ಚೆನ್ನೈ (ತಮಿಳುನಾಡು):ತಮಿಳಿನ ಖ್ಯಾತ ಹಾಸ್ಯ ನಟ ಮೈಲಿಸ್ವಾಮಿ (57) ನಿಧನರಾಗಿದ್ದಾರೆ. ಶನಿವಾರ ತಡರಾತ್ರಿವರೆಗೂ ಚೆನ್ನಾಗಿದ್ದ ಅವರು ಹಠಾತ್ ಹೃದಯಾಘಾತದಿಂದ ಬೆಳಗಿನ ಜಾವ ಕೊನೆಯುಸಿಳೆದಿದ್ದಾರೆ. ಮೈಲಿಸ್ವಾಮಿ ಅವರ ಅಕಾಲಿಕ ನಿಧನದಿಂದ ಚಿತ್ರರಂಗಕ್ಕೆ ಆಘಾತ ಉಂಟಾಗಿದ್ದು, ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. ಇದೇ ವೇಳೆ ಆಪ್ತರು ಮೈಲಿಸ್ವಾಮಿ ಅವರ ಜೊತೆಗಿನ ಒಡನಾಟವನ್ನು ನೆನಪಿಸಿಕೊಂಡು ಕಂಬನಿ ಮಿಡಿದಿದ್ದಾರೆ.
ಚೆನ್ನೈನ ಮೇಲುಕೊಟ್ಟೈಯೂರ್ ಶಿವನ ದೇವಸ್ಥಾನದಲ್ಲಿ ತೆರಳಿದ್ದ ಮೈಲಿಸ್ವಾಮಿ ನಂತರ ಮನೆಗೆ ಬರುತ್ತಿದ್ದರು. ಈ ವೇಳೆ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಅಂತೆಯೇ, ಮೊದಲಿಗೆ ಅವರನ್ನು ಖಾಸಗಿ ಆಸ್ಪತ್ರೆಗೆ ರವಾನಿಸಿತ್ತು. ಆದರೆ, ಅಷ್ಟರಲ್ಲೇ ಅವರು ಕೊನೆಯುಸಿಳೆದಿದ್ದಾರೆ. ಪಾರ್ಥಿವ ಶರೀರಕ್ಕೆ ಶ್ರದ್ಧಾಂಜಲಿ ಸಲ್ಲಿಸಿದ ಬಳಿಕ ಮಾತನಾಡಿದ ಡ್ರಮ್ಸ್ ಶಿವಮಣಿ, ಮುಂಜಾನೆ 3 ಗಂಟೆಯವರೆಗೂ ಮೈಲಿಸ್ವಾಮಿ ನನ್ನೊಂದಿಗಿದ್ದರು. ಆದರೆ, 5.30ರ ಸುಮಾರಿಗೆ ಅವರ ಮಗ ಕರೆ ಮಾಡಿ ತಂದೆ ಇನ್ನಿಲ್ಲ ಎಂದು ಹೇಳಿದ್ದು ನನಗೆ ನಂಬಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ.
ಮೈಲಿಸ್ವಾಮಿ ನಿಧನವು ಆಘಾತಕಾರಿ. ಅವರು ಪ್ರತಿದಿನ ಬೆಳಗ್ಗೆ ನನಗೆ ಮೊಬೈಲ್ ಮೂಲಕ ಸಂದೇಶ ಕಳುಹಿಸುತ್ತಿದ್ದರು. ಹಾಗೆಯೇ, ನಿನ್ನೆ ಶಿವರಾತ್ರಿ ದಿನದಂದು ನನಗೆ ಮೆಸೇಜ್ ಮಾಡಿದ್ದರು. ಇಂದು ತಿರುವಣ್ಣಾಮಲೈಗೆ ಹೋಗುವುದಿಲ್ಲ. ಮೇಲುಕೊಟ್ಟೈಯೂರ್ ಶಿವನ ದೇವಸ್ಥಾನದಲ್ಲಿ ಭೇಟಿಯಾಗಬಹುದು ಎಂದು ಹೇಳಿದ್ದರು. ಆಗ ನಾನು ಹೇಗಾದರೂ ಮಾಡಿ ಬರುತ್ತೇನೆ ಎಂಬುದಾಗಿ ತಿಳಿಸಿದ್ದೆ ಎಂದು ಡ್ರಮ್ಸ್ ಶಿವಮಣಿ ಮಾಹಿತಿ ನೀಡಿದರು.