ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅಭಿನಯದ ವೇದಾ ಸಿನಿಮಾ ಇಂದು ಕನ್ನಡ, ತೆಲುಗು ಹಾಗು ತಮಿಳು ಭಾಷೆಯಲ್ಲಿ ತೆರೆ ಕಂಡಿದೆ. ಶಿವಣ್ಣನ 125ನೇ ಸಿನಿಮಾ ಎಂಬ ಕಾರಣಕ್ಕೆ ರಾಜವಂಶದ ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ನಿರೀಕ್ಷೆಯಿತ್ತು. ಆ ನಿರೀಕ್ಷೆಯನ್ನು ಸಿನಿಮಾ ನನಸು ಮಾಡಿದೆ ಎನ್ನುತ್ತಿದ್ದಾರೆ ಅಭಿಮಾನಿಗಳು.
ಹೆಣ್ಣು ಮಕ್ಕಳ ಮೇಲೆ ನಡೆಯುವ ಅನ್ಯಾಯಕ್ಕೆ ಸೇಡು ತೀರಿಸಿಕೊಳ್ಳುವ ಕಥೆಯೇ 'ವೇದ'. ಈಗಾಗಲೇ ಈ ರೀತಿಯ ಕಥಾಹಂದರವಿರುವ ಸಾಕಷ್ಟು ಸಿನಿಮಾಗಳಲ್ಲಿ ಬಂದಿವೆ. ಆದರೆ ನಿರ್ದೇಶಕ ಎ ಹರ್ಷ ಈ ಕಥೆಯನ್ನು 1960 ಹಾಗು 1980ರ ಕಾಲಘಟ್ಟಕ್ಕೆ ತಕ್ಕಂತೆ ಹೆಣೆದಿರೋದು ವಿಶೇಷ. ಮಹಿಳೆಯರು ಅನ್ಯಾಯ ಆದ ಕ್ಷಣವೇ ಆ ಅನ್ಯಾಯದ ವಿರುದ್ಧ ಸಿಡಿದು ನಿಲ್ಲಬೇಕು ಎಂಬುದೇ ವೇದದ ಸಂದೇಶ.
ಇಡೀ ಚಿತ್ರದಲ್ಲಿ ಶಿವರಾಜ್ಕುಮಾರ್ ಮತ್ತು ಅದಿತಿ ಸಾಗರ್ ಕಾಂಬಿನೇಷನ್ ಹೈಲೈಟ್ ಆಗಿದೆ. ಅಪ್ಪ ಮಗಳ ಪಾತ್ರದಲ್ಲಿ ಇವರಿಬ್ಬರೂ ಅತ್ಯುತ್ತಮವಾಗಿ ಅಭಿನಯಿಸಿದ್ದಾರೆ. ಶಿವರಾಜ್ಕುಮಾರ್ ಸಿನಿಮಾ ಕೆರಿಯರ್ನಲ್ಲಿ ಎಲ್ಲಾ ಬಗೆಯ ಕಾಸ್ಟೂಮ್ಗಳನ್ನು ಹಾಕಿ ಅಭಿನಯಿಸಿದ್ದಾರೆ. ಆದರೆ ವೇದದಲ್ಲಿ ಹೆಚ್ಚಾಗಿ ಬ್ಲ್ಯಾಕ್ ಶರ್ಟ್ ಹಾಗು ಸಿಂಪಲ್ ಲುಂಗಿಯಲ್ಲಿ ಕಾಣಿಸಿಕೊಂಡಿದ್ದಾರೆ. ಕಣ್ಣಿನಲ್ಲೇ ಎಲ್ಲವನ್ನೇ ಹೇಳುವ ಎಕ್ಸ್ಪ್ರೆಶನ್ ಎಂಥವರಲ್ಲಿಯೂ ಭಯ ಮೂಡಿಸುವಂತಿದೆ. ಅದಿತಿ ಸಾಗರ್ ಭವಿಷ್ಯದ ನಾಯಕಿ ಅನ್ನೋ ಸುಳಿವನ್ನು ವೇದ ತೋರಿಸಿಕೊಟ್ಟಿದೆ.