ಕಿರುತೆರೆ ಕಲಾವಿದರು ಬೆಳ್ಳಿ ತೆರೆ ಮೇಲೆ ಮಿಂಚೋದೇನು ಹೊಸತಲ್ಲ. ಈಗಾಗಲೇ ಸಾಕಷ್ಟು ಸೀರಿಯಲ್ ತಾರೆಯರು ಬಿಗ್ ಸ್ಕ್ರೀನ್ನಲ್ಲಿ ಕಾಣಿಸಿಕೊಂಡು ಸಕ್ಸಸ್ ಸ್ಟಾರ್ಗಳಾಗಿ ಬೆಳೆಯುತ್ತಿದ್ದಾರೆ. ಅವರಲ್ಲಿ ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಖ್ಯಾತಿ ಗಳಿಸಿದ್ದ ಸಿದ್ದಾರ್ಥ್ ಪಾತ್ರಧಾರಿ ವಿಜಯ್ ಸೂರ್ಯ ಕೂಡ ಒಬ್ಬರು. 'ಇಷ್ಟಕಾಮ್ಯ' ಸಿನಿಮಾ ಮೂಲಕ ಕಿರುತೆರೆಯಿಂದ ಹಿರಿತೆರೆಗೆ ಜಂಪ್ ಹೊಡೆದ ಹೀರೋ ಸದ್ಯ 'ವೀರಪುತ್ರ'ನಾಗಿ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ.
ನಿನ್ನೆ ವಿಜಯ್ ಸೂರ್ಯ ಹುಟ್ಟುಹಬ್ಬ. ಈ ನಿಮಿತ್ತ ಅವರ ಹೊಸ ಸಿನಿಮಾ 'ವೀರಪುತ್ರ' ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ. ಉದ್ದ ಕೂದಲು ಬಿಟ್ಟು, ರಗಡ್ ಅವತಾರದಲ್ಲಿ ಡಿಂಪಲ್ ಬಾಯ್ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ವಿಜಯ್ ಸೂರ್ಯಗೆ ಜೋಡಿಯಾಗಿ ಲೇಖಚಂದ್ರ ನಟಿಸಿದ್ದು, ಮುಖ್ಯಭೂಮಿಕೆಯಲ್ಲಿ ಹಿರಿಯ ನಟಿ ಉಮಾಶ್ರೀ ಕಾಣಿಸಿಕೊಂಡಿದ್ದಾರೆ.
ದೇವರಾಜ್ ನಿರ್ದೇಶನದ ಎರಡನೇ ಚಿತ್ರ: 'ವೀರಪುತ್ರ' ಸಿನಿಮಾಗೆ ಡಾ.ದೇವರಾಜ್.ಎಸ್ ಆಕ್ಷನ್ ಕಟ್ ಹೇಳಿದ್ದಾರೆ. ಇದು ಅವರ ಎರಡನೇ ಹೆಜ್ಜೆ. ಈ ಹಿಂದೆ ದೇವರಾಜ್ 'ಸಪ್ಲಿಮೆಂಟರಿ' ಎಂಬ ಚಿತ್ರವನ್ನು ನಿರ್ದೇಶಿಸಿದ್ದರು. ಮೆಡಿಕಲ್ ಮಾಫಿಯಾ ಮತ್ತು ಫ್ಯಾಮಿಲಿ ರಿವೇಂಜ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶನದ ಜೊತೆಗೆ ದೇವರಾಜ್ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. 'ಸಪ್ಲಿಮೆಂಟರಿ', 'ಧೀರಸಾಮ್ರಾಟ್' ಸಿನಿಮಾಗಳನ್ನು ನಿರ್ಮಿಸಿದ್ದ ಗುರು ಬಂಡಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.