ಸ್ಯಾಂಡಲ್ವುಡ್ನ ನವ ಜೋಡಿ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಮದುವೆ ಆದಾಗಿನಿಂದಲೂ ಸುದ್ದಿಯಲ್ಲಿದ್ದಾರೆ. ಇದೀಗ ದಂಪತಿ ಹನಿಮೂನ್ಗೆಂದು ವಿದೇಶಕ್ಕೆ ಹಾರಿದ್ದಾರೆ. ಈಸ್ಟ್ ಆಫ್ರಿಕಾದ ಮಾರಿಷಸ್ನಲ್ಲಿ ಸಿಂಹಪ್ರಿಯಾ ಎಂಜಾಯ್ ಮಾಡಿದ್ದಾರೆ. ಅಲ್ಲಿನ ಫೋಟೋಗಳನ್ನು ನಟ ವಸಿಷ್ಠ ಸಿಂಹ ಮತ್ತು ನಟಿ ಹರಿಪ್ರಿಯಾ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಇವರಿಬ್ಬರ ಸುಂದರ ದಾಂಪತ್ಯಕ್ಕೆ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ.
ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಜೊತೆಗಿರುವ ಫೋಟೋ ಅಲ್ಲದೇ ಒಂದು ವಿಡಿಯೋ ಕೂಡ ಶೇರ್ ಮಾಡಿಕೊಂಡಿದ್ದಾರೆ. ಅವರಿಬ್ಬರು ಬೋಟಿಂಗ್ ಮಾಡುವ ದೃಶ್ಯ ಇದಾಗಿದೆ. ಯಾವುದೇ ಕ್ಯಾಪ್ಶನ್ ನೀಡದೆ ಹಾರ್ಟ್ ಸಿಂಬಲ್ ಹಾಕಿ ಶೇರ್ ಮಾಡಿರುವ ಫೋಟೋ ಮತ್ತು ವಿಡಿಯೋಗೆ ಅಭಿಮಾನಿಗಳು ಮೆಚ್ಚುಗೆಯ ಸುರಿಮಳೆಗೈದಿದ್ದಾರೆ. ನೆಟ್ಟಿಗರು ಬಗೆಬಗೆಯ ಬರಹಗಳಿಂದ ಕಮೆಂಟ್ ವಿಭಾಗವನ್ನು ತುಂಬಿದ್ದಾರೆ.
ಪತಿಗೆ ಸರ್ಪ್ರೈಸ್ ನೀಡಿದ್ದ ಹರಿಪ್ರಿಯಾ: ಕೆಲವು ದಿನಗಳ ಹಿಂದೆ ವಸಿಷ್ಠ ಸಿಂಹ ಅವರು ಹರಿಪ್ರಿಯಾ ಜೊತೆಗಿನ ಫೋಟೋ ಶೇರ್ ಮಾಡಿಕೊಂಡು ಅವರಿಗೆ ಕೃತಜ್ಞತೆ ತಿಳಿಸಿದ್ದರು. ಸಿನಿಮಾ ವಿಚಾರವಾಗಿ ಬ್ಯುಸಿಯಾಗಿದ್ದ ಸಿಂಹ ಶೂಟಿಂಗ್ಗಾಗಿ ತೆಲಂಗಾಣಕ್ಕೆ ತೆರಳಿದ್ದರು. ಪತ್ನಿ ಹರಿಪ್ರಿಯಾ ಸರ್ಪ್ರೈಸ್ ವಿಸಿಟ್ ಕೊಟ್ಟು ವಸಿಷ್ಠ ಸಿಂಹ ಮತ್ತು ಅವರ ಸಿಬ್ಬಂದಿಗೆ ವಿಶೇಷ ಅಡುಗೆ ತಯಾರಿಸಿ ಉಣಬಡಿಸಿದ್ದರು. ಈ ಬಗ್ಗೆ ನಟ ಫೋಟೋಗಳನ್ನು ಶೇರ್ ಮಾಡಿ, ಸಂತಸ ಹಂಚಿಕೊಂಡು ಪತ್ನಿಗೆ ಧನ್ಯವಾದ ಅರ್ಪಿಸಿದ್ದರು.
ಇದನ್ನೂ ಓದಿ:ಅಭಿಮಾನಿಗಳನ್ನು ದೂರ ಸರಿಸಲು ಯತ್ನಿಸಿದ ಭದ್ರತಾ ಸಿಬ್ಬಂದಿ: ಮಲೈಕಾ ಅರೋರಾ ಮಾಡಿದ್ದೇನು ಗೊತ್ತಾ?
ಪ್ರೀತಿಸಿ ಮದುವೆಯಾದ ಸಿಂಹಪ್ರಿಯಾ: ಸ್ಯಾಂಡಲ್ವುಡ್ನಲ್ಲಿ ಪ್ರೀತಿಸಿ ಮದುವೆಯಾದವರ ಸಾಲಿಗೆ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಸೇರಿದ್ದಾರೆ. ಕಳೆದ ಮೂರು ವರ್ಷಗಳಿಂದ ಗೌಪ್ಯವಾಗಿ ಡೇಟಿಂಗ್ನಲ್ಲಿದ್ದ ಇವರು ಕಳೆದ ಡಿಸೆಂಬರ್ ತಿಂಗಳವರೆಗೆ ಎಲ್ಲಿಯೂ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಅಲ್ಲದೇ ಮದುವೆ ಬಗ್ಗೆ ಯಾವುದೇ ಸುಳಿವು ಬಿಟ್ಟು ಕೊಟ್ಟಿರಲಿಲ್ಲ. ಆದರೆ ಕಳೆದ ಐದಾರು ತಿಂಗಳ ಹಿಂದೆ ಇವರಿಬ್ಬರು ಮದುವೆಯಾಗಲಿದ್ದಾರೆ ಎಂಬ ಸುದ್ದಿಗಳು ಕೇಳಿಬಂದಿದ್ದವು. ಅದೇ ಸಮಯದಲ್ಲಿ ದುಬೈ ಪ್ರವಾಸ ಮುಗಿಸಿ ಇಬ್ಬರು ಜೊತೆ ಜೊತೆಯಾಗಿ ಕೈ ಹಿಡಿದುಕೊಂಡು ಮಾಧ್ಯಮದ ಮುಂದೆ ಕಾಣಿಸಿಕೊಂಡಿದ್ದರು.
ಇದಾದ ಕೆಲವು ದಿನಗಳ ಬಳಿಕ ಸಿಂಹಪ್ರಿಯಾ ಕುಟುಂಬಸ್ಥರ ಸಮ್ಮುಖದಲ್ಲಿ ಗೌಪ್ಯವಾಗಿಯೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅಲ್ಲದೇ ಅವರಿಬ್ಬರು ತಮ್ಮ ಎಂಗೇಜ್ಮೆಂಟ್ ಫೋಟೋಗಳನ್ನು ಹಂಚಿಕೊಂಡು ಎಲ್ಲಾ ಗಾಸಿಪ್ಗಳಿಗೆ ತೆರೆ ಎಳೆದಿದ್ದರು. ಅದಾಗಿ ನಾವಿಬ್ಬರು ಜನವರಿ 26 ರಂದು ಮದುವೆಯಾಗುತ್ತಿರುವುದಾಗಿ ಮಾಧ್ಯಮದ ಮುಂದೆ ಹೇಳಿಕೊಂಡಿದ್ದರು. ಕೊನೆಗೂ ಅದೇ ದಿನಾಂಕದಂದು ಮೈಸೂರಿನ ಸಚ್ಚಿದಾನಂದ ಆಶ್ರಮದಲ್ಲಿ ಸರಳ ವಿವಾಹವಾಗಿದ್ದು, ಆರತಕ್ಷತೆ ಕಾರ್ಯಕ್ರಮ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆದಿತ್ತು. ಹೀಗೆ ಮದುವೆ ಮುಗಿಸಿಕೊಂಡ ಜೋಡಿ ದೇವಸ್ಥಾನಗಳಿಗೆ ಆಗಾಗ ಭೇಟಿ ನೀಡುತ್ತಿದ್ದರು. ಇದೀಗ ಹನಿಮೂನಿಗೆಂದು ವಿದೇಶಕ್ಕೆ ತೆರಳಿ ಎಂಜಾಯ್ ಮಾಡುತ್ತಿದ್ದಾರೆ.
ಇದನ್ನೂ ಓದಿ:ಕನಸುಗಾರ ರವಿಚಂದ್ರನ್ ಸುಪುತ್ರನ ಸಿನಿಮಾ ಶೀರ್ಷಿಕೆ ಅನಾವರಣ: ಕ್ಯಾಚಿ ಟೈಟಲ್ನೊಂದಿಗೆ ಬಂದ ವಿಕ್ರಮ್