ಕರ್ನಾಟಕ

karnataka

ETV Bharat / entertainment

600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ, ನೂರಾರು ಪ್ರಶಸ್ತಿ; ಕಲಾಸೇವೆ ಮುಗಿಸಿ ಮರೆಯಾದ ಲೀಲಾವತಿ - ಈಟಿವಿ ಭಾರತ ಕನ್ನಡ

Dr.Leelavati acted more than 600 movies: ಕನ್ನಡ ಚಿತ್ರರಂಗ ಕಂಡ ಅಮೋಘ ಪ್ರತಿಭೆ, ಹಿರಿಯ ನಟಿ ಲೀಲಾವತಿ ಅವರ ಸಿನಿ ಪಯಣ ಇಲ್ಲಿದೆ.

veteran Actress Leelavathi Acted more than 600 movies
600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ, ನೂರಾರು ಪ್ರಶಸ್ತಿಗಳು; ಅಭಿನೇತ್ರಿ ಲೀಲಾವತಿ ಕಲಾಸೇವೆ ಅದ್ಭುತ!

By ETV Bharat Karnataka Team

Published : Dec 8, 2023, 7:58 PM IST

Updated : Dec 8, 2023, 9:32 PM IST

ಕನ್ನಡ ಚಿತ್ರರಂಗದಲ್ಲಿ ನಾಲ್ಕೂವರೆ ದಶಕಗಳ ಕಾಲ ತಮ್ಮ ಅಮೋಘ ಅಭಿನಯದಿಂದ ಪ್ರೇಕ್ಷಕರನ್ನು ರಂಜಿಸಿದವರು ಹಿರಿಯ ನಟಿ ಡಾ.ಲೀಲಾವತಿ. 60 ಹಾಗೂ 70ರ ದಶಕದಲ್ಲಿ ಬಹುಬೇಡಿಕೆಯ ನಟಿಯಾಗಿ ಹಾಗೂ ಪೋಷಕ ಪಾತ್ರಗಳಲ್ಲಿ ಮಿಂಚಿದ್ದ ಇವರು ಇಂದು ಇಹಲೋಕ ತ್ಯಜಿಸಿದ್ದಾರೆ. ಕೆಲವು ವರ್ಷಗಳಿಂದ ವಯೋಸಹಜ ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದರು. ಇಂದು ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇವರ ಸಿನಿಮಾ ಜೀವನದ ಕುರಿತ ಕೆಲವು ಇಂಟ್ರಸ್ಟಿಂಗ್​ ವಿಚಾರಗಳು ಇಲ್ಲಿವೆ..

600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ

ಲೀಲಾವತಿ ಬಾಲ್ಯ ಹೀಗಿತ್ತು: ಲೀಲಾವತಿ ಅವರ ಮೂಲ ಹೆಸರು ಲೀಲಾ ಕಿರಣ್​. ಇವರು ಹುಟ್ಟಿದ್ದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ. ಚಿಕ್ಕವಯಸ್ಸಿನಲ್ಲೇ ನಾಟಕ, ರಂಗಭೂಮಿ ಬಗೆಗೆ ಆಸಕ್ತಿ ಹೊಂದಿದ್ದ ಲೀಲಾವತಿ, ಮೈಸೂರಿನಲ್ಲಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ಬಾಲ್ಯದಲ್ಲೇ ಕಷ್ಟವನ್ನು ಕಂಡಿದ್ದ ಅವರು, ಕೆಲವೆಡೆ ಮನೆ ಕೆಲಸವನ್ನೂ ಮಾಡಿ ನಂತರ ರಂಗಭೂಮಿಗೆ ನಟನೆ ಕಲಿಯೋದಕ್ಕೆ ಬರುತ್ತಿದ್ದರಂತೆ. ಬಾಲ್ಯದಲ್ಲೇ ಸಿನಿಮಾ ವ್ಯಾಮೋಹ ಹೊಂದಿದ್ದ ಲೀಲಾವತಿಯವರು ಅದ್ಭುತವಾಗಿ ನೃತ್ಯ ಕೂಡ ಮಾಡುತ್ತಿದ್ದರು. ಇದೇ ಕಾರಣಕ್ಕೆ ಅವರು ಸುಲಭವಾಗಿ ಚಿತ್ರರಂಗದ ಮೆಟ್ಟಿಲೇರಲು ಸಾಧ್ಯವಾಯಿತು.

ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ

ಎಪ್ಪತ್ತರ ದಶಕದಲ್ಲಿ ಸುಬ್ಬಯ್ಯ ನಾಯ್ಡು ಅವರ ಸಂಸ್ಥೆಯಲ್ಲಿ ರಂಗಭೂಮಿ ಕಲಾವಿದೆಯಾಗಿದ್ದ ಲೀಲಾವತಿ ಅವರು ಕಯಾದುವಿನ ಸಖಿಯಾಗಿ ಪ್ರಸಿದ್ದಿಯಾಗಿದ್ದರು. ಇದರ ಜೊತೆಗೆ ಮಹಾಲಿಂಗ ಭಾಗವತರ ನಾಟಕ ಸಂಸ್ಥೆಯಲ್ಲಿ ಲೀಲಾವತಿ ನಟನೆ ಹಾಗು ನೃತ್ಯ ನೋಡುವುದಕ್ಕೆ ಸಾಕಷ್ಟು ಜನರು ಆಗಮಿಸುತ್ತಿದ್ದರಂತೆ. ಆ ಸಮಯದಲ್ಲಿ ನಿರ್ದೇಶಕ ಶಂಕರ್ ಸಿಂಗ್ ಅವರ ಕಣ್ಣಿಗೆ ಲೀಲಾವತಿ ಬೀಳುತ್ತಾರೆ. ಅಲ್ಲಿಂದ ಲೀಲಾ ಕಿರಣ್ ಜೀವನಕ್ಕೆ ದೊಡ್ಡ ಬ್ರೇಕ್ ಸಿಗುತ್ತದೆ.

ಸಿನಿ ಪಯಣ: 1949ರಲ್ಲಿ ನಿರ್ದೇಶಕ ಶಂಕರ್ ಸಿಂಗ್ ಅವರ 'ನಾಗಕನ್ನಿಕ' ಚಿತ್ರದಲ್ಲಿ ಚಂಚಲ ಕುಮಾರಿ ಎಂಬ ಪಾತ್ರದ ಮುಖಾಂತರ ಕನ್ನಡ ಚಿತ್ರರಂಗಕ್ಕೆ ಲೀಲಾ ಕಿರಣ್​ ಪಾದಾರ್ಪಣೆ ಮಾಡುತ್ತಾರೆ. ಆದರೆ ಈ ಸಿನಿಮಾ ಅವರಿಗೆ ಅಷ್ಟೊಂದು ಹೆಸರು ತಂದುಕೊಡುವುದಿಲ್ಲ. ಹೀಗಾಗಿ ನಂತರವೂ ಸುಬ್ಬಯ್ಯ ನಾಯ್ಡು ಹಾಗು ಮಹಾಲಿಂಗ ಭಾಗವತರ ನಾಟಕ ಕಂಪನಿಯಲ್ಲಿ ಮತ್ತೆ ನಾಟಕಗಳನ್ನು ಮಾಡುತ್ತಿರುತ್ತಾರೆ. ಆ ಸಮಯದಲ್ಲಿ ಅವರಿಗೆ ಮತ್ತೊಂದು ಬಂಪರ್ ಆಫರ್ ಬರುತ್ತೆ. ಅದುವೆ 'ಮಾಂಗಲ್ಯ ಯೋಗ'. ಈ ಸಿನಿಮಾಗೆ ಹೀರೋಯಿನ್​ ಆಗುವ ಸುವರ್ಣಾವಕಾಶ ಅವರಿಗೆ ಸಿಗುತ್ತದೆ.

600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಲೀಲಾವತಿ ನಟನೆ

ಈ 'ಮಾಂಗಲ್ಯ ಯೋಗ' ಚಿತ್ರ ಒಂದು ಮಟ್ಟಿಗೆ ಗಮನ ಸೆಳೆಯುತ್ತದೆ. ಬಳಿಕ ಲೀಲಾವತಿಯ ಎರಡನೇ ಸಿನಿಮಾ 'ರಾಜ ಮಾಲಯ ಸಿಂಹ'. ಈ ಚಿತ್ರದ ಮೂಲಕ ಕನ್ನಡದಿಂದ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾರೆ. ಇದು ಅವರಿಗೆ ಹಿಟ್​ ತಂದುಕೊಡುತ್ತದೆ. ಈ ಸಿನಿಮಾ ಮುಗಿಯುತ್ತಿದ್ದಂತೆ ಡಾ.ರಾಜ್​ಕುಮಾರ್​ ಜೊತೆ ನಟಿಸುವ ಬಹುದೊಡ್ಡ ಅವಕಾಶವೊಂದು ಅವರ ಪಾಲಿಗೆ ಒದಗಿ ಬರುತ್ತದೆ.

1959ರಲ್ಲಿ 'ಅಬ್ಬಾ ಆ ಹುಡುಗಿ' ಹಾಗೂ 'ಧರ್ಮ ವಿಜಯ' ಎಂಬ ಚಿತ್ರದಲ್ಲಿ ರಾಜ್​ಕುಮಾರ್ ಜೊತೆ ಅಭಿನಯಿಸುತ್ತಾರೆ. ಈ ಎರಡು ಚಿತ್ರಗಳು ಲೀಲಾವತಿಯವರನ್ನು ಸ್ಯಾಂಡಲ್​ವುಡ್​ ಗುರುತಿಸುವಂತೆ ಮಾಡುತ್ತದೆ. ಈ ಚಿತ್ರಗಳ ಬಳಿಕ ಮತ್ತೆ ಅಣ್ಣಾವ್ರ 'ರಣಧೀರ ಕಂಠೀರವ' ಎಂಬ ಸಿನಿಮಾದಲ್ಲಿ ಅಭಿನಯಿಸುತ್ತಾರೆ. ಜಿ.ವಿ.ಅಯ್ಯರ್ ಬರೆದ ಕಥೆ, ಎನ್ ಸಿ ರಾಜನ್ ನಿರ್ದೇಶನದಲ್ಲಿ ಮೂಡಿ ಬಂದ ಈ ಸಿನಿಮಾ ಆ ಕಾಲದಲ್ಲಿ ಸೂಪರ್ ಹಿಟ್ ಆಗಿ ರಾಜ್​ಕುಮಾರ್ ಹಾಗೂ ಲೀಲಾವತಿ 'ಲಕ್ಕಿ ಜೋಡಿ' ಎಂದೇ ಕರೆಯಿಸಿಕೊಳ್ಳುತ್ತಾರೆ.

ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ

ನಂತರದಲ್ಲಿ ರಾಣಿ ಹೊನ್ನಮ್ಮ, ಸಂತ ತುಕಾರಾಂ, ಕಣ್ತೆರೆದು ನೋಡು, ಕೈವಾರ ಮಹಾತ್ಮೆ, ಗಾಳಿ ಗೋಪುರ, ಕನ್ಯಾರತ್ನ, ಕುಲವಧು, ವೀರ ಕೇಸರಿ, ಮನ ಮೆಚ್ಚಿದ ಮಡದಿ ಹೀಗೆ ಹಲವಾರು ಚಿತ್ರಗಳ ನಾಯಕಿಯಾದರು. ಕೆಲ ಚಿತ್ರಗಳಲ್ಲಿ ನಾಯಕ ನಟರಿಗಿಂತ ಹೆಚ್ಚಿನ ಸಂಭಾವನೆ ಪಡೆಯುವ ನಾಯಕಿಯಾಗಿ ಕನ್ನಡ ಚಿತ್ರರಂಗದಲ್ಲಿ ಲೀಲಾವತಿ ಬೆಳೆಯುತ್ತಾರೆ.

ಇವರು ಡಾ.ರಾಜ್​ಕುಮಾರ್ ಮಾತ್ರವಲ್ಲದೇ, ಕಲ್ಯಾಣ್​ ಕುಮಾರ್, ಉದಯ್ ಕುಮಾರ್, ಅಶ್ವಥ್, ಬಾಲಕೃಷ್ಣ, ನರಸಿಂಹರಾಜ್, ಪ್ರಭಾಕರ್, ಶಂಕರ್​ನಾಗ್, ಅಂಬರೀಷ್, ವಿಷ್ಣುವರ್ಧನ್, ಅನಂತ್ ನಾಗ್, ದ್ವಾರಕೀಶ್ ಅಲ್ಲದೇ, ಸ್ಟಾರ್ ನಟಿಯರಾದ ಪಂಡರಿ ಬಾಯಿ, ಭಾರತಿ ವಿಷ್ಣುವರ್ಧನ್, ಜಯಂತಿ, ಕಲ್ಪನಾ, ಆರತಿ ಸೇರಿದಂತೆ ಆ ಕಾಲದ ಎಲ್ಲಾ ಸ್ಟಾರ್ ನಟರು ಹಾಗೂ ನಟಿಯರ ಜೊತೆ ಅಭಿನಯಿಸಿರುವ ಏಕೈಕ ನಟಿ ಲೀಲಾವತಿ ಎನ್ನಬಹುದು.

ಲೀಲಾವತಿ

600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ: ಕನ್ನಡದಲ್ಲಿ ಗೆಜ್ಜೆ ಪೂಜೆ, ಬಿಳಿ ಹೆಂಡ್ತಿ, ನಾಗರಹಾವು, ನಾ ನಿನ್ನ ಮರೆಯಲಾರೆ, ಮದುವೆ ಮಾಡಿ ನೋಡು, ಸಂತ ತುಕಾರಾಂ, ತುಂಬಿದ ಕೊಡ, ಕಣ್ತೆರೆದು ನೋಡು, ರಾಣಿ ಹೊನ್ನಮ್ಮ, ಗೆಜ್ಜೆ ಪೂಜೆ, ಸಿಪಾಯಿರಾಮು, ನಾಗರಹಾವು, ಭಕ್ತ ಕುಂಬಾರ, ಬಿಳಿ ಹೆಂಡ್ತಿ, ನಾ ನಿನ್ನ ಮರೆಯಲಾರೆ, ಕಳ್ಳ ಕುಳ್ಳ, ಡಾಕ್ಟರ್ ಕೃಷ್ಣ, ವೀರ ಕೇಸರಿ ಸೇರಿದಂತೆ 400ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಮಾತ್ರವಲ್ಲದೇ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಬಣ್ಣ ಹಚ್ಚಿರುವ ಇವರು ಒಟ್ಟು 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಪ್ರಶಸ್ತಿ-ಪುರಸ್ಕಾರಗಳು: ಕನ್ನಡದ ಚಿತ್ರರಂಗದ ಖ್ಯಾತ ನಟಿ ಲೀಲಾವತಿ ಅವರಿಗೆ ಅನೇಕ ಗೌರವಗಳು, ಪ್ರಶಸ್ತಿ-ಪುರಸ್ಕಾರಗಳು ಸಂದಿವೆ. ಕರ್ನಾಟಕ ಸರ್ಕಾರ ಚಲನಚಿತ್ರರಂಗದ ಜೀವಮಾನ ಸಾಧನೆಗೆ ನೀಡುವ ಅತ್ತ್ಯುನ್ನತ ಪ್ರಶಸ್ತಿ, ಡಾ.ರಾಜ್​ಕುಮಾರ್ ಪ್ರಶಸ್ತಿಯನ್ನು 1999-2000ನೇ ಸಾಲಿನಲ್ಲಿ ಪಡೆದಿದ್ದಾರೆ. ತುಮಕೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿಯನ್ನು 2008ರಲ್ಲಿ ಪಡೆದುಕೊಂಡಿದ್ದಾರೆ. ಇನ್ನು ನಾಲ್ಕು ಬಾರಿ ಅತ್ಯುತ್ತಮ ಪೋಷಕ ನಟಿ ಎಂಬ ಕರ್ನಾಟಕ ರಾಜ್ಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಇದನ್ನೂ ಓದಿ:ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ವಿಧಿವಶ

Last Updated : Dec 8, 2023, 9:32 PM IST

ABOUT THE AUTHOR

...view details