ದಕ್ಷಿಣ ಚಿತ್ರರಂಗದ ಸೂಪರ್ ಸ್ಟಾರ್ ಚಿಯಾನ್ ವಿಕ್ರಮ್ (Chiyaan Vikram) ಮತ್ತು ನಿರ್ದೇಶಕ ಜೂಡ್ ಆ್ಯಂಥನಿ ಜೋಸೆಫ್ (Jude Anthany Joseph) ಕಾಂಬೋದಲ್ಲಿ ಸಿನಿಮಾವೊಂದು ಮೂಡಿಬರಲಿದೆ ಎಂದು ವರದಿಯಾಗಿದೆ. ಈ ಚಿತ್ರ ಪ್ರೀ ಪ್ರೊಡಕ್ಷನ್ ಹಂತದಲ್ಲಿದೆ ಎಂಬ ಮಾಹಿತಿ ಇದೆ.
ಜೂಡ್ ಆ್ಯಂಥನಿ ಜೋಸೆಫ್ ವಿಭಿನ್ನ ಕಥೆ ಮತ್ತು ನಿರ್ದೇಶನಕ್ಕೆ ಹೆಸರುವಾಸಿಯಾದವರು. ಈ ನಿರ್ದೇಶಕರ ಕೊನೆಯ ಸಿನಿಮಾ 2018ರಲ್ಲಿ ತೆರೆಕಂಡ 'ಎವ್ರಿಒನ್ ಈಸ್ ಆ ಹೀರೋ'. ಇದು ಕೇರಳ ಫ್ಲಡ್ ಕುರಿತಾಗಿತ್ತು. ಸಿನಿಮಾ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ಸೆಳೆದಿದ್ದು ಮಾತ್ರವಲ್ಲ, ಅತಿ ಹೆಚ್ಚು ಗಳಿಕೆ ಮಾಡಿದ ಮಲಯಾಳಂ ಚಿತ್ರವಾಗಿಯೂ ಹೊರಹೊಮ್ಮಿತು.
ದಕ್ಷಿಣ ಚಿತ್ರರಂಗದ ಬಹುಬೇಡಿಕೆಯ ನಟ ಚಿಯಾನ್ ವಿಕ್ರಮ್ ಬಗ್ಗೆ ವಿಶೇಷ ಪರಿಚಯ ಬೇಕಿನಿಸದು. ಯಶಸ್ವಿ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ವಿಕ್ರಮ್ ಮತ್ತು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ಜೂಡ್ ಆ್ಯಂಥನಿ ಜೋಸೆಫ್ ಕಾಂಬಿನೇಶನ್ನಲ್ಲಿ ಸಿನಿಮಾ ಬರಲಿದೆ ಅಂದ್ರೆ ಅಭಿಮಾನಿಗಳ ನಿರೀಕ್ಷೆ ಕೊಂಚ ಹೆಚ್ಚೇ ಇರುತ್ತೆ ಅಲ್ವೇ?.
ಬಿಗ್ ಸ್ಟಾರ್ಗಳನ್ನು ಒಳಗೊಂಡು, ಬಿಗ್ ಬಜೆಟ್ನಲ್ಲಿ ಸಿನಿಮಾ ಮಾಡಲಾಗುವುದು ಎಂದು ವರದಿಗಳು ಸೂಚಿಸಿರುವುದರಿಂದ ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ. ಚಿತ್ರದ ಸುತ್ತ ಇರುವ ಊಹಾಪೋಹಗಳು ನಿಜವೇ ಆದರೆ, ವಿಕ್ರಮ್ ಜೊತೆ 'ನ್ಯಾಶನಲ್ ಕ್ರಶ್' ಖ್ಯಾತಿಯ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ, ದಕ್ಷಿಣ ಚಿತ್ರರಂಗದ ಹೆಸರಾಂತ ನಟ ವಿಜಯ್ ಸೇತುಪತಿ ಕೂಡ ಕಾಣಿಸಿಕೊಳ್ಳುವರು. ಸಿನಿಮಾ ಬಹುತಾರೆಯರನ್ನು ಒಳಗೊಂಡರೆ ನಿಸ್ಸಂದೇಹವಾಗಿ ವೀಕ್ಷಕರ ಮನ ಗೆಲ್ಲಲಿದೆ. ಪಾತ್ರಧಾರಿಗಳನ್ನು ಇನ್ನೂ ಅಂತಿಮವಾಗಿ ದೃಢಪಡಿಸದಿದ್ದರೂ, ವಿಜಯ್ ಮತ್ತು ಮಂದಣ್ಣ ಅವರ ಜೊತೆ ಚರ್ಚೆ ನಡೆಯುತ್ತಿದೆ ಎಂದು ವರದಿಯಾಗಿದೆ. ಈ ಸಂಭಾವ್ಯ ಕಾಂಬಿನೇಶನ್ ಬಗ್ಗೆ ಪ್ರೇಕ್ಷಕರು ಕುತೂಹಲ ಹೊಂದಿದ್ದಾರೆ.