ಕರ್ನಾಟಕ

karnataka

ವಿಜಯ್ ಪ್ರಕಾಶ್ ಕಂಠಸಿರಿಯಲ್ಲಿ ಮೂಡಿಬಂತು ಜಲಪಾತ ಸಿನಿಮಾ ಸಾಂಗ್​

By ETV Bharat Karnataka Team

Published : Aug 30, 2023, 2:48 PM IST

ವಿಜಯ್ ಪ್ರಕಾಶ್ ಅವರ ಕಂಠಸಿರಿಯಲ್ಲಿ ಜಲಪಾತ ಸಿನಿಮಾದ "ಎದೆಯ ದನಿಯ ಹಾಡು ಕೇಳು" ಎಂಬ ಹಾಡು ಮೂಡಿ ಬಂದಿದೆ.

Vijay prakash song for jalapatha movie
ಜಲಪಾತ ಸಿನಿಮಾ

ಕನ್ನಡ ಚಿತ್ರರಂಗಕ್ಕೆ ದಿನೇ ದಿನೆ ಹೊಸ ಪ್ರತಿಭೆಗಳ ಆಗಮನವಾಗುತ್ತಿದೆ. ಇದೀಗ ಯುವ ನಟ ರಜನೀಶ್ ಹಾಗೂ ನಟಿ ನಾಗಶ್ರೀ ಬೇಗಾರ್ ಎಂಬುವರು 'ಜಲಪಾತ' ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ‌‌‌ ಕೊಡಲು ಸಜ್ಜಾಗುತ್ತಿದ್ದಾರೆ‌. ರಮೇಶ್ ಬೇಗಾರ್ ಆ್ಯಕ್ಷನ್​ ಕಟ್​ ಹೇಳುತ್ತಿರುವ ಜಲಪಾತ ಸಿನಿಮಾ ಹಾಡೊಂದು ಅನಾವರಣಗೊಂಡಿದೆ.

ನಿರ್ದೇಶಕ ರಮೇಶ್ ಬೇಗಾರ್ ಅವರೇ ಬರೆದಿರುವ "ಎದೆಯ ದನಿಯ ಹಾಡು ಕೇಳು" ಎಂಬ ಪರಿಸರ ಕಾಳಜಿ ಕುರಿತಾದ ಹಾಡು ಇತ್ತೀಚೆಗೆ ಎ2 ಮ್ಯೂಸಿಕ್​​ (A2 music) ಮೂಲಕ ಬಿಡುಗಡೆ ಆಯಿತು. ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರ ಕಂಠಸಿರಿಯಲ್ಲಿ ಮೂಡಿಬಂದಿರುವ ಈ ಹಾಡಿಗೆ ಸಾದ್ವಿನಿ ಕೊಪ್ಪ ಸಂಗೀತ ನೀಡಿದ್ದಾರೆ. ಗಾಯಕಿಯಾಗಿ ಜನಪ್ರಿಯರಾಗಿರುವ ಸಾದ್ವಿನಿ, ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕಿ ಆಗಿದ್ದಾರೆ. ಗಾಯಕ ನಗರ ಶ್ರೀನಿವಾಸ ಉಡುಪ ಈ ಹಾಡನ್ನು ಬಿಡುಗಡೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.

ಜಲಪಾತ ಸಿನಿಮಾ ತಂಡ

ನಿರ್ದೇಶಕ ರಮೇಶ್ ಬೇಗಾರ್ ಮಾತನಾಡಿ, ಜಲಪಾತ ನನ್ನ ಎರಡನೇ ನಿರ್ದೇಶನದ ಚಿತ್ರ. ಪರಿಸರದ ಕುರಿತು ಜಾಗೃತಿ ಮೂಡಿಸುವ ಹಾಡುಗಳು ಸಾಕಷ್ಟು ಬಂದಿವೆ. ಆದರೆ ಈ ಹಾಡು ಸ್ವಲ್ಪ ವಿಭಿನ್ನ. ಮೊದಲ ನುಡಿಯಲ್ಲಿ ಪರಿಸರ ನಮಗೆ ಏನೆಲ್ಲಾ ನೀಡಿದೆ ಎಂಬುದು ಇದೆ. ಎರಡನೇ ನುಡಿಯಲ್ಲಿ ನಮ್ಮಿಂದ ಪರಿಸರಕ್ಕೆ ಏನಾಗುತ್ತಿದೆ ಎಂಬುದಿದೆ. ಜನಪ್ರಿಯ ಗ್ರಾಯಕ ವಿಜಯ್ ಪ್ರಕಾಶ್ ಅವರ ಕಂಠದಲ್ಲಿ ಈ ಹಾಡನ್ನು ಕೇಳುವುದೇ ಸೊಗಸು. ಅಷ್ಟೇ ಚೆನ್ನಾಗಿ ಸಾದ್ವಿನಿ ಅವರು ಸಂಗೀತ ನೀಡಿದ್ದಾರೆ‌. ರಜನೀಶ್, ನಾಗಶ್ರೀ ಬೇಗಾರ್ ಈ ಚಿತ್ರದ ನಾಯಕ, ನಾಯಕಿ. ಪ್ರಮೋದ್ ಶೆಟ್ಟಿ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ, ಮಲೆನಾಡ ರಂಗಭೂಮಿ ಪ್ರತಿಭೆಗಳು ಹೆಚ್ಚಾಗಿ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆಂದು ಮಾಹಿತಿ ಹಂಚಿಕೊಂಡರು.

ಇದನ್ನೂ ಓದಿ:ಒಂದೇ ಚಿತ್ರದಲ್ಲಿ ಸ್ಯಾಂಡಲ್​ವುಡ್ ಸಹೋದರರು: 'ಕಾಲಾಯ ನಮಃ' ಎಂದ ನವರಸನಾಯಕ ಜಗ್ಗೇಶ್, ಕೋಮಲ್ ಕುಮಾರ್

ನಿರ್ಮಾಪಕ ರವೀಂದ್ರ ತುಂಬರಮನೆ ಮಾತನಾಡಿ, ಪರಿಸರ ತಜ್ಞ ಯಲ್ಲಪ್ಪ ರೆಡ್ಡಿ ಅವರು ನನ್ನ ಗುರುಗಳು. ‌ಈ ಕಾರಣಕ್ಕೆ ಪರಿಸರದ ಬಗ್ಗೆ ಅರಿವು ಮೂಡಿಸುವ ಚಿತ್ರ ನಿರ್ಮಿಸಬೇಕೆಂಬ ಹಂಬಲದಿಂದ ಈ ಚಿತ್ರ ನಿರ್ಮಾಣ ಮಾಡಿದ್ದೇನೆ. ಮಲೆನಾಡ ಸೊಗಡಿನ ಈ ಚಿತ್ರ ಎಲ್ಲರ ಮನಸ್ಸಿಗೆ ಹತ್ತಿರವಾಗಲಿದೆ ಎಂದು ತಿಳಿಸಿದರು.

ಇದನ್ನೂ ಓದಿ:ನಗುವಿನ ಹೂಗಳ ಮೇಲೆ ಚಿತ್ರದ ಪ್ರೇಮಗೀತೆ ಅನಾವರಣ: ಲವ್​ಸ್ಟೋರಿ ಹೇಳಲು ಅಭಿದಾಸ್, ಶರಣ್ಯ ಶೆಟ್ಟಿ ರೆಡಿ

ಈ ಚಿತ್ರಕ್ಕೆ ಸಂಗೀತ ನೀಡಿರುವ ಸಾದ್ವಿನಿ ಕೊಪ್ಪ ಮಾತನಾಡಿ, ಚಿತ್ರದಲ್ಲಿ ಮೂರು ಹಾಡುಗಳು ಹಾಗೂ ಕೆಲ ಬೀಟ್ಸ್ ಗಳಿವೆ. ಹಾಡಿನ ಸಾಹಿತ್ಯ ನೋಡಿ ಈ ಹಾಡಿಗೆ ವಿಜಯ್ ಪ್ರಕಾಶ್ ಅವರ ದನಿ ಸೂಕ್ತವೆನಿಸಿತು. ತಮ್ಮ ಕಾರ್ಯದೊತ್ತಡದ ನಡುವೆಯೂ ಈ ಹಾಡನ್ನು ಹಾಡಿದ ವಿಜಯ್ ಪ್ರಕಾಶ್ ಅವರಿಗೆ ಧನ್ಯವಾದಗಳು ಎಂದು ತಿಳಿಸಿದರು. ಪರಿಸರ ಕಾಳಜಿ ಕಥೆ ಆಧರಿಸಿರೋ ಜಲಪಾತ ಸಿನಿಮಾವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ.

ABOUT THE AUTHOR

...view details