ತಾರಾ ಜೋಡಿ ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಇಟಲಿಯ ಟಸ್ಕನಿಯ ಬೋರ್ಗೊ ಸ್ಯಾನ್ ಫೆಲಿಸ್ ಹೋಟೆಲ್‌ನಲ್ಲಿ ಹಸೆಮಣೆ ಏರಿದ್ದಾರೆ. ಅದ್ಧೂರಿ, ಆಕರ್ಷಕ ಸಮಾರಂಭದ ಫೋಟೋ, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಚಿರಂಜೀವಿ, ಪವನ್ ಕಲ್ಯಾಣ್, ಅಲ್ಲು ಅರ್ಜುನ್, ರಾಮ್ ಚರಣ್ ಸೇರಿದಂತೆ ಆಪ್ತರು ಮತ್ತು ಕುಟುಂಬ ಸದಸ್ಯರು ಸಂತೋಷಕೂಟದಲ್ಲಿ ಭಾಗಿಯಾಗಿದ್ದರು. ಹಿಂದೂ ಸಂಪ್ರದಾಯಗಳ ಪ್ರಕಾರವೇ ಮದುವೆ ನಡೆಯಿತು.
ನವದಂಪತಿಗಳಾದ ವರುಣ್ ಮತ್ತು ಲಾವಣ್ಯ ತಮ್ಮ ಬದುಕಿನ ವಿಶೇಷ ದಿನದಂದು ಆಕರ್ಷಕವಾಗಿ ಕಾಣುತ್ತಿದ್ದರು. ವಧು ಲಾವಣ್ಯ ತ್ರಿಪಾಠಿ ಕೆಂಪು ಸೀರೆಯಲ್ಲಿ ಕಂಗೊಳಿಸಿದರೆ, ವರುಣ್ ತೇಜ್ ದಂತ ಬಣ್ಣದ ಶೇರ್ವಾನಿಯಲ್ಲಿ ಸಖತ್ ಲುಕ್ ಕೊಟ್ಟರು.
ವರುಣ್ ತೇಜ್ ಸೋದರ ಸಂಬಂಧಿಗಳಾದ ಅಲ್ಲು ಅರ್ಜುನ್ ಮತ್ತು ರಾಮ್ ಚರಣ್, ಚಿಕ್ಕಪ್ಪ ಚಿರಂಜೀವಿ ಮತ್ತು ಪವನ್ ಕಲ್ಯಾಣ್ ತಮ್ಮ ಕುಟುಂಬಸ್ಥರೊಂದಿಗೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ವಿಂಟೇಜ್ ಕಾರಿನಲ್ಲಿ ವರುಣ್ ತೇಜ್ ರಾಯಲ್ ಎಂಟ್ರಿ ಕೊಟ್ಟರು. ಡೋಲು ಸದ್ದಿನೊಂದಿಗೆ ವರನನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು. ವಿವಾಹದ ನಂತರ ಕುಟುಂಬಸ್ಥರು, ಆಪ್ತರು ಕುಣಿದು ಕುಪ್ಪಳಿಸಿದರು.