ಸ್ಯಾಂಡಲ್ವುಡ್ನಲ್ಲಿ ಹೊಸ ನಿರ್ದೇಶಕರು, ನಟ ನಟಿಯರ ಆಗಮನ ಮುಂದುವರೆದಿದೆ. ಇದೀಗ ಕಾಮಿಡಿ ಕಿಲಾಡಿ ಶೋನಲ್ಲಿ ಭಾಗವಹಿಸಿ ಸೈ ಎನಿಸಿಕೊಂಡಿರುವ ಮಡೆನೂರು ಮನು 'ವಿಚಾರಣೆ' ಸಿನಿಮಾ ಮೂಲಕ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಇತ್ತೀಚೆಗೆ ವಿಚಾರಣೆ ಚಿತ್ರದ ಮುಹೂರ್ತ ಸಮಾರಂಭ ಬನ್ನೇರುಘಟ್ಟ ರಸ್ತೆಯ ಶಾಂತಿನಿಕೇತನ್ ಅರೆಕೆರೆಯ ಶ್ರೀ ವಾಸವಿ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ನೆರವೇರಿತು.
ಈ ಸಿನಿಮಾ ಮೂಲಕ ಮಡೆನೂರು ಮನು ಪೂರ್ಣ ಪ್ರಮಾಣದ ನಾಯಕನಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಮನು ಅವರಿಗೆ ನಾಯಕಿಯಾಗಿ ಜಾನು ಅಭಿನಯಿಸುತ್ತಿದ್ದಾರೆ. ಇವರಿಗೆ ಇದು ಮೊದಲ ಚಿತ್ರ. ಉಳಿದಂತೆ ಚಿತ್ರದಲ್ಲಿ ನಾಗೇಂದ್ರ ಅರಸ್, ಪ್ರಮೋದ್ ಶೆಟ್ಟಿ, ಆದಿ ಕೇಶವ್, ಮಹೇಶ್ ಸೇರಿದಂತೆ ಹಲವರು ಇದ್ದಾರೆ.
ವಿಚಾರಣೆ ಸಿನಿಮಾದ ಮುಹೂರ್ತ ಸಮಾರಂಭ ಇನ್ನು ಈ ಚಿತ್ರವನ್ನು ಎನ್ ಅಕುಲ್ ನಿರ್ದೇಶನ ಮಾಡುತ್ತಿದ್ದಾರೆ. ಇವರು ಮೂಲತಃ ನೃತ್ಯ ನಿರ್ದೇಶಕರು. ಈ ಚಿತ್ರದ ಮೂಲಕ ಅವರು ನಿರ್ದೇಶಕನ ಪಟ್ಟ ಅಲಂಕರಿಸುತ್ತಿದ್ದಾರೆ. ನಿರ್ದೇಶಕ ಅಕುಲ್ ಅವರು ಇದಕ್ಕೂ ಮೊದಲು 160 ಸಿನಿಮಾಗಳಿಗೆ ನೃತ್ಯ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಆ ಅನುಭವದ ಮೇಲೆ 'ವಿಚಾರಣೆ' ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.
ಮನು ಅವರಿಗೆ ನಾಯಕಿಯಾಗಿ ಜಾನು ವಿಚಾರಣೆ ಸಿನಿಮಾ ಕುರಿತು ಮಾತನಾಡಿರುವ ನಿರ್ದೇಶಕ ಅಕುಲ್, 'ಒಂದು ಘಟನೆಯಲ್ಲಿ ಅಮಾಯಕನೊಬ್ಬ ಪೊಲೀಸರ ಕೈಗೆ ಸಿಕ್ಕಿ ಬೀಳುತ್ತಾನೆ. ಆ ಅಮಾಯಕ ಯಾವುದೇ ತಪ್ಪು ಮಾಡದಿದ್ದರೂ, ಪೊಲೀಸರಿಂದ ಚಿತ್ರಹಿಂಸೆ ಅನುಭವಿಸುತ್ತಾನೆ. ಪೊಲೀಸರ ಪ್ರಕಾರ ಅವನು ತಪ್ಪು ಮಾಡಿದ್ದು ಏನು? ಅನ್ನೋದು ಸಸ್ಪೆನ್ಸ್. ಜೊತೆಗೆ ಆ ಅಮಾಯಕನನ್ನು ಮದುವೆಯಾದ ಹುಡುಗಿ, ಈ ಘಟನೆಯಿಂದ ಎಷ್ಟೆಲ್ಲಾ ತೊಂದರೆ ಅನುಭವಿಸುತ್ತಾಳೆ, ಕೊನೆಗೆ ಆ ಅಮಾಯಕ ಪೊಲೀಸರ ಜಾಲದಿಂದ ಹೊರ ಬರುತ್ತಾನಾ? ಇಲ್ಲವೇ? ಎಂಬುದು ಚಿತ್ರದ ಕಥೆ.
ಚಿತ್ರದಲ್ಲಿ ಪ್ರೀತಿ, ದೌರ್ಜನ್ಯ, ಕಾಮಿಡಿ, ಎಮೋಷನಲ್ ಅಂಶಗಳೂ ಇವೆ. ನಾಲ್ಕು ಭರ್ಜರಿ ಫೈಟ್ಸ್ ಮತ್ತು ಮೂರು ಹಾಡುಗಳಿವೆ. ಕನ್ನಡದಲ್ಲಿ ಇತ್ತೀಚಿನ ದಿನಗಳಲ್ಲಿ ತೆರೆಗೆ ಬರುತ್ತಿರುವ ವಿಭಿನ್ನ ಕಥಾವಸ್ತು ಇರುವ ಸಿನಿಮಾಗಳ ಸಾಲಿನಲ್ಲಿ ಈ ಚಿತ್ರದ ಕಥೆಯು ಇದೆ ಎಂಬುದು ನಿರ್ದೇಶಕರ ಮಾತು.
ಇದನ್ನೂ ಓದಿ:ರಾಂಪಾ ಆಯ್ತು, ಇನ್ಮುಂದೆ ಜಗ್ಗಣ್ಣ ಹವಾ: ಹಾಸ್ಯನಟ ಪ್ರಕಾಶ್ ತುಮಿನಾಡ್
ಚಿತ್ರಕ್ಕೆ ಜಿ.ವಿ.ರಮೇಶ್ ಅವರ ಛಾಯಾಗ್ರಹಣವಿದೆ. ಸತೀಶ್ ಬಾಬು ಅವರು ಸಂಗೀತ ನೀಡುತ್ತಿದ್ದಾರೆ. ಯಶ ಫಿಲಂಸ್ ಬ್ಯಾನರ್ ಅಡಿ ಈ ಚಿತ್ರವನ್ನು ಆರ್. ಭಾಗ್ಯ ಅವರು ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾ ನಿರ್ಮಾಣಕ್ಕೂ ಮೊದಲು ನಿರ್ಮಾಪಕಿ ಭಾಗ್ಯ ಪಟ್ಟಾಭಿಷೇಕ ಮತ್ತು ಎಫ್ಐಆರ್ ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ.