ಚಂದನವನದಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳ ಜೊತೆಗೆ ವಿಭಿನ್ನ ಹಾಗೂ ಪ್ರಯೋಗಾತ್ಮಕ ಚಿತ್ರಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಇದೇ ಸಾಲಿಗೆ ಒಂದಿಷ್ಟು ಕೌತುಕಗಳನ್ನು ತನ್ನ ಒಡಲಿನಲ್ಲಿ ಇಟ್ಟುಕೊಂಡಿರುವ 'ರಾಘು' ಸಿನಿಮಾ ಕೂಡ ಸೇರಿದ್ದು ಬಿಡುಗಡೆ ಹೊಸ್ತಿಲಿನಲ್ಲಿ ನಿಂತಿದೆ. ಚಿನ್ನಾರಿ ಮುತ್ತ ವಿಜಯ ರಾಘವೇಂದ್ರ ಅಭಿನಯದ 'ರಾಘು' ಚಿತ್ರದ ಟ್ರೇಲರ್ ಇತ್ತೀಚೆಗೆ ಅನಾವರಣಗೊಂಡಿದೆ. ಯುವ ನಿರ್ದೇಶಕ ಎಂ.ಆನಂದ್ ರಾಜ್ ನಿರ್ದೇಶನದಲ್ಲಿ ಮೂಡಿಬಂದಿರುವ 'ರಾಘು' ಸಿನಿಮಾ ಕನ್ನಡದ ಮಟ್ಟಿಗೆ ಪ್ರಯೋಗಾತ್ಮಕ ಚಿತ್ರವಾಗಿದೆ.
ವಿಭಿನ್ನ ಕಂಟೆಂಟ್ ಜೊತೆಗೆ ಥ್ರಿಲ್ ನೀಡುವ ಚಿತ್ರದಲ್ಲಿ ವಿಜಯ ರಾಘವೇಂದ್ರ ಒಬ್ಬರೇ ಇರಲಿದ್ದಾರೆ. 'ರಾಘು' ಟ್ರೇಲರ್ಗೆ ಶಿವಣ್ಣನ ಪವರ್ಫುಲ್ ವಾಯ್ಸ್ ಸಿಕ್ಕಿದ್ದು, ಚಿತ್ರದ ಖದರ್ ಮತ್ತಷ್ಟು ಹೆಚ್ಚಿದೆ. "ಜೀವನದ ದಾರಿಯಲ್ಲಿ ಕಷ್ಟ ಎಂಬ ಗುಡಿಗಳಿರುತ್ತದೆ. ಆದರೆ ಇವನ ದಾರಿಯಲ್ಲಿ ಆಪತ್ತು ಎಂಬ ಅಡ್ಡ ಗೋಡೆ ನಿಂತಿತ್ತು" ಎಂಬ ಪಂಚಿಂಗ್ ಡೈಲಾಗ್ ಮೂಲಕ 'ರಾಘು' ಟ್ರೇಲರ್ ತೆರೆದುಕೊಳ್ಳುತ್ತದೆ. ಶಿವಣ್ಣನ ವಾಯ್ಸ್, ವಿಜಯ ರಾಘವೇಂದ್ರ ಆ್ಯಕ್ಟಿಂಗ್, ಉದಯ್ ಲೀಲಾ ಛಾಯಾಗ್ರಹಣ, ಸೂರಜ್ ಜೋಯಿಸ್ ಸಂಗೀತ ನೋಡುಗರ ಗಮನ ಸೆಳೆಯುತ್ತಿದೆ.
ಟ್ರೇಲರ್ ರಿಲೀಸ್ ಬಳಿಕ ಮಾತನಾಡಿದ ವಿಜಯ ರಾಘವೇಂದ್ರ, "ರಾಘು ಸಿನಿಮಾ ಬಗ್ಗೆ ಮಾತನಾಡಲು ತುಂಬಾ ಅಂಶವಿದೆ. ಸಿನಿಮಾ ಹಿಂದೆ ಪಟ್ಟಿರುವ ಶ್ರಮ ಬಹಳಷ್ಟಿದೆ. ಚಿತ್ರವು ಇದೇ 28ರಂದು ರಿಲೀಸ್ ಆಗುತ್ತಿದೆ. ಸಿನಿಮಾದ ಟ್ರೇಲರ್, ಸಾಂಗ್ ಬಗ್ಗೆ ಮಾತನಾಡಲು ಚಿತ್ರ ಬಿಡುಗಡೆಯಾಗಬೇಕು. ಜನ ಸಿನಿಮಾ ನೋಡಬೇಕು. ಈಗ ಒಂದು ಹಿತವಾದ ಗೊಂದಲವಿದೆ. ಅದು ನಮ್ಮ 'ರಾಘು' ಸಿನಿಮಾದ ಬಲ. ಇದು ಸೋಲೋ ಆಕ್ಟರ್ ಚಿತ್ರವಾಗಿದ್ದು, ಒಬ್ಬನೇ ಕಲಾವಿದ ಇಡೀ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ" ಎಂದರು.