ಮೆಗಾ ಫ್ಯಾಮಿಲಿಯಲ್ಲಿ ಮದುವೆ ಸಂಭ್ರಮ ಜೋರಾಗಿದೆ. ಟಾಲಿವುಡ್ ಸೂಪರ್ಸ್ಟಾರ್ ವರುಣ್ ತೇಜ್ ಮತ್ತು ನಟಿ ಲಾವಣ್ಯ ತ್ರಿಪಾಠಿ ಶೀಘ್ರದಲ್ಲೇ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಜೂನ್ 9 ರಂದು ಈ ಜೋಡಿಯ ನಿಶ್ಚಿತಾರ್ಥ ನೆರವೇರಿತ್ತು. ಇದೀಗ ಮದುವೆ ಸಲುವಾಗಿ ಹೈದರಾಬಾದ್ನಲ್ಲಿರುವ ಖ್ಯಾತ ಡಿಸೈನರ್ ಮನೀಶ್ ಮಲ್ಹೋತ್ರಾ ಅವರ ಶೋ ರೂಮ್ನಲ್ಲಿ ಜೋಡಿ ಕಾಣಿಸಿಕೊಂಡಿದ್ದಾರೆ. ಇವರಿಬ್ಬರು ತಮ್ಮ ವೆಡ್ಡಿಂಗ್ ಡ್ರೆಸ್ ಪರ್ಚೇಸ್ಗಾಗಿ ಇಲ್ಲಿಗೆ ಭೇಟಿ ನೀಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿದೆ.
ಮದುವೆ ಯಾವಾಗ? ಎಲ್ಲಿ?: ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಮದುವೆಗೆ ಡೇಟ್ ಫಿಕ್ಸ್ ಆಗಿದೆ. ಇತ್ತೀಚೆಗಿನ ಮಾಹಿತಿ ಪ್ರಕಾರ, ನವೆಂಬರ್ 1ರಂದು ಇಟಲಿಯಲ್ಲಿ ಅದ್ಧೂರಿ ಸಮಾರಂಭ ನಡೆಯಲಿದೆ. ಎರಡೂ ಕುಟುಂಬಗಳ ಸಮ್ಮುಖದಲ್ಲಿ ಮೂರು ದಿನಗಳ ಕಾಲ ಡೆಸ್ಟಿನೇಶನ್ ವೆಡ್ಡಿಂಗ್ ಪ್ಲಾನ್ ಮಾಡಲಾಗಿದೆ. ಮದುವೆಗಾಗಿ ಮೆಗಾ ಫ್ಯಾಮಿಲಿ ಇಟಲಿಗೆ ತೆರಳಲಿದ್ದಾರೆ. ಆದರೆ, ಪವರ್ ಸ್ಟಾರ್ ಪವನ್ ಕಲ್ಯಾಣ್ ತಮ್ಮ ಬ್ಯುಸಿ ಶೆಡ್ಯೂಲ್ನಿಂದಾಗಿ ಮದುವೆ ಕಾರ್ಯಕ್ರಮಗಳಲ್ಲಿ ಭಾಗಿಯಾಗದೇ ಇರಬಹುದು ಎನ್ನಲಾಗಿದೆ.
ಪ್ರೀತಿಗೆ ದಾಂಪತ್ಯದ ಮುದ್ರೆ:ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ 2016ರಿಂದ ಡೇಟಿಂಗ್ನಲ್ಲಿದ್ದರು. ಇವರಿಬ್ಬರು 2017ರ 'ಮಿಸ್ಟರ್' ಚಿತ್ರದ ಸೆಟ್ನಲ್ಲಿ ಪರಸ್ಪರ ಭೇಟಿಯಾದರು. ಅಲ್ಲಿಂದ ಸ್ನೇಹ ಬೆಳೆದು ನಂತರ ಪ್ರೀತಿಸಲು ಶುರು ಮಾಡಿದರು. ಇದೇ ವರ್ಷ ಜೂನ್ 9ರಂದು ಎಂಗೇಜ್ಮೆಂಟ್ ಮಾಡಿಕೊಳ್ಳುವ ಮೂಲಕ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದರು. ಇದೀಗ ಜೋಡಿ ತಮ್ಮ ಇಷ್ಟು ವರ್ಷದ ಪ್ರೀತಿಗೆ ದಾಂಪತ್ಯದ ಮುದ್ರೆ ಒತ್ತಲು ಸಜ್ಜಾಗಿದ್ದಾರೆ. ವರುಣ್ ತೇಜ್ ನಟ ಹಾಗೂ ನಿರ್ಮಾಪಕ ನಾಗೇಂದ್ರ ಬಾಬು ಅವರ ಪುತ್ರ. ಚಿರಂಜೀವಿ ಮತ್ತು ಪವನ್ ಕಲ್ಯಾಣ್ ಅವರ ಸೋದರಳಿಯ.