ಮುಂಬೈ:ನಟ ವಿದ್ಯುತ್ ಜಮ್ವಾಲ್ ತನ್ನ ರಣರೋಚಕ ಸಾಹಗಳಿಂದ ಹಾಗೂ ಸಾವಿನ ಹತ್ತಿರಕ್ಕೆ ಹೋಗಿ ಮರಳಿ ಬರುವಂಥ ಸ್ಟಂಟ್ಗಳಿಂದ ಅಭಿಮಾನಿಗಳನ್ನು ನಿರಂತರವಾಗಿ ಆಶ್ಚರ್ಯಗೊಳಿಸುತ್ತ ಮನರಂಜನೆ ನೀಡುತ್ತಿರುತ್ತಾರೆ. ಈ ಬಾರಿ ಅವರು ಹೊಸದೊಂದು ಸ್ಟಂಟ್ ಮಾಡಿದ್ದು ಎಲ್ಲರ ಗಮನ ಸೆಳೆದಿದೆ. ಕಟ್ಟಡ ಕಾಮಗಾರಿಯ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ತನ್ನ ಅಭಿಮಾನಿಯೊಬ್ಬರನ್ನು ಭೇಟಿಯಾಗಲು ಜಮ್ವಾಲ್ ನಿಜ ಜೀವನದ ಸ್ಟಂಟ್ ಮಾಡಿದ್ದಾರೆ.
ನಿರ್ಮಾಣ ಹಂತದಲ್ಲಿರುವ ಕಟ್ಟಡದ ಬಾಲ್ಕನಿಯಿಂದ ಕಂಬಿಗಳಿಗೆ ಜೋತು ಬಿದ್ದು ತಮ್ಮ ಅಭಿಮಾನಿ ಬಳಿಗೆ ತೆರಳುವ ಧೈರ್ಯದಿಂದ ಕೂಡಿದ ಸಾಹಸ ಮಾಡಿರುವ ಜಮ್ವಾಲ್, ಇದರ ವಿಡಿಯೋವನ್ನು ಇನ್ಸ್ಟಾದಲ್ಲಿ ಹರಿಬಿಟ್ಟಿದ್ದಾರೆ.
ಜಮ್ವಾಲ್ ತಾವು ಹತ್ತುತ್ತಿರುವ ಕಟ್ಟಡದ ಪಕ್ಕದಲ್ಲಿ ನಿರ್ಮಾಣವಾಗುತ್ತಿರುವ ಇನ್ನೊಂದು ಕಟ್ಟಡದಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕನೊಬ್ಬನೊಂದಿಗೆ ಮಾತನಾಡುವುದು ವಿಡಿಯೋದಲ್ಲಿ ಕಾಣಿಸುತ್ತದೆ. ವಿದ್ಯುತ್ ಅವರನ್ನು ನೋಡಿದ ಅಭಿಮಾನಿ ಕೈಬೀಸುತ್ತಿದ್ದಂತೆಯೇ, ನನ್ನ ಯಾವ ಸಾಹಸ ಚಲನಚಿತ್ರವನ್ನು ನೋಡಿರುವಿರಿ ಎಂದು ಅಭಿಮಾನಿಗೆ ಕೇಳುತ್ತಾರೆ.
ವಿದ್ಯುತ್ ಅವರನ್ನು ಭೇಟಿಯಾಗಿದ್ದಕ್ಕೆ ಖುಷಿಯಾದ ಅಭಿಮಾನಿಗೆ ಐ ಲವ್ ಯೂ ಮೇರಿ ಜಾನ್ ಎಂದು ವಿದ್ಯುತ್ ಹೇಳುತ್ತಾರೆ. ಅಭಿಮಾನಿಯು ವಿದ್ಯುತ್ ಅವರ ಕೈಗೆ ಮುತ್ತಿಕ್ಕುತ್ತಾನೆ ಹಾಗೂ ವಿದ್ಯುತ್ ಕೂಡ ಅಭಿಮಾನಿಗೆ ಹಾಗೆಯೇ ಮಾಡುತ್ತಾರೆ. ಈ ವಿಡಿಯೋಗೆ ವಿದ್ಯುತ್ "NORMAL IS BORING...#TheRealStuntMen" ಎಂದು ಕ್ಯಾಪ್ಷನ್ ಹಾಕಿದ್ದಾರೆ.
ಭಾಯಿ, ಸಾವು ನಿಮ್ಮನ್ನು ನೋಡಿ ಹೆದರುತ್ತದೆ ಎನಿಸುತ್ತದೆ ಎಂದು ಅಭಿಮಾನಿಯೊಬ್ಬರು ಈ ವಿಡಿಯೋಗೆ ಕಮೆಂಟ್ ಹಾಕಿದ್ದಾರೆ.