ಸಂಗೀತ ಸಂಯೋಜಕ ಮತ್ತು ನಟ ವಿಜಯ್ ಆ್ಯಂಟನಿ ಅವರ ಪುತ್ರಿ ಮೀರಾ ಮಂಗಳವಾರ (ಸೆಪ್ಟೆಂಬರ್ 19) ಆತ್ಮಹತ್ಯೆ ಮಾಡಿಕೊಂಡರು. ಮಗಳು ಬಾರದ ಲೋಕಕ್ಕೆ ಪಯಣಿಸಿದ್ದು, ವಿಜಯ್ ಬದುಕಲ್ಲಿ ಬರಸಿಡಿಲು ಬಡಿದಂತಾಗಿದೆ. ಅವರು ನೋವಿನಲ್ಲೇ ಸಂಪೂರ್ಣ ಮೌನಕ್ಕೆ ಶರಣಾಗಿದ್ದಾರೆ. ಇದೀಗ ಮಗಳನ್ನು ನೆನೆದು ವಿಜಯ್ ಭಾವನಾತ್ಮಕ ಪೋಸ್ಟ್ವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. 'ಮಗಳು ಸತ್ತಾಗಲೇ ನಾನು ಒಳಗಿನಿಂದ ಸತ್ತು ಹೋದೆ' ಎಂದು ನೊಂದು ಬರೆದುಕೊಂಡಿದ್ದಾರೆ.
"ನನ್ನ ಮಗಳು ಮೀರಾ ತುಂಬಾ ಧೈರ್ಯಶಾಲಿ. ಕರುಣಾಮಯಿಯೂ ಆಗಿದ್ದಳು. ಅವಳು ಇಹಲೋಕ ತ್ಯಜಿಸಿ ಮತ, ಜಾತಿ, ಧರ್ಮ, ಹಣ, ಬಡತನ, ಅಸೂಯೆ, ನೋವು, ದುಶ್ಚಟಗಳಿಲ್ಲದ ಕಡೆಗೆ ಹೋಗಿದ್ದಾಳೆ. ಅವಳು ಹೋಗಿರುವ ಸ್ಥಳ ಶಾಂತವಾಗಿದೆ. ಅವಳು ಇನ್ನೂ ನನ್ನೊಂದಿಗೆ ಮಾತನಾಡುತ್ತಿದ್ದಾಳೆ ಎಂದು ನನಗೆ ಅನಿಸುತ್ತದೆ. ಅವಳು ಅಗಲಿದಾಗ ನಾನು ಒಳಗಿನಿಂದ ಸತ್ತು ಹೋದೆ. ಈಗ ನಾನು ಅವಳೊಂದಿಗೆ ಸಮಯ ಕಳೆಯಲು ಪ್ರಾರಂಭಿಸಿದ್ದೇನೆ. ನಾನು ಮಾಡುವ ಎಲ್ಲಾ ಒಳ್ಳೆಯ ಕಾರ್ಯವು ಅವಳ ಹೆಸರಿನಲ್ಲಿ ಇರುತ್ತದೆ" ಎಂದು ಮನದ ನೋವನ್ನು ಅಕ್ಷರ ರೂಪಕ್ಕಿಳಿಸುವ ಪ್ರಯತ್ನ ಮಾಡಿದ್ದಾರೆ.
ವಿಜಯ್ಗೆ ಅಭಿಮಾನಿಗಳ ಸಾಂತ್ವನ:ವಿಜಯ್ ಆ್ಯಂಟನಿ ಪೋಸ್ಟ್ ಶೇರ್ ಮಾಡುತ್ತಿದ್ದಂತೆ ಅವರ ಅಭಿಮಾನಿಗಳು ಕಮೆಂಟ್ ವಿಭಾಗದಲ್ಲಿ ನಟನಿಗೆ ಧೈರ್ಯ ತುಂಬಿದ್ದಾರೆ. 'ದೇವರು ನಿಮಗೆ ದುಃಖ ಭರಿಸುವ ಶಕ್ತಿ ನೀಡಲಿ', 'ಆಕೆಯ ಆತ್ಮಕ್ಕೆ ಶಾಂತಿ ಸಿಗಲಿ','ಒಳ್ಳೆಯವರಿಗೆ ಸದಾ ಒಳ್ಳೆಯದೇ ಆಗಲಿ','ಧೈರ್ಯದಿಂದಿರಿ' ಎಂದೆಲ್ಲಾ ಪ್ರತಿಕ್ರಿಯಿಸಿ ವಿಜಯ್ಗೆ ಸಾಂತ್ವನ ಹೇಳುವ ಪ್ರಯತ್ನ ಮಾಡುತ್ತಿದ್ದಾರೆ.
ಮೀರಾ ಆತ್ಮಹತ್ಯೆ:ಸೆಪ್ಟೆಂಬರ್ 19ರಂದು ಮುಂಜಾನೆ ವಿಜಯ್ ಆ್ಯಂಟನಿ ಪುತ್ರಿ ಮೀರಾ ಶವವಾಗಿ ಪತ್ತೆಯಾಗಿದ್ದರು. ಸೆಪ್ಟೆಂಬರ್ 18ರ ರಾತ್ರಿ ಆಕೆ ಕೊಂಚ ಒತ್ತಡಕ್ಕೆ ಒಳಗಾಗಿದ್ದರು ಎನ್ನಲಾಗಿದೆ. ನಂತರ, ನಿದ್ರಿಸುವುದಾಗಿ ತಂದೆಗೆ ಹೇಳಿ ಕೊಠಡಿಗೆ ಹೋಗಿದ್ದರು. ಮಂಗಳವಾರ ಬೆಳಗ್ಗೆ ಮಗಳನ್ನು ಕರೆಯಲು ತಂದೆ ಕೋಣೆಗೆ ತೆರಳಿದಾಗ, ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದುದನ್ನು ಕಂಡು ಆಘಾತಕ್ಕೊಳಗಾಗಿದ್ದರು.
ಕೂಡಲೇ ಮನೆ ಸಿಬ್ಬಂದಿಯ ನೆರವಿನಿಂದ ಕಾವೇರಿ ಆಸ್ಪತ್ರೆಗೆ ಕರೆದೊಯ್ದರು. ವೈದ್ಯಕೀಯ ಪರೀಕ್ಷೆ ನಡೆಸಿದ ವೈದ್ಯರು ಈಗಾಗಲೇ ಬಾಲಕಿ ಸಾವನ್ನಪ್ಪಿರುವುದಾಗಿ ತಿಳಿಸಿದ್ದರು. ಈಗಿನ ತನಿಖೆ ಪ್ರಕಾರ, ಮೀರಾ ಮಾನಸಿಕ ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ವಿಜಯ್ ಆ್ಯಂಟನಿ ತಮ್ಮ ಕುಟುಂಬದೊಂದಿಗೆ ಚೆನ್ನೈನ ಡಿಡಿಕೆ ರಸ್ತೆಯಲ್ಲಿರುವ ಮನೆಯಲ್ಲಿ ವಾಸಿಸುತ್ತಿದ್ದಾರೆ. ಇವರಿಗೆ ಮೀರಾ ಮತ್ತು ಲಾರಾ ಎಂಬಿಬ್ಬರು ಹೆಣ್ಣು ಮಕ್ಕಳು. ಹಿರಿ ಮಗಳು ಮೀರಾ ಚೆನ್ನೈನ ಖಾಸಗಿ ಕಾಲೇಜಿನಲ್ಲಿ 12ನೇ ತರಗತಿ ವ್ಯಾಸಂಗ ಮಾಡುತ್ತಿದ್ದರು.
ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟ ವಿಜಯ್ ಆ್ಯಂಟನಿ. 'ಪಿಚ್ಚಕ್ಕಾರಾನ್' ಸಿನಿಮಾ ಮೂಲಕ ಖ್ಯಾತಿ ಗಳಿಸಿದ್ದಾರೆ. ಈ ಚಿತ್ರ ಕನ್ನಡದಲ್ಲಿ ಅಮ್ಮ ಐ ಲವ್ ಯು' ಎಂದು ಬಿಡುಗಡೆಯಾಗಿತ್ತು. ಚಿತ್ರದಲ್ಲಿ ಯುವಸಾಮ್ರಾಟ್ ಚಿರಂಜೀವಿ ಸರ್ಜಾ ಹಾಗೂ ಸಿತಾರಾ ಚಿರು ಅಮ್ಮನಾಗಿ ನಟಿಸಿದ್ದರು. ದ್ವಾರಕೀಶ್ ಬ್ಯಾನರ್ನಲ್ಲಿ ಚಿತ್ರವನ್ನು ತಯಾರಿಸಲಾಗಿತ್ತು. 'ಪಿಚ್ಚಕಾರನ್ 2' ಕನ್ನಡದಲ್ಲಿ ರಿಮೇಕ್ ಆಗಲಿದೆಯಾ ಎಂಬುದು ಅಭಿಮಾನಿಗಳಲ್ಲಿರುವ ಸದ್ಯದ ಪ್ರಶ್ನೆ.
ಇದನ್ನೂ ಓದಿ:'ಪಿಚ್ಚಕಾರನ್' ಸಿನಿಮಾ ಖ್ಯಾತಿಯ ನಟ ವಿಜಯ್ ಆ್ಯಂಟನಿ ಪುತ್ರಿ ಸಾವು