ನಟ ವಿಜಯ್ ವರ್ಮಾ ಅವರ ಮುಂಬರುವ ಚಿತ್ರ 'ಜಾನೆ ಜಾನ್' ಬಿಡುಗಡೆಗೆ ಸಜ್ಜಾಗುತ್ತಿದೆ. ಜೈದೀಪ್ ಅಹ್ಲಾವತ್ ಮತ್ತು ಕರೀನಾ ಕಪೂರ್ ಖಾನ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರದ ಪ್ರಚಾರದಲ್ಲಿ ವಿಜಯ್ ನಿರತರಾಗಿದ್ದಾರೆ. ಇವರಿಗೆ ಎಲ್ಲೇ ಹೋದರೂ ತಮನ್ನಾ ಭಾಟಿಯಾ ಜೊತೆಗಿನ ಪ್ರೀತಿ ಬಗೆಗಿನ ಪ್ರಶ್ನೆಗಳೇ ಎದುರಾಗುತ್ತದೆ. ಈ ಸಂದರ್ಭದಲ್ಲಿ ತಮ್ಮ ಅಮೂಲ್ಯ ಪ್ರೀತಿಯ ಬಗ್ಗೆ ಮಾತನಾಡಲು ಅವರೆಂದೂ ಹಿಂದೆ ಸರಿಯುವುದಿಲ್ಲ. ಇತ್ತೀಚೆಗಿನ ಸಂದರ್ಶನದಲ್ಲೂ ವಿಜಯ್ ತಮ್ಮ 'ಪ್ರೀತಿ'ಯನ್ನು ಅಭಿಮಾನಿಗಳ ಮುಂದೆ ತೆರೆದಿಟ್ಟರು.
ಟಾಲಿವುಡ್ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ಸಿನಿ ವಲಯದಲ್ಲಿ ಪ್ರೇಮಪಕ್ಷಿಗಳಾಗಿ ಗುರುತಿಸಿಕೊಂಡಿದ್ದಾರೆ. ಕಳೆದ ಡಿಸೆಂಬರ್ನಿಂದ ಈ ಜೋಡಿಯ ಪ್ರೇಮಪುರಾಣ ಇಂಟರ್ನೆಟ್ನಲ್ಲಿ ಜೋರಾಗೇ ಸದ್ದು ಮಾಡಿದೆ. ಲಸ್ಟ್ ಸ್ಟೋರಿಸ್ 2ರ ಪ್ರಚಾರ ಸಂದರ್ಭದಲ್ಲಿ ತಮ್ಮ ಪ್ರೇಮಸಂಬಂಧವನ್ನು ಅಧಿಕೃತಗೊಳಿಸಿದರು. ಅಂದಿನಿಂದ ಹಲವು ಬಾರಿ ಈವೆಂಟ್ಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇವರಿಬ್ಬರು ತಮ್ಮ ಪ್ರೀತಿಯ ಬಗ್ಗೆ ಪದೇ ಪದೇ ಮಾತನಾಡುತ್ತಾರೆ.
ವಿಜಯ್ ವರ್ಮಾ ಅವರು ಇತ್ತೀಚೆಗೆ ದೇಸಿ ವೈಬ್ಸ್ ಟಾಕ್ ಶೋನಲ್ಲಿ ಶೆಹನಾಜ್ ಗಿಲ್ ಅವರೊಂದಿಗೆ ತಮ್ಮ ಮುಂಬರುವ ಚಿತ್ರ ಜಾನೆ ಜಾನ್ ಪ್ರಚಾರಕ್ಕಾಗಿ ಕಾಣಿಸಿಕೊಂಡರು. ಕರೀನಾ ಕಪೂರ್ ಜೊತೆಗೆ ತೆರೆ ಹಂಚಿಕೊಂಡಿರುವ ಬಗ್ಗೆಯೂ ಅನುಭವ ಹಂಚಿಕೊಂಡರು. ಅದರ ಹೊರತಾಗಿ ವೈಯಕ್ತಿಕ ವಿಚಾರದ ಬಗ್ಗೆ ಮಾತನಾಡಿದರು. ಅವರು ತಮನ್ನಾ ಜೊತೆಗಿನ ಸಂಬಂಧ ಅಧಿಕೃತಗೊಳಿಸಿದಾಗಿನಿಂದ ವೈಯಕ್ತಿಕ ವಿಚಾರಗಳು ಅವರ ಸಿನಿಮಾ ಪ್ರಚಾರದ ಭಾಗವಾಗಿದೆ.