ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 10 ಹೊಸ ತಿರುವು ಪಡೆದುಕೊಳ್ಳುವ ಲಕ್ಷಣಗಳು ಎದ್ದು ಕಾಣಿಸುತ್ತಿವೆ. ಕಳೆದ ವಾರದ ವೀಕೆಂಡ್ ಎಪಿಸೋಡ್‌ನ ಎಲಿಮಿನೇಷನ್ ಟೈಮಲ್ಲಿ ಸೇಫ್ ಆದರೂ ವರ್ತೂರ್ ಸಂತೋಷ್ ಮನೆಯಿಂದ ಹೊರ ನಡೆಯುವ ತೀರ್ಮಾನ ಮಾಡಿದ್ದರು. ಈ ಮೂಲಕ ವರ್ತೂರು ಸಂತೋಷ್ ಸುದೀಪ್ ಅವರಿಗೆ, ಬಿಗ್‌ಬಾಸ್ ಮನೆಯ ಸದಸ್ಯರಿಗೆ, ತಮಗೆ ವೋಟ್ ಹಾಕಿದ 34 ಲಕ್ಷಕ್ಕಿಂತ ಅಧಿಕ ಜನರಿಗೆ ಒಂದು ಬಿಗ್ ಶಾಕ್ ನೀಡಿದ್ದರು.
"ನನಗೆ ಹೊರಗೆ ನಡೆದ ಘಟನೆಯನ್ನು ಮರೆತು ಆಡಬೇಕು ಎಂದು ಇಲ್ಲಿಗೆ ಬಂದೆ. ಆದರೆ ನನಗೆ ಅದರಿಂದ ಹೊರಗೆ ಬರಲು ಸಾಧ್ಯಾಗುತ್ತಿಲ್ಲ. ಹಾಗಾಗಿ ನಾನು ಶೋ ಯಿಂದ ಹೊರಗೆ ಹೋಗಲು ಬಯಸುತ್ತೇನೆ" ಎಂದು ಹೇಳಿದರು. ಇದರಿಂದ ಎಲ್ಲರಿಗೂ ಶಾಕ್ ಆಯಿತು. ಈ ಸಂದರ್ಭದಲ್ಲಿ ನಿರೂಪಕ ಸುದೀಪ್ ಕೂಡ ‘ನೀವು ಜನರ ಪ್ರೀತಿಯ ವಿರುದ್ಧ ಹೋಗ್ತಿದ್ದೀರಾ’ ಎಚ್ಚರಿಸಿದರು. ಕೊನೆಯಲ್ಲಿ, ‘ಮನೆಯೊಳಗೆ ಇರ್ತೀರೋ ಬಿಡ್ತೀರೋ ನಿಮಗೆ ಬಿಟ್ಟಿದ್ದು. ಆದರೆ ನನಗಂತೂ ಡಿಸಪಾಯಿಂಟ್ ಆಗಿದೆ’ ಎಂದು ಹೇಳಿ ಬೇಸರದಿಂದಲೇ ವೇದಿಕೆ ಬಿಟ್ಟು ಹೊರ ನಡೆದರು.
ಇದೀಗ ವರ್ತೂರು ಸಂತೋಷ್ ಅವರನ್ನು ಮನೆಯೊಳಗೆ ಉಳಿದುಕೊಳ್ಳುವಂತೆ ಮನವೊಲಿಸಲು ಇಡೀ ಮನೆಯ ಸದಸ್ಯರೆಲ್ಲರೂ ಪ್ರಯತ್ನಿಸುತ್ತಿದ್ದಾರೆ. ಇದೇ ಹೊತ್ತಿನಲ್ಲಿ ಬಿಗ್‌ಬಾಸ್ ಮನೆಗೆ ಮತ್ತೊಬ್ಬರು ಗೆಸ್ಟ್ ಎಂಟ್ರಿ ಕೊಟ್ಟಿದ್ದಾರೆ! ಬಿಗ್‌ಬಾಸ್ ಮನೆಯ ಬಾಗಿಲು ತೆರೆಯುತ್ತಿದ್ದ ಹಾಗೆಯೇ ಜನಪ್ರಿಯ ಧಾರಾವಾಹಿ ನಟಿ, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ, ‘ಭಾಗ್ಯಲಕ್ಷ್ಮಿ’ಯ ಮುಖ್ಯಪಾತ್ರದಲ್ಲಿ ನಟಿಸುತ್ತಿರುವ ಸುಷ್ಮಾ ಕೆ ರಾವ್ ಬಿಗ್‌ಬಾಸ್ ಮನೆಯೊಳಗೆ ಪ್ರವೇಶಿಸಿದ್ದಾರೆ.