ಕರ್ನಾಟಕದ ಜನತೆಗೆ ಗುಣಮಟ್ಟದ ಚಿತ್ರಗಳನ್ನು ತಲುಪಿಸುವ ನಿಟ್ಟಿನಲ್ಲಿ ಕನ್ನಡದ ಜನಪ್ರಿಯ ನಿರ್ಮಾಣ ಮತ್ತು ವಿತರಣಾ ಸಂಸ್ಥೆಯಾದ ಕೆ.ಆರ್.ಜಿ ಸ್ಟುಡಿಯೋಸ್ ಸದಾ ಮುಂಚೂಣಿಯಲ್ಲಿರುತ್ತದೆ. ವಿನೂತನ ಕಥೆಗಳನ್ನು ಪ್ರೇಕ್ಷಕರಿಗೆ ಉಣಬಡಿಸುವಲ್ಲಿಯೂ ಮುಂದಡಿ ಇಡುತ್ತಿದೆ.
'ಪರಿಂದಾ', '1942 ಎ ಲವ್ ಸ್ಟೋರಿ' ಮುಂತಾದ ಜನಪ್ರಿಯ ಚಿತ್ರಗಳನ್ನು ನಿರ್ದೇಶಿಸುವುದರ ಜೊತೆಗೆ 'ಮುನ್ನಾಭಾಯ್' ಸರಣಿಯ ನಿರ್ಮಾಪಕರಾದ ಬಾಲಿವುಡ್‍ನ ಖ್ಯಾತ ನಿರ್ಮಾಪಕ ಮತ್ತು ನಿರ್ದೇಶಕ ವಿಧು ವಿನೋದ್ ಚೋಪ್ರಾ ಅವರೊಂದಿಗೆ ಕಾರ್ತಿಕ್ ಗೌಡ ಮತ್ತು ಯೋಗಿ.ಜಿ.ರಾಜ್ ಒಡೆತನದ ಕೆ.ಆರ್.ಜಿ ಸ್ಟುಡಿಯೋಸ್ ಇದೀಗ ಕೈ ಜೋಡಿಸಿದೆ.
ವಿಧು ವಿನೋದ್ ಚೋಪ್ರಾ ಅವರ '12th ಫೇಲ್' ಚಿತ್ರವನ್ನು ಕನ್ನಡ ಮತ್ತು ಹಿಂದಿಯಲ್ಲಿ ಅಕ್ಟೋಬರ್ 27ರಂದು ರಾಜ್ಯಾದ್ಯಂತ ಬಿಡುಗಡೆ ಮಾಡುವ ಜವಾಬ್ದಾರಿಯನ್ನು ಕೆ.ಆರ್.ಜಿ ಸ್ಟುಡಿಯೋಸ್ ಹೊತ್ತುಕೊಂಡಿದೆ. ಚಿತ್ರದಲ್ಲಿ 'ಎ ಡೆಥ್ ಇನ್ ದಿ ಗುಂಜ್', 'ಚಪಾಕ್', 'ಹಸೀನ್ ದಿಲ್ರುಬಾ' ಮುಂತಾದ ಚಿತ್ರಗಳ ಖ್ಯಾತಿಯ ವಿಕ್ರಾಂತ್ ಮಾಸ್ಸೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಚಿತ್ರಕಥೆ: '12th ಫೇಲ್' ಚಿತ್ರವು ಅನುರಾಗ್ ಪಾಠಕ್ ಅವರ ಅದೇ ಹೆಸರಿನ ಜನಪ್ರಿಯ ಕಾದಂಬರಿಯನ್ನು ಆಧರಿಸಿದೆ. ಹಲವು ಅಡೆ ತಡೆಗಳನ್ನು ದಾಟಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಸ್ ಆಗಿ, ಅಸಾಧ್ಯವನ್ನು ಸಾಧ್ಯವನ್ನಾಗಿಸಿದ ಐಪಿಎಸ್ ಅಧಿಕಾರಿ ಮನೋಜ್ ಕುಮಾರ್ ಶರ್ಮಾ ಅವರ ಜೀವನವನ್ನಾಧರಿಸಿದ ಚಿತ್ರ ಇದಾಗಿದೆ. ಸಿನಿಮಾವು ಅಕ್ಟೋಬರ್ 27ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ತೆರೆ ಕಾಣಲಿದೆ.
ಇದನ್ನೂ ಓದಿ:ದಳಪತಿ ವಿಜಯ್ ನಟನೆಯ 'ಲಿಯೋ' ಚಿತ್ರದ ಟ್ರೇಲರ್ ಡೇಟ್ ಅನೌನ್ಸ್
ಟ್ರೇಲರ್ ನಾಳೆ ರಿಲೀಸ್: ಈಗಾಗಲೇ ಪೋಸ್ಟರ್ನಿಂದ ಕುತೂಹಲ ಮೂಡಿಸಿರುವ '12th ಫೇಲ್' ಚಿತ್ರದ ಟ್ರೇಲರ್ ನಾಳೆ ಬಿಡುಗಡೆಯಾಗಲಿದೆ. ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿರುವ ಚಿತ್ರತಂಡ, "ಹೋರಾಡದವನು ಮಾತ್ರ ಸೋಲುತ್ತಾನೆ. ಶೂನ್ಯ ಎಂಬುದು ಅಂತ್ಯ ಅಥವಾ ಮರುಪ್ರಾರಂಭಿಸಲಿರುವ ಅವಕಾಶ. ಅಕ್ಟೋಬರ್ 27ರಂದು 12th ಫೇಲ್ ಚಿತ್ರಮಂದಿರದಲ್ಲಿ ವೀಕ್ಷಿಸಿ. ನೈಜ ಕಥೆಗಳಿಂದ ಪ್ರೇರಿತವಾಗಿದೆ. ನಾಳೆ ಟ್ರೇಲರ್ ಔಟ್" ಎಂದು ಬರೆದುಕೊಂಡಿದೆ.
ಕೆ.ಆರ್.ಜಿ ಸ್ಟುಡಿಯೋ ಬಗ್ಗೆ..: ಕಳೆದ 6 ವರ್ಷಗಳಿಂದ ವಿಭಿನ್ನ ಶೈಲಿಯ ಸಿನಿಮಾಗಳನ್ನು ಮಾಡಿ ಪ್ರೇಕ್ಷಕರ ಮನಸ್ಸನ್ನು ಗೆದ್ದಿರುವ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ಭಾಗವಾಗಿರುವ ಕೆ.ಆರ್.ಜಿ ಸ್ಟುಡಿಯೋ ಕನ್ನಡ ಚಿತ್ರರಂಗದ ಹೆಮ್ಮೆ. ಕಾರ್ತಿಕ್ ಗೌಡ ಹಾಗೂ ತಮ್ಮ ದೀರ್ಘ ಕಾಲದ ಸ್ನೇಹಿತ ಯೋಗಿ ಜಿ ರಾಜ್ ಇಬ್ಬರೂ ಸೇರಿ ಈ ಸಂಸ್ಥೆ ಹುಟ್ಟುಹಾಕಿ ಕನ್ನಡ ಚಿತ್ರರಂಗದಲ್ಲಿ ಹೊಸ ರೀತಿಯ ಕಂಟೆಂಟ್ಗೆ ನಾಂದಿ ಹಾಡಿದರು. ವರ್ಷದಿಂದ ವರ್ಷಕ್ಕೆ ಹಿಟ್ ಚಿತ್ರಗಳನ್ನು ಪ್ರಸ್ತುತ ಪಡಿಸುವುದಷ್ಟೇ ಅಲ್ಲದೇ ಹೊಸ ಪ್ರತಿಭೆಗಳಿಗೂ ಅವಕಾಶ ಕಲ್ಪಿಸಿದ್ದಾರೆ.
ಜೀವನಕ್ಕೆ ಹೊಂದುವಂತಹ ಸಬ್ಜೆಕ್ಟ್ಗಳನ್ನು ತಲೆಯಲ್ಲಿಟ್ಟುಕೊಂಡು, ಕೆ.ಆರ್.ಜಿ ಸಂಸ್ಥೆಯು ಹೊಸ ಕಂಟೆಂಟ್ಗಳನ್ನು ಪ್ರೇಕ್ಷಕರಿಗೆ ಪರಿಚಯಿಸುವಲ್ಲಿ ಯಶಸ್ವಿಯಾಗಿದೆ ಎಂದರೆ ತಪ್ಪಾಗಲ್ಲ. ಈಗಾಗಲೇ ರತ್ನನ್ ಪ್ರಪಂಚ, ಗುರುದೇವ್ ಹೊಯ್ಸಳ, ಉತ್ತರಕಾಂಡ, ಕಿರಿಕ್ et 11 ಅಂತಹ ಸಿನಿಮಾಗಳನ್ನು ನಿರ್ಮಾಣ ಮಾಡಿದೆ. ಇದೀಗ ಬಾಲಿವುಡ್ ಸಿನಿಮಾವೊಂದರ ಬಿಡುಗಡೆಯ ಜವಾಬ್ದಾರಿಯನ್ನು ಹೊತ್ತುಕೊಳ್ಳುವ ಮೂಲಕ ಹೊಸತೊಂದು ಹೆಜ್ಜೆ ಇರಿಸಿದೆ.
ಇದನ್ನೂ ಓದಿ:ಕೆ.ಆರ್.ಜಿ ಸ್ಟುಡಿಯೋಸ್ ಜೊತೆ ಕಿಚ್ಚ ಸಿನಿಮಾ; 9 ವರ್ಷಗಳ ಬಳಿಕ ನಿರ್ದೇಶಕನ ಕ್ಯಾಪ್ ತೊಟ್ಟ ಸುದೀಪ್