ಕೇಳುತ್ತಿದ್ರು. ವಿಕೆಆರ್ ವಿಕ್ರಮ್ ರವಿಚಂದ್ರನ್ ಅನ್ನೋದು ಕೆಲವರಿಗೆ ಗೊತ್ತಿದೆ. ಸಿನಿ ರಂಗದಲ್ಲಿ ವಿಕೆಆರ್ಕೆ ಬ್ರ್ಯಾಂಡ್, ವಿಕೆಆರ್ಕೆ ಅನ್ನು ಜನಪ್ರಿಯಗೊಳಿಸಬೇಕು ಅನ್ನೋ ಮನಸ್ಸಿದೆ. ವಿಕೆಆರ್ = ವಿಕ್ರಮ್ ರವಿಚಂದ್ರನ್, ಕೆ = ಕನ್ನಡ. ಪ್ರಯತ್ನ ಅನ್ನೋದು ನಿರಂತರ. ಪ್ರಯತ್ನ ಮಾಡಿ ಜೀವನವನ್ನೇ ಗೆಲ್ಲಬಹುದು. ಆ ರೀತಿ ಒಂದು ತಂಡ ನಿಮ್ಮ ಮುಂದೆ ಇದೆ ಎಂದರು.