ಕರ್ನಾಟಕ

karnataka

ETV Bharat / entertainment

Salaar: 400 ಕೋಟಿ ರೂಪಾಯಿ ವೆಚ್ಚ, 14 ಅದ್ಭುತ ಸೆಟ್‌ಗಳಲ್ಲಿ ಶೂಟಿಂಗ್​! ಸಲಾರ್‌ ಸಿನಿಮಾ ನಿರ್ಮಾಣದ ರೋಚಕ ಮಾಹಿತಿ - Salaar shooting set

ಈಟಿವಿ ಭಾರತ ಪ್ರತಿನಿಧಿಯೊಂದಿಗೆ ಮಾತನಾಡಿದ ಹೊಂಬಾಳೆ ಫಿಲ್ಮ್ಸ್​​ನ ನಿರ್ಮಾಪಕ ವಿಜಯ್ ಕಿರಗಂದೂರ್ ಸಲಾರ್​ ಸಿನಿಮಾ ಕುರಿತು ಕೆಲವು ಕುತೂಹಲಕಾರಿ ಮಾಹಿತಿ ಹಂಚಿಕೊಂಡಿದ್ದಾರೆ.

Salaar movie
ಸಲಾರ್ ಸಿನಿಮಾ

By

Published : Jul 6, 2023, 2:26 PM IST

Updated : Jul 6, 2023, 4:26 PM IST

ಸ್ಯಾಂಡಲ್​ವುಡ್​​ ಅಲ್ಲದೇ ಭಾರತೀಯ ಸಿನಿಮಾ ರಂಗದಲ್ಲಿ ಪ್ರತಿಷ್ಠಿತ ಚಲನಚಿತ್ರ ನಿರ್ಮಾಣ ಸಂಸ್ಥೆಯಾಗಿ ಹೊರಹೊಮ್ಮಿರುವ ಸಂಸ್ಥೆ 'ಹೊಂಬಾಳೆ ಫಿಲ್ಮ್ಸ್'. ಈ ಸಂಸ್ಥೆಯಡಿ ನಿರ್ಮಾಪಕ ವಿಜಯ್ ಕಿರಗಂದೂರ್ ಇಡೀ ದೇಶವೇ ತಿರುಗಿ ನೋಡುವ ಚಿತ್ರಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಸಾಲಿನ ಹೈ ವೋಲ್ಟೆಜ್ ಚಿತ್ರ ಸಲಾರ್ ಪಾರ್ಟ್ 1ರ ಟೀಸರ್ ಅನ್ನು ಇಂದು ಮುಂಜಾನೆ ಹೊಂಬಾಳೆ ಫಿಲ್ಮ್ಸ್​​​ ಯೂಟ್ಯೂಬ್ ಚಾನಲ್​ನಲ್ಲಿ ಬಿಡುಗಡೆ ಮಾಡಲಾಗಿದೆ.

'ಬಾಹುಬಲಿ' ಖ್ಯಾತಿಯ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅಭಿನಯ, ಸ್ಟಾರ್ ಡೈರೆಕ್ಟರ್ ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಚಿತ್ರವು ಆರಂಭದಿಂದಲೂ ಸಿನಿಪ್ರಿಯರಲ್ಲಿ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಗಳನ್ನು ಹುಟ್ಟುಹಾಕಿತ್ತು. ಇಂದು ಮುಂಜಾನೆ 05:12ಕ್ಕೆ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಆ ನಿರೀಕ್ಷೆಗಳು ದುಪ್ಪಟ್ಟಾಗಿವೆ. ಭರ್ಜರಿ ಆ್ಯಕ್ಷನ್ ದೃಶ್ಯಗಳು ಮತ್ತು ಪವರ್‌ಫುಲ್ ಸಂಭಾಷಣೆಗಳಿಂದ ಕೂಡಿರುವ ಈ ಟೀಸರ್, ಪ್ರೇಕ್ಷಕರಿಂದ ಮೆಚ್ಚುಗೆ ಪಡೆಯುವುದರ ಜೊತೆಗೆ 25 ಮಿಲಿಯನ್​ಗೂ ಹೆಚ್ಚು ಜನ ನೋಡಿ ಮೆಚ್ಚಿಕೊಂಡಿದ್ದಾರೆ.

'ಕೆಜಿಎಫ್' ಮೂಲಕ ಇಡೀ ದೇಶವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ್ದ ಪ್ರಶಾಂತ್ ನೀಲ್, ಈ ಬಾರಿ 'ಸಲಾರ್' ಮೂಲಕ ಮತ್ತೊಂದು ಹೊಸ ಪ್ರಪಂಚವನ್ನೇ ಸೃಷ್ಟಿಸಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಈವರೆಗೂ ಕಂಡುಕೇಳರಿಯದಷ್ಟರ ಮಟ್ಟಿಗೆ ಚಿತ್ರ ನಿರ್ಮಾಣವಾಗಿದೆ. ಹೈದರಾಬಾದ್​ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ 14 ಅದ್ಭುತ ಸೆಟ್​ಗಳನ್ನು ಈ ಚಿತ್ರಕ್ಕಾಗಿ ನಿರ್ಮಿಸಿ, ಅಲ್ಲೇ ಚಿತ್ರೀಕರಣ ಮಾಡಲಾಗಿದೆ.

ಈ ಕುರಿತು ಮಾತನಾಡಿರುವ ನಿರ್ಮಾಪಕ ವಿಜಯ್ ಕಿರಗಂದೂರ್, ''ಈ ಸಿನಿಮಾ ಪ್ರಾರಂಭವಾದಾಗಲೇ ನಾವು ಇದು ಯಾವುದೋ ಒಂದು ಭಾಷೆಯ ಅಥವಾ ಪ್ಯಾನ್ ಇಂಡಿಯಾ ಸಿನಿಮಾವಲ್ಲ ಎಂದು ಹೇಳಿದ್ದೆವು. ಇದು ಎಲ್ಲೆಡೆ ಸಲ್ಲುವ ಭಾರತೀಯ ಚಿತ್ರವಾಗಬೇಕು ಎಂಬುದು ನಮ್ಮ ಆಸೆ. ಅದರಂತೆ ಈ ಚಿತ್ರ ಮೂಡಿಬಂದಿದ್ದು, ಭಾರತದಲ್ಲಷ್ಟೇ ಅಲ್ಲದೇ ಹೊರದೇಶಗಳಲ್ಲೂ ಭಾರತೀಯ ಚಿತ್ರವಾಗಿ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಲಿದೆ. ಕನ್ನಡದ ನಿರ್ಮಾಣ ಸಂಸ್ಥೆಯೊಂದು, ಪ್ಯಾನ್ ಇಂಡಿಯಾ ಸ್ಟಾರ್ ಒಬ್ಬರ ಚಿತ್ರವೊಂದನ್ನು ಇಷ್ಟೊಂದು ದೊಡ್ಡ ಮಟ್ಟದಲ್ಲಿ ಮಾಡುತ್ತಿರುವುದು ಹೆಮ್ಮೆಯ ವಿಷಯ. ಕನ್ನಡದ ನಿರ್ಮಾಣ ಸಂಸ್ಥೆ, ನಿರ್ದೇಶಕರು, ತಂತ್ರಜ್ಞರು ಮತ್ತು ಕಲಾವಿದರು, ತೆಲುಗಿನ ಸ್ಟಾರ್ ನಟ ಪ್ರಭಾಸ್, ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್, ತಮಿಳಿನ ಶ್ರುತಿ ಹಾಸನ್ ಹೀಗೆ ಎಲ್ಲಾ ಭಾಷೆಯವರನ್ನೊಳಗೊಂಡ ಸಿನಿ ತಂಡ ಕೆಲಸ ಮಾಡಿದೆ.''

''ಎಲ್ಲರನ್ನೂ ಸೇರಿಸಿ ಭಾರತೀಯ ಸಿನಿಮಾ ಮಾಡಿದ್ದೇವೆ. ಚಿತ್ರದ ಟೀಸರ್ ಇಂದು ಬಿಡುಗಡೆ ಆಗಿದೆ. ಸುಮಾರು 400 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಸಲಾರ್ ಚಿತ್ರವನ್ನು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನಿರ್ಮಾಣ ಮಾಡಲಾಗಿದೆ. ವಿದೇಶಗಳಲ್ಲೂ ಚಿತ್ರದ ವಿಎಫ್ಎಕ್ಸ್ ಕೆಲಸ ನಡೆದಿದ್ದು, ಆ್ಯಕ್ಷನ್ ದೃಶ್ಯಗಳಲ್ಲಿ ಬೇರೆ ದೇಶಗಳಿಂದ ಬಂದ ಹಲವು ನುರಿತ ಸಾಹಸ ಕಲಾವಿದರು ಕೆಲಸ ಮಾಡಿರುವುದು ಈ ಚಿತ್ರದ ವಿಶೇಷತೆಗಳಲ್ಲಿ ಒಂದು'' ಅಂತಾರೆ ನಿರ್ಮಾಪಕ ವಿಜಯ್ ಕಿರಗಂದೂರ್.

ಇದನ್ನೂ ಓದಿ:Salaar: ಬಿಡುಗಡೆಯಾದ ಕೆಲ ಗಂಟೆಯಲ್ಲೇ 25 ಮಿಲಿಯನ್​ ವೀಕ್ಷಣೆ .. ಸಲಾರ್​ ಟೀಸರ್​ ಬಗ್ಗೆ ಅಭಿಮಾನಿಗಳೇನಂದ್ರು?

ದೊಡ್ಡ ತಾರಾಗಣವಿರುವ ಚಿತ್ರದಲ್ಲಿ ಪ್ರಭಾಸ್ ಅವರಿಗೆ ನಾಯಕಿಯಾಗಿ ಶ್ರುತಿ ಹಾಸನ್ ನಟಿಸಿದ್ದು, ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು, ಈಶ್ವರಿ ರಾವ್, ಶ್ರೀಯಾ ರೆಡ್ಡಿ ಮುಂತಾದವರು ತಾರಾಬಳಗದಲ್ಲಿದ್ದಾರೆ. ಕೆಜಿಎಫ್ ಚಿತ್ರಗಳಿಗೆ ಕೆಲಸ ಮಾಡಿದ ತಾಂತ್ರಿಕ ತಂಡವೇ ಈ ಚಿತ್ರಕ್ಕೂ ಕೆಲಸ ಮಾಡಿದ್ದು, ರವಿ ಬಸ್ರೂರು ಅವರ ಸಂಗೀತ, ಭುವನ್ ಗೌಡ ಛಾಯಾಗ್ರಹಣ, ಶಿವಕುಮಾರ್ ಅವರ ಕಲಾ ನಿರ್ದೇಶನ ಚಿತ್ರಕ್ಕಿದೆ. ಸೆ. 28ರಂದು ಪಂಚ ಭಾಷೆಗಳಲ್ಲಿ ಏಕಕಾಲಕ್ಕೆ ಜಗತ್ತಿನಾದ್ಯಂತ ಅದ್ಧೂರಿಯಾಗಿ ಸಿನಿಮಾ ಬಿಡುಗಡೆಯಾಗಲಿದೆ.

ಇದನ್ನೂ ಓದಿ:ಹ್ಯಾಪಿ ಬರ್ತ್​ಡೇ ರಣ್​​​ವೀರ್ ಸಿಂಗ್! ವಿಶಿಷ್ಟ ಡ್ರೆಸ್ಸಿಂಗ್ ಶೈಲಿಗೆ ಹೆಸರಾದ ನಟನ ಬಗ್ಗೆ ನಿಮಗೆಷ್ಟು ಗೊತ್ತು?

Last Updated : Jul 6, 2023, 4:26 PM IST

ABOUT THE AUTHOR

...view details