ಕರ್ನಾಟಕ

karnataka

ETV Bharat / entertainment

ಕಾಂತಾರಕ್ಕೆ 'ವರಾಹ ರೂಪಂ' ಸೇರ್ಪಡೆ.. ಹಾಡು ಕೇಳಿ ಆನಂದಿಸಿ - ವರಾಹ ರೂಪಂ ವಿವಾದ

'ವರಾಹ ರೂಪಂ' ಹಾಡಿನ ಕುರಿತು ವಿವಾದ ಸೃಷ್ಟಿಯಾಗಿತ್ತು. ಕೇರಳದ ಕೋರ್ಟ್​ ನೀಡಿದ್ದ ತಡೆಯಾಜ್ಞೆ ತೆರವುಗೊಂಡಿರುವ ಹಿನ್ನೆಲೆಯಲ್ಲಿ ಆ ಹಾಡು ಇಂದಿನಿಂದ ಚಿತ್ರಮಂದಿರ, ಯೂಟ್ಯೂಬ್​, ಓಟಿಟಿ ಸೇರಿದಂತೆ ಎಲ್ಲೆಡೆ ಲಭ್ಯವಿದೆ.

Varaha Rupam Original song added to Kantara movie
ವರಾಹ ರೂಪಂ ಮೂಲ ಹಾಡು

By

Published : Dec 3, 2022, 3:35 PM IST

ಕಾಂತಾರ ಸಿನಿಮಾದ ಜನಪ್ರಿಯ ವರಾಹ ರೂಪಂ ಹಾಡಿನ ವಿಚಾರವಾಗಿ ತಗಾದೆ ತೆಗೆದು ನ್ಯಾಯಾಲಯದ ಮೆಟ್ಟಿಲೇರಿದ್ದ ಕೇರಳದ ತೈಕ್ಕುಡಂ ಬ್ರಿಡ್ಜ್ ಆಲ್ಬಂ ತಂಡಕ್ಕೆ ಹಿನ್ನಡೆಯಾಗಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. 'ವರಾಹ ರೂಪಂ' ಹಾಡಿನ ಕುರಿತು ವಿವಾದ ಸೃಷ್ಟಿಯಾಗಿತ್ತು. ಆದ್ರೀಗ ಕೇರಳದ ಕೋರ್ಟ್​ ನೀಡಿದ್ದ ತಡೆಯಾಜ್ಞೆ ತೆರವುಗೊಂಡಿರುವ ಹಿನ್ನೆಲೆಯಲ್ಲಿ ಆ ಹಾಡು ಇಂದಿನಿಂದ ಚಿತ್ರಮಂದಿರ, ಯೂಟ್ಯೂಬ್​, ಓಟಿಟಿ ಸೇರಿದಂತೆ ಎಲ್ಲೆಡೆ ಲಭ್ಯವಿದೆ.

ಇದಕ್ಕೂ ಮುನ್ನ, ವರಾಹ ರೂಪಂ ಹಾಡನ್ನು ಯೂಟ್ಯೂಬ್ ಸೇರಿದಂತೆ ಯಾವುದೇ ಪ್ಲಾಟ್​ಫಾರ್ಮ್​ಗಳಲ್ಲಿ ಅನುಮತಿ ಇಲ್ಲದೇ ಬಳಸಬಾರದು ಎಂದು ಕೇರಳದ ಕೋರ್ಟ್​ ಆದೇಶ ಹೊರಡಿಸಿತ್ತು. ಇದಕ್ಕೆ ತಲೆ ಬಾಗಿದ್ದ ಕಾಂತಾರ ಚಿತ್ರ ತಂಡವು, 'ವರಾಹ ರೂಪಂ' ಹಾಡನ್ನು ಚಿತ್ರಮಂದಿರ, ಹೊಂಬಾಳೆ ಫಿಲಂಸ್​ನ ಯೂಟ್ಯೂಬ್​ ಚಾನಲ್​, ಮ್ಯೂಸಿಕ್ ಆ್ಯಪ್​ಗಳಾದ ಸಾವನ್ ಸೇರಿದಂತೆ ಮುಂತಾದ ಕಡೆಗಳಿಂದ ಹಾಡನ್ನು ಡಿಲೀಟ್​ ಮಾಡಿತ್ತು. ಓಟಿಟಿಯಲ್ಲಿ 'ಕಾಂತಾರ' ಚಿತ್ರ ಬಿಡುಗಡೆಯಾದಾಗಿನಿಂದ ಬೇರೆ ಟ್ಯೂನ್​ ಬಳಸಲಾಗಿತ್ತು.

ಆ ನಂತರ ತಡೆಯಾಜ್ಞೆ ತೆರವಾಗಿ ಹಾಡನ್ನು ಪುನಃ ಬಳಸಿಕೊಳ್ಳುವುದಕ್ಕೆ ಅನುಮತಿ ಸಿಕ್ಕಿದೆ. ಅದರಂತೆ, ಇಂದಿನಿಂದ ಚಿತ್ರಮಂದಿರ, ಓಟಿಟಿ, ಸೋಷಿಯಲ್​ ಮೀಡಿಯಾ ಸೇರಿದಂತೆ ಎಲ್ಲ ವೇದಿಕೆಗಳಲ್ಲೂ ಮೂಲ 'ವರಾಹ ರೂಪಂ' ಹಾಡು ಲಭ್ಯವಿದೆ. ಕೆಲ ದಿನಗಳ ಹಿಂದೆ ಅಮೆಜಾನ್ ಪ್ರೈಮ್ ಸಂಸ್ಥೆಯು ವರಾಹ ರೂಪಂ ಮೂಲ ಹಾಡನ್ನು ತಮಿಳು ಮತ್ತು ಮಲಯಾಳಂ ಆವೃತ್ತಿಯಲ್ಲಿ ಸೇರಿಸಿತ್ತು. ಇದೀಗ ಕನ್ನಡದಲ್ಲೂ ಲಭ್ಯವಿದೆ.

ಪ್ರಕರಣವೇನು?:ತಮ್ಮ ಬ್ಯಾಂಡ್​​ನ ಒರಿಜಿನಲ್ ಮ್ಯೂಸಿಕ್ ಅನ್ನು ಚಲನಚಿತ್ರ ತಯಾರಕರು ನಕಲು ಮಾಡಿದ್ದಾರೆ ಎಂದು ಆರೋಪಿಸಿ, ಹಾಡಿಗೆ ತಡೆ ಕೋರಿ ತೈಕುಡಮ್ ಬ್ರಿಡ್ಜ್ ಆಲ್ಬಂ ಬ್ಯಾಂಡ್​​ನವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. 'ವರಾಹರೂಪಂ' ಹಾಡು 2015 ರಲ್ಲಿ ಬಿಡುಗಡೆ ಮಾಡಿದ ತಮ್ಮ ಮೂಲ ಸಂಯೋಜನೆ 'ನವರಸ'ದ ನಕಲು ಎಂದು ಬ್ಯಾಂಡ್ ಆರೋಪಿಸಿತ್ತು. ಈ ಹಿನ್ನೆಲೆಯಲ್ಲಿ ಹಾಡನ್ನು ಪ್ರಸಾರ ಮಾಡದಂತೆ ಅಮೆಜಾನ್ ಪ್ರೈಮ್, ಯೂಟ್ಯೂಬ್ ಮತ್ತು ಲಿಂಕ್ ಮ್ಯೂಸಿಕ್ ಕಂಪನಿಗಳಿಗೆ ಕೇರಳ ನ್ಯಾಯಾಲಯ ನಿರ್ದೇಶಿಸಿತ್ತು.

ಕಾಂತಾರ ಚಿತ್ರವನ್ನು ಹೊಂಬಾಳೆ ಫಿಲಂಸ್​ ಸಂಸ್ಥೆಯಡಿ ನಿರ್ಮಾಪಕ ವಿಜಯ್​ ಕುಮಾರ್​ ಕಿರಗಂದೂರು ನಿರ್ಮಿಸಿದ್ದಾರೆ. ರಿಷಬ್​​​ ಶೆಟ್ಟಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದರು. ರಿಷಬ್​​ ಶೆಟ್ಟಿ, ಸಪ್ತಮಿ ಗೌಡ, ಅಚ್ಯುತ್​ ಕುಮಾರ್​, ಕಿಶೋರ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಚಿತ್ರಕ್ಕೆ, ಅಜನೀಶ್​ ಲೋಕನಾಥ್​ ಸಂಗೀತ ಮತ್ತು ಅರವಿಂದ್​ ಅವರ ಛಾಯಾಗ್ರಹಣವಿದೆ. 'ಕಾಂತಾರಾ' ಚಿತ್ರವು 60 ದಿನಗಳನ್ನು ಪೂರೈಸಿ, ಈಗಲೂ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ.

ಇದನ್ನೂ ಓದಿ:ಕೇರಳ ಕೋರ್ಟ್​​ನಲ್ಲಿ 'ಕಾಂತಾರ'ಕ್ಕೆ ಜಯ: ವರಾಹ ರೂಪಂ ಹಾಡು ಕೇಳಿ ಆನಂದಿಸಿ

ಕಾಂತಾರ ಸಿನಿಮಾ ಸೆಪ್ಟೆಂಬರ್​ 30ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದು, ಕೆಲ ದಿನಗಳ ಹಿಂದೆ 50 ದಿನ ಪೂರೈಸಿರುವ ಸಂಭ್ರಮ ಆಚರಿಸಿತ್ತು. ಕನ್ನಡದಲ್ಲಿ ಬಿಡುಗಡೆ ಆದ ಕೆಲವೇ ದಿನಗಳಲ್ಲಿ ತೆಲುಗು, ತಮಿಳು, ಮಲೆಯಾಳಂ ಮತ್ತು ಹಿಂದಿ ಆವೃತ್ತಿಗಳಲ್ಲಿ ರಿಲೀಸ್​ ಆಯಿತು. ತಮಿಳು ಭಾಷೆಯ ಕಾಂತಾರ ಇಂದು 50 ದಿನಗಳ ಸಂಭ್ರಮವನ್ನು ಆಚರಿಸುತ್ತಿದೆ.

ABOUT THE AUTHOR

...view details