ನವದೆಹಲಿ: 'ದಿ ಕೇರಳ ಸ್ಟೋರಿ' ಸಿನಿಮಾ ಸಲುವಾಗಿ ವಿಶ್ವ ಹಿಂದೂ ಪರಿಷತ್ (ವಿಹೆಚ್‌ಪಿ) ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಬುಧವಾರ ಪತ್ರ ಬರೆದಿದೆ. ದೆಹಲಿಯಲ್ಲಿ 'ದಿ ಕೇರಳ ಸ್ಟೋರಿ' ಸಿನಿಮಾವನ್ನು ತೆರಿಗೆ ಮುಕ್ತಗೊಳಿಸಿ ಎಂದು ಒತ್ತಾಯಿಸಿದೆ.
ವಿಶ್ವ ಹಿಂದೂ ಪರಿಷತ್, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಉತ್ತರಾಖಂಡದಲ್ಲಿ ಸಿನಿಮಾವನನ್ನು ತೆರಿಗೆ ಮುಕ್ತ ಎಂದು ಘೋಷಿಸಿದ್ದಕ್ಕಾಗಿ ಅಲ್ಲಿನ ಸರ್ಕಾರಗಳಿಗೆ ಧನ್ಯವಾದಗಳನ್ನು ಅರ್ಪಿಸಿದೆ. ಇದರ ಜೊತೆಗೆ, ಉಳಿದ ರಾಜ್ಯಗಳು ಸಹ ಈ ಕ್ರಮವನ್ನು ಅನುಸರಿಸುವಂತೆ ಒತ್ತಾಯಿಸಿದೆ. ಹೆಚ್ಚುತ್ತಿರುವ ಮತಾಂತರ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು, ದೆಹಲಿಯಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳನ್ನು ಉಳಿಸುವ ಸಲುವಾಗಿ ಶೀಘ್ರವಾಗಿ ಸಿನಿಮಾವನ್ನು ತೆರಿಗೆ ಮುಕ್ತ ಮಾಡುವುದು ಬಹಳ ಮುಖ್ಯ ಎಂದು ಅವರು ಹೇಳಿದರು.
ವಿಹೆಚ್‌ಪಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಹಿಂದಿಯಲ್ಲಿ ಪತ್ರ ಬರೆದಿದ್ದು, ಅದರಲ್ಲಿ 'ದಿ ಕೇರಳ ಸ್ಟೋರಿ' ಅತ್ಯಂತ ಮಹತ್ವದ ವಿಷಯದ ಮೇಲೆ ತಯಾರಾಗಿರುವ ಸಿನಿಮಾ ಎಂದು ಉಲ್ಲೇಖಿಸಲಾಗಿದೆ. ನಮ್ಮ ದೇಶದ ಮುಗ್ಧ ಸಹೋದರಿಯರ ಕಥೆ. ಮೊದಲು ಪ್ರೀತಿಯಲ್ಲಿ ಸಿಲುಕಿಸಿ ನಂತರ ಮತಾಂತರ ಮಾಡುತ್ತಾರೆ. ಅಲ್ಲದೇ ಅಮಾಯಕ ಹುಡುಗಿಯರ ಬ್ರೈನ್ ವಾಶ್ ಮಾಡಿ ನಂತರ ಅವರನ್ನು ಐಸಿಸ್ಗೆ ಸೇರಿಸಿಕೊಳ್ಳುತ್ತಾರೆ. ಭಯೋತ್ಪಾದಕ ಸಂಘಟನೆಯ ಚಟುವಟಿಕೆಗಳ ಬಗ್ಗೆ ಕಣ್ಣು ತೆರೆಸುವ ಸಂಗತಿಗಳನ್ನು ಚಿತ್ರದ ಮೂಲಕ ತೋರಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
'ಈ ಚಿತ್ರ ನಮ್ಮ ಸಹೋದರಿಯರು ಮತ್ತು ದೇಶದ ಹೆಣ್ಣುಮಕ್ಕಳ ಸುರಕ್ಷತೆಗಾಗಿ, ಕೆಲ ಅಪಾಯಕಾರಿ ಅಂಶಗಳಿಂದ ಜಾಗರೂಕರಾಗಿರಬೇಕು ಎಂಬ ಅಂಶದ ಮೇಲೆ ನಿರ್ಮಾಣಗೊಂಡಿದೆ. ಸದ್ಯದ ಪರಿಸ್ಥಿತಿಯಲ್ಲಿ ಅಂತಹ ಜಾಗೃತಿ ಮೂಡಿಸುವುದು ಬಹಳ ಮುಖ್ಯ. ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಉತ್ತರಾಖಂಡ್ ಮುಖ್ಯಮಂತ್ರಿಗಳು ತಮ್ಮ ರಾಜ್ಯಗಳಲ್ಲಿ ಚಲನಚಿತ್ರವನ್ನು ತೆರಿಗೆ ಮುಕ್ತಗೊಳಿಸಿದ್ದೇವೆ ಎಂದು ಘೋಷಿಸಿದ್ದಾರೆ. ಈ ಮೂಲಕ ಹೆಚ್ಚಿನ ಸಂಖ್ಯೆಯ ಜನರು ಜಾಗೃತಿ ಮೂಡಿಸುವ ಚಿತ್ರವನ್ನು ನೋಡಬಹುದು. ರಾಜಧಾನಿ ದೆಹಲಿಯು ಮತಾಂತರ, ಲವ್ ಜಿಹಾದ್ ಮತ್ತು ಭಯೋತ್ಪಾದನೆಯನ್ನು ಲೆಕ್ಕವಿಲ್ಲದಷ್ಟು ಬಾರಿ ಎದುರಿಸಿದೆ' ಎಂದು ವಿಶ್ವ ಹಿಂದೂ ಪರಿಷತ್ ಪತ್ರದಲ್ಲಿ ತಿಳಿಸಿದೆ. ಪತ್ರದ ಕೊನೆಯಲ್ಲಿ, 'ಆರ್ಥಿಕವಾಗಿ ದುರ್ಬಲವಾಗಿರುವ ಕುಟುಂಬಗಳು ಹೆಚ್ಚಿನ ಸಂಖ್ಯೆಯಲ್ಲಿ 'ದಿ ಕೇರಳ ಸ್ಟೋರಿ' ಚಲನಚಿತ್ರವನ್ನು ವೀಕ್ಷಿಸಲು ತೆರಿಗೆ ಮುಕ್ತ ಎಂದು ಘೋಷಿಸಲು ನಿಮ್ಮನ್ನು ವಿನಂತಿಸುತ್ತಿದ್ದೇವೆ, ಧನ್ಯವಾದ' ಎಂದು ಬರೆಯಲಾಗಿದೆ.
ಇದನ್ನೂ ಓದಿ:ವಿವಾದಗಳನ್ನು ಎದುರಿಸಿ ಬಾಕ್ಸ್ ಆಫೀಸ್ನಲ್ಲಿ 'ದಿ ಕೇರಳ ಸ್ಟೋರಿ' ಸದ್ದು: ಕೆಲಕ್ಷನ್ ಕೇಳಿದ್ರೆ ಹುಬ್ಬೇರಿಸ್ತೀರಾ!
ಹಲವರ ಟೀಕೆಗೆ ಒಳಗಾಗಿದ್ದರೂ ಸುದಿಪ್ತೋ ಸೇನ್ ನಿರ್ದೇಶನದ 'ದಿ ಕೇರಳ ಸ್ಟೋರಿ' ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದೆ. ಅದಾ ಶರ್ಮಾ ಮುಖ್ಯಭೂಮಿಕೆಯ ಈ ಸಿನಿಮಾ ಮೇ. 5ರಂದು ಚಿತ್ರ ತೆರೆಕಂಡಿತು. 5 ದಿನಗಳಲ್ಲೇ 50 ಕೋಟಿ ರೂ. ದಾಟಿದ ಚಿತ್ರದ ಕಲೆಕ್ಷನ್ ಸಂಖ್ಯೆ ಏರುತ್ತಿದೆ. ಸಿನಿಮಾ ವ್ಯವಹಾರ ವಿಶ್ಲೇಷಕ ತರಣ್ ಆದರ್ಶ್ ಪ್ರಕಾರ ಸಿನಿಮಾ ಈವರೆಗೆ 68.86 ಕೋಟಿ ರೂ. ಕಲೆಕ್ಷನ್ ಮಾಡಿದೆ.
ಇದನ್ನೂ ಓದಿ:ವಿಚ್ಛೇದನಕ್ಕಿಂತಲೂ ಹೆಚ್ಚು ನೋವಾಗಿದ್ದು ನನ್ನ ಹೆಸರು ಬೇರೆಯವರೊಂದಿಗೆ ತಳುಕು ಹಾಕಿದಾಗ; ನಾಗ ಚೈತನ್ಯ