ಬಹುಭಾಷಾ ನಟಿಯಾಗಿ ಬೆಳ್ಳಿ ತೆರೆಯಲ್ಲಿ ಮಿಂಚಿದ ಕನ್ನಡ ಚಿತ್ರರಂಗದ ಹಿರಿಯ ನಟಿ ಡಾ.ಲೀಲಾವತಿ ಸಿನಿಮಾ ಸಾಧನೆ ಅನೇಕರಿಗೆ ಆದರ್ಶ. ನಾಲ್ಕೂವರೆ ದಶಕಗಳ ಕಾಲ ಪ್ರೇಕ್ಷಕರನ್ನು ಮನರಂಜಿಸಿದ ಪ್ರೇಮಲೋಕದ ಶಾರದಮ್ಮ ಇನ್ನು ನೆನಪು ಮಾತ್ರ. ಕೆಲವು ವರ್ಷಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಲೀಲಾವತಿ ಇಂದು ಇಹಲೋಕ ತ್ಯಜಿಸಿದ್ದಾರೆ. ಸ್ಯಾಂಡಲ್ವುಡ್ ಕಂಡ ಅಮೋಘ ಪ್ರತಿಭೆಯ ಸಿನಿ ಸಾಧನೆ ಎಂದಿಗೂ ಅವಿಸ್ಮರಣೀಯ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಇವರ ಹುಟ್ಟೂರು. ಲೀಲಾವತಿ ಅವರ ಮೂಲ ಹೆಸರು ಲೀಲಾ ಕಿರಣ್. ಚಿಕ್ಕವಯಸ್ಸಿನಲ್ಲೇ ನಾಟಕ, ರಂಗಭೂಮಿ ಬಗೆಗೆ ಅತೀವ ಆಸಕ್ತಿ ಹೊಂದಿದ್ದ ಲೀಲಾವತಿ, ಮೈಸೂರಿನಲ್ಲಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ಬಾಲ್ಯದಲ್ಲೇ ಸಿನಿಮಾ ವ್ಯಾಮೋಹ ಹೊಂದಿದ್ದ ಲೀಲಾವತಿಯವರು ಅದ್ಭುತವಾಗಿ ನೃತ್ಯ ಕೂಡ ಮಾಡುತ್ತಿದ್ದರು. ಇದೇ ಕಾರಣಕ್ಕೆ ಅವರು ಸುಲಭವಾಗಿ ಚಿತ್ರರಂಗದ ಮೆಟ್ಟಿಲೇರಲು ಸಾಧ್ಯವಾಯಿತು.
1949ರಲ್ಲಿ ನಿರ್ದೇಶಕ ಶಂಕರ್ ಸಿಂಗ್ ಅವರ 'ನಾಗಕನ್ನಿಕ' ಚಿತ್ರದಲ್ಲಿ ಚಂಚಲ ಕುಮಾರಿ ಎಂಬ ಪಾತ್ರದ ಮುಖಾಂತರ ಕನ್ನಡ ಚಿತ್ರರಂಗಕ್ಕೆ ಲೀಲಾ ಕಿರಣ್ ಪಾದಾರ್ಪಣೆ ಮಾಡಿದರು. ಅದರೆ 'ಮಾಂಗಲ್ಯ ಯೋಗ' ಸಿನಿಮಾ ಮೂಲಕ ನಾಯಕಿಯಾಗಿ ಪರಿಚಯವಾದರು. ಈ ಚಿತ್ರ ಒಂದು ಮಟ್ಟಿಗೆ ಗಮನ ಸೆಳೆಯಿತು. ನಂತರದಲ್ಲಿ ಅನೇಕ ಸಿನಿಮಾಗಳಲ್ಲಿ ಬಣ್ಣ ಹಚ್ಚಿದರು. ಕೊಟ್ಟ ಪಾತ್ರಕ್ಕೆ ಜೀವ ತುಂಬಿ ನಟಿಯಾಗಿ, ಪೋಷಕ ನಟಿಯಾಗಿ, ತಾಯಿಯಾಗಿ ಎಲ್ಲಾ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡರು.
ಡಾ.ರಾಜ್ಕುಮಾರ್ ಜೊತೆ 'ರಾಣಿ ಹೊನ್ನಮ್ಮ' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಲೀಲಾವತಿಯವರು ಅದೇ ರಾಜ್ಕುಮಾರ್ ಅವರಿಗೆ 'ನಾ ನಿನ್ನ ಮರೆಯಲಾರೆ' ಚಿತ್ರದಲ್ಲಿ ನಾಯಕಿಯ ತಾಯಿಯಾಗಿ ಕಾಣಿಸಿಕೊಂಡರು. ತನ್ನ ಮಗಳು ಪ್ರೇಮಿಸುವ ಹುಡುಗನನ್ನು ಅಳಿಯನನ್ನಾಗಿ ಅಂಗೀಕರಿಸದೇ ಆಕೆಗೆ ಬೇರೆ ಮದುವೆ ಮಾಡಿ ತನ್ನ ಪ್ರತಾಪ ತೋರಿ ಮಗಳ ಪ್ರೇಮ ವಿವಾಹದ ಕನಸನ್ನು ನುಚ್ಚುನೂರು ಮಾಡಿ ತನ್ನ ಇಚ್ಛೆಯಂತೆ ವಿಜಯ ಸಾಧಿಸುವ ಪಾತ್ರ ಆ ಕಾಲದಲ್ಲಿ ಇಡೀ ಯುವ ಸಮೂಹವನ್ನೇ ರೊಚ್ಚಿಗೆಬ್ಬಿಸಿತ್ತು.