ಚಂದನವನದ ರಾಜಕುಮಾರ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ಹಾದಿಯಲ್ಲೇ ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಸಾಗುತ್ತಿದ್ದಾರೆ. ಹೊಸ ಪ್ರತಿಭೆಗಳ ಸಿನಿಮಾ ನಿರ್ಮಾಣ, ಯುವ ನಟರ ಹಾಗೂ ಯುವ ನಿರ್ದೇಶಕರ ಸಿನಿಮಾಗಳ ಆಡಿಯೋ ಬಿಡುಗಡೆ, ಪೋಸ್ಟರ್ ಅನಾವರಣ, ಸಿನಿಮಾ ಮುಹೂರ್ತಗಳಿಗೆ ಸದಾ ಪ್ರೋತ್ಸಾಹ ನೀಡುತ್ತಿದ್ದಾರೆ. ಅದರಂತೆ ಇದೀಗ ಅಶ್ವಿನಿ ಪುನೀತ್ ರಾಜ್‍ಕುಮಾರ್ ಪ್ರಸಿದ್ಧ ವಿಜಯ ಕರದಂಟು ಮಳಿಗೆಯೊಂದಕ್ಕೆ ಚಾಲನೆ ನೀಡಿದ್ದಾರೆ.
ಹೌದು. ಅಮೀನಗಡದ ಜನಪ್ರಿಯ ವಿಜಯ ಕರಗಂಟು ಸಂಸ್ಥೆಯ ಐದನೇ ಮಳಿಗೆ ಇಂದು ಮಲ್ಲೇಶ್ವರದಲ್ಲಿ ಪ್ರಾರಂಭವಾಗಿದೆ. ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಈ ಮಳಿಗೆಯನ್ನು ಉದ್ಘಾಟಿಸಿದ್ದಾರೆ. 1907 ರಲ್ಲಿ ಅಮೀನಗಡದಲ್ಲಿ ಪ್ರಾರಂಭವಾದ ವಿಜಯ ಕರದಂಟು ರಾಜ್ಯಾದ್ಯಂತ 18 ಶಾಖೆಗಳನ್ನು ಹೊಂದಿದೆ. ಬಾದಾಮಿ, ಐಹೊಳೆ, ಬಾಗಲಕೋಟೆ, ರಾಯಚೂರು, ಸಿಂಧನೂರು, ಇಳಕಲ್ಲು, ಹುಬ್ಬಳ್ಳಿ, ಬೆಂಗಳೂರು ಮುಂತಾದ ಊರುಗಳಲ್ಲಿವೆ.
ಬೆಂಗಳೂರಿನಲ್ಲೇ ವಿಜಯನಗರ, ಜಯನಗರ, ಡಿ.ವಿ.ಜಿ. ರಸ್ತೆ ಮತ್ತು ಮಲ್ಲೇಶ್ವರಂನಲ್ಲಿ ಮಳಿಗೆಗಳಿದ್ದು, ಈ ಸಂಸ್ಥೆಯನ್ನು ಕುಟುಂಬದ ನಾಲ್ಕನೇ ತಲೆಮಾರಿನವರಾದ ಸಂತೋಷ್ ಮತ್ತು ಸುನೀಲ್ ಮುನ್ನಡೆಸುತ್ತಿದ್ದಾರೆ. ಪೌಷ್ಠಿಕ ಸಿಹಿ ತಿನಿಸು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕರದಂಟಿಗೆ ಶುದ್ಧ ತುಪ್ಪ, ಸಾವಯವ ಬೆಲ್ಲ, ಗೋಡಂಬಿ, ಬಾದಾಮಿ, ಅಂಜೂರ, ಒಣಕೊಬ್ಬರಿ, ಗಸಗಸೆ, ಒಣದ್ರಾಕ್ಷಿ ಮುಂತಾದ ಪೌಷ್ಠಿಕ ಪದಾರ್ಥಗಳನ್ನು ಬೆರೆಸಿ ಮಾಡಲಾಗುತ್ತದೆ. ಹಿಂದೆ ಗರಡಿ ಮನೆ ಪೈಲ್ವಾನರ ಶಕ್ತಿ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕರದಂಟನ್ನು ನೀಡಲಾಗುತ್ತಿತ್ತು.
ಇದನ್ನೂ ಓದಿ:ಸೆಲೀನ ಗೊಮೆಜ್‌ಗೆ 400 ಮಿಲಿಯನ್ ಇನ್‌ಸ್ಟಾಗ್ರಾಮ್ ಫಾಲೋವರ್ಸ್! ಈ ಸಾಧನೆ ಮಾಡಿದ ಮೊದಲ ಮಹಿಳೆ