ಹಾಲಿವುಡ್ ಹಿರಿಯ ನಟ ಬ್ಯಾರಿ ನ್ಯೂಮನ್ ವಯೋಸಹಜತೆಯಿಂದ ನಿಧನರಾಗಿದ್ದಾರೆ. ಅವರಿಗೆ 92 ವರ್ಷ ವಯಸ್ಸಾಗಿತ್ತು. ಇವರು 1971 ರ ಕಲ್ಟ್ ಆ್ಯಕ್ಷನ್ ಥ್ರಿಲ್ಲರ್ 'ವ್ಯಾನಿಶಿಂಗ್ ಪಾಯಿಂಟ್' ನಲ್ಲಿ ನಟಿಸಿದ್ದಕ್ಕಾಗಿ ಹೆಸರುವಾಸಿಯಾಗಿದ್ದಾರೆ. ನ್ಯೂಯಾರ್ಕ್- ಪ್ರೆಸ್ಬಿಟೇರಿಯನ್ ಕೊಲಂಬಿಯಾ ಯೂನಿವರ್ಸಿಟಿ ಇರ್ವಿಂಗ್ ಮೆಡಿಕಲ್ ಸೆಂಟರ್ನಲ್ಲಿ ನ್ಯೂಮನ್ ಮೇ 11ರಂದು ವಯೋಸಹಜತೆಯಿಂದ ನಿಧನರಾದರು ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ನ್ಯೂಮನ್ ಪತ್ನಿ ಏಂಜೆಲಾ ಅವರು ಯುಎಸ್ನಲ್ಲಿ ಈ ಸುದ್ದಿ ಹಂಚಿಕೊಂಡಿದ್ದಾರೆ.
'ವ್ಯಾನಿಶಿಂಗ್ ಪಾಯಿಂಟ್' ಸಿನಿಮಾದಲ್ಲಿ ನ್ಯೂಮನ್ ಮಾಜಿ ರೇಸ್ ಕಾರ್ ಡ್ರೈವರ್ ಕೊವಾಲ್ಸ್ಕಿ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಸಿನಿಮಾಗಾಗಿ ಅವರು ಪ್ರೇಕ್ಷಕರಿಂದ ವಿಶೇಷ ಮೆಚ್ಚುಗೆಯನ್ನು ಗಳಿಸಿದ್ದಾರೆ. ಈ ಚಲನಚಿತ್ರವನ್ನು 70 ರ ದಶಕದ ಅಮೆರಿಕನ್ ಆ್ಯಕ್ಷನ್ ಚಲನಚಿತ್ರಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಈ ಚಿತ್ರವನ್ನು ರಿಚರ್ಡ್ ಸಿ ಸರಾಫಿಯಾನ್ ನಿರ್ದೇಶಿಸಿದ್ದಾರೆ.
ಇದನ್ನೂ ಓದಿ:ಸಂಜಯ್ ಪುರಣ್ ಸಿಂಗ್ ನಿರ್ದೇಶನದ 72 ಹುರೇನ್ ಚಿತ್ರದ ಟೀಸರ್ ಬಿಡುಗಡೆ
ವ್ಯಾನಿಶಿಂಗ್ ಪಾಯಿಂಟ್ ಅನ್ನು ಎಂಟು ವಾರಗಳಲ್ಲಿ ಚಿತ್ರೀಕರಿಸಲಾಯಿತು. ಸ್ಟೀವನ್ ಸ್ಪೀಲ್‌ಬರ್ಗ್ ಇದನ್ನು ತನ್ನ ಮೆಚ್ಚಿನ ಚಲನಚಿತ್ರಗಳಲ್ಲಿ ಒಂದೆಂದು ಕರೆದರು. ಹೀಗಾಗಿ ಈ ಸಿನಿಮಾ ಮತ್ತಷ್ಟು ಹಿಟ್ ಆಗಿತ್ತು. ಸಿಲ್ವೆಸ್ಟರ್ ಸ್ಟಲ್ಲೋನ್ ನಟಿಸಿದ ಡೇಲೈಟ್ (1996), ಬೌಫಿಂಗರ್ (1999), ಸ್ಟೀವನ್ ಸೋಡರ್‌ಬರ್ಗ್‌ನ ದಿ ಲೈಮಿ (1999) ಮತ್ತು 40 ಡೇಸ್ ಮತ್ತು 40 ನೈಟ್ಸ್ (2002) ನಂತಹ ಚಲನಚಿತ್ರಗಳಲ್ಲಿ ನ್ಯೂಮನ್ ಕಾಣಿಸಿಕೊಂಡಿದ್ದಾರೆ.