ಟಾಲಿವುಡ್ ನಟ ವಿಜಯ್ ದೇವರಕೊಂಡ ಮತ್ತು ಬೋಲ್ಡ್ ನಟಿ ಅನನ್ಯಾ ಪಾಂಡೆ ಅಭಿನಯದ ಬಹು ನಿರೀಕ್ಷಿತ ಲೈಗರ್ ಸಿನಿಮಾ ಆಗಸ್ಟ್ 25ಕ್ಕೆ ತೆರೆ ಕಾಣಲು ಸಜ್ಜಾಗಿದೆ. ಈ ಪ್ಯಾನ್ ಇಂಡಿಯಾ ಚಿತ್ರಕ್ಕೆ ಈಗಾಗಲೇ ಭರ್ಜರಿ ಪ್ರಚಾರ ಕಾರ್ಯ ಆರಂಭಗೊಂಡಿದೆ. ಆದರೆ, ಇದರ ಮಧ್ಯೆ ಲೈಗರ್ ಸಿನಿಮಾ ಬಹಿಷ್ಕರಿಸುವಂತೆ ಅಭಿಯಾನ ಆರಂಭಗೊಂಡಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ವಿಜಯ್ ದೇವರಕೊಂಡ, ನಾನು ಯಾವಾಗಲೂ ಸತ್ಯದ ಪರವಾಗಿ ನಿಲ್ಲುತ್ತೇನೆ. ಜೀವನದಲ್ಲಿ ಸಾಕಷ್ಟು ಸವಾಲು ಎದುರಿಸಿದ್ದೇನೆ. ಯಾವುದಕ್ಕೂ ಹೆದರುವುದಿಲ್ಲ. ದೇವರ ಮೇಲೆ ನಂಬಿಕೆ ಇದೆ. ಜೊತೆಗೆ ತಾಯಿಯ ಆಶೀರ್ವಾದವಿದೆ ಎಂದಿದ್ದಾರೆ.
ಯಾವ ಕಾರಣಕ್ಕಾಗಿ ಬಾಯ್ಕಾಟ್ ಬಿಸಿ:ಲೈಗರ್ ನಿಷೇಧಕ್ಕೆ ಕರೆ ನೀಡುವ ನೆಟಿಜನ್ಗಳು ವಿವಿಧ ಕಾರಣಗಳನ್ನು ಟ್ವಿಟರ್ನಲ್ಲಿ ಉಲ್ಲೇಖಿಸುತ್ತಿದ್ದಾರೆ. ಚಿತ್ರಕ್ಕೆ ಧರ್ಮ ಪ್ರೊಡಕ್ಷನ್, ಕರಣ್ ಜೋಹರ್ ಬೆಂಬಲವಿರುವ ಹಿನ್ನೆಲೆ ಲೈಗರ್ ನಿಷೇಧಕ್ಕೆ ಬೆಂಬಲ ಕೊಡುತ್ತೇವೆಂದು ಹಲವರು ಟ್ವಿಟರ್ನಲ್ಲಿ ಉಲ್ಲೇಖಿಸಿದ್ದಾರೆ. ಡ್ರಗ್ಸ್ ಪ್ರಕರಣದಲ್ಲಿ ನಟಿ ಅನನ್ಯಾ ಪಾಂಡೆ ಹೆಸರು ಕೇಳಿ ಬಂದಿದೆ ಎಂದು ಆರೋಪಿಸಿ ಲೈಗರ್ ನಿಷೇಧಕ್ಕೆ ಹಲವರು ಒತ್ತಾಯಿಸಿದ್ದಾರೆ. ಇದರ ಜೊತೆಗೆ ಇತ್ತೀಚೆಗೆ ಅಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಗ್ಗೆ ಮಾತನಾಡಿದ್ದ ವಿಜಯ್ ದೇವರಕೊಂಡ, ಅದು ಕೇವಲ ಆಮೀರ್ ಖಾನ್ ಅವರ ಸಿನಿಮಾವಲ್ಲ. ಆ ಸಿನಿಮಾ ನಿರ್ಮಾಣದ ಹಿಂದೆ 250ಕ್ಕೂ ಹೆಚ್ಚು ಜನರ ಶ್ರಮವಿರುತ್ತದೆ. ಹಾಗಾಗಿ ಬಾಯ್ಕಾಟ್ ಮಾಡಬೇಡಿ ಎಂದು ಹೇಳಿದ್ದರು. ಈ ಕಾರಣಕ್ಕೂ ಅವರಿಗೆ ಬಾಯ್ಕಾಟ್ ಬಿಸಿ ತಟ್ಟಿದೆ.