ಕನ್ನಡ ಚಿತ್ರರಂಗದಲ್ಲಿ 80ರ ದಶಕದ ಖ್ಯಾತ ನಟಿಯರ ಪೈಕಿ ಮಹಾಲಕ್ಷ್ಮಿ ಕೂಡ ಒಬ್ಬರು. ಸ್ವಾಭಿಮಾನ, ಪರಶುರಾಮ, ಸಂಸಾರ ನೌಕೆಯಂತಹ ಜನಪ್ರಿಯ ಸಿನಿಮಾಗಳಲ್ಲಿ ನಟಿಸಿದ್ದ ಇವರು ಹಲವು ವರ್ಷಗಳ ಕಾಲ ಚಿತ್ರರಂಗದಿಂದ ದೂರವಿದ್ದರು. ಈಗ ಸುಮಾರು 30 ವರ್ಷಗಳ ನಂತರ 'TRP ರಾಮ' ಎಂಬ ಸಿನಿಮಾದಲ್ಲಿ ಬಣ್ಣ ಹಚ್ಚುವ ಮೂಲಕ ಸಿನಿ ಲೋಕಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ.
ಸದ್ಯ ಟ್ರೇಲರ್ ಮೂಲಕ ಗಾಂಧಿನಗರದಲ್ಲಿ ಸದ್ದು ಮಾಡಿರುವ 'TRP ರಾಮ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಹಿನ್ನೆಲೆ ಚಿತ್ರತಂಡ 'ಧರೆಗೆ ದೊಡ್ಡವಳು' ಎಂಬ ಹಾಡನ್ನು ಬಿಡುಗಡೆಗೊಳಿಸಿದೆ. A2 ಮ್ಯೂಸಿಕ್ ಯೂಟ್ಯೂಬ್ ಚಾನಲ್ನಲ್ಲಿ ಈ ಹಾಡು ರಿಲೀಸ್ ಆಗಿದ್ದು, ಲಿಂಗರಾಜು, ರವಿ ಪ್ರಸಾದ್ ಹಾಗೂ ಪ್ರವೀಣ್ ಸೂಡ ಸಾಹಿತ್ಯ ಬರೆದಿದ್ದಾರೆ. ತಾಯಿ ಕುರಿತ ಈ ಹಾಡಿಗೆ ಸಾಧು ಕೋಕಿಲ ಧ್ವನಿಯಾಗಿದ್ದಾರೆ. ರಾಜ್ ಗುರು ಹೊಸಕೋಟೆ ಟ್ಯೂನ್ ಹಾಕಿದ್ದಾರೆ.
ಈ ಬಗ್ಗೆ ಮಾತನಾಡಿದ ನಟಿ ಮಹಾಲಕ್ಷ್ಮಿ, "30 ವರ್ಷ ಆದ್ಮೇಲೆ ಒಂದೊಳ್ಳೆ ತಂಡದ ಜೊತೆ ಅಭಿನಯಿಸಿರುವ ಖುಷಿ ಇದೆ. ತಾಯಿ ಪಾತ್ರ ಮಾತ್ರವಲ್ಲ, ಇಡೀ ತಂಡ ತಾಯಿ ತರ ನೋಡಿಕೊಂಡರು. ಪ್ರಪಂಚದಲ್ಲಿ ಎರಡು ತರಹದ ಕುಟುಂಬ ಇರುತ್ತದೆ. ಒಂದು ನಾರ್ಮಲ್ ಫ್ಯಾಮಿಲಿ. ಇನ್ನೊಂದು ಅಬ್ ನಾರ್ಮಲ್ ಫ್ಯಾಮಿಲಿ. ಅಬ್ ನಾರ್ಮಲ್ ಫ್ಯಾಮಿಲಿ ಎದುರಿಸುವ ಕಷ್ಟವನ್ನು ಕಟ್ಟಿಕೊಡುವುದೇ ಸಿನಿಮಾ ಕಥೆ. ಇದೊಂದು ಎಮೋಷನಲ್ ಸ್ಟೋರಿ. ಪ್ರತಿಯೊಬ್ಬರು ಕಷ್ಟಪಟ್ಟು ಕೆಲಸ ಮಾಡಿದ್ದಾರೆ. ಆ ಪರಿಶ್ರಮಕ್ಕೆ ಬೆಲೆ ಸಿಗಲಿದೆ ಎಂಬ ನಂಬಿಕೆ ಇದೆ. ಸಮಾಜಕ್ಕೆ ಒಂದೊಳ್ಳೆ ಸಂದೇಶ ಕೊಡುವ ಸಿನಿಮಾ ಇದು" ಎಂದು ತಿಳಿಸಿದರು.
ಇದನ್ನೂ ಓದಿ:'ಟಗರು ಪಲ್ಯ' ಬ್ಲಾಕ್ಬಸ್ಟರ್; ಹ್ಯಾಟ್ರಿಕ್ ಗೆಲುವಿನಲ್ಲಿ ಡಾಲಿ ಧನಂಜಯ್