ಕರ್ನಾಟಕ

karnataka

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂಗೀತ ಮಾಂತ್ರಿಕ ಉಸ್ತಾದ್ ರಶೀದ್​​ ಖಾನ್ ಸ್ಥಿತಿ ಗಂಭೀರ

By ETV Bharat Karnataka Team

Published : Dec 23, 2023, 6:30 PM IST

ಕೋಲ್ಕತ್ತಾ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಖ್ಯಾತ ಸಂಗೀತಗಾರ ಉಸ್ತಾದ್ ರಶೀದ್​​ ಖಾನ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ.

Ustad Rashid Khan is in very critical situation hospitalised in kolkata
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂಗೀತ ಮಾಂತ್ರಿಕ ಉಸ್ತಾದ್ ರಶೀದ್​​ ಖಾನ್ ಸ್ಥಿತಿ ಗಂಭೀರ

ಕೋಲ್ಕತ್ತಾ:ಪ್ರಾಸ್ಟೇಟ್​ ಕ್ಯಾನ್ಸರ್​ ಹಿನ್ನೆಲೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಸಂಗೀತ ಮಾಂತ್ರಿಕ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಉಸ್ತಾದ್ ರಶೀದ್​​ ಖಾನ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಉಸ್ತಾದ್​ ಅವರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಕಳೆದ ಒಂದು ತಿಂಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಲಾವಿದನನ್ನು ಪ್ರಸ್ತುತ ಪೀರ್​ಲೆಸ್​ ಆಸ್ಪತ್ರೆಯಲ್ಲಿ ವೆಂಟಿಲೇಟರ್​ನಲ್ಲಿ ಇರಿಸಲಾಗಿದ್ದು, ಅವರ ಆರೋಗ್ಯ ಸ್ಥಿತಿಯನ್ನು ವೈದ್ಯರು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಆರಂಭದಲ್ಲಿ ಉಸ್ತಾದ್​ ರಶೀದ್​ ಖಾನ್​ ಅವರನ್ನು ಮುಂಬೈನ ಟಾಟಾ ಕ್ಯಾನ್ಸರ್ ಸಂಶೋಧನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಕೋಲ್ಕತ್ತಾಗೆ ಶಿಫ್ಟ್​ ಮಾಡಲಾಯಿತು.

ಅಂದಿನಿಂದ ಅವರು ಅನೇಕ ಬಾರಿ ಅನಾರೋಗ್ಯಕ್ಕೆ ಒಳಗಾಗಿದ್ದರು. ಈ ಸಮಯದಲ್ಲಿ ಅವರು ಚೇತರಿಸಿಕೊಂಡಾಗಲೆಲ್ಲಾ ಹಾಡುಗಳನ್ನು ರೆಕಾರ್ಡ್​ ಮಾಡುತ್ತಿದ್ದರು. ಕೊನೆಯದಾಗಿ ಉಸ್ತಾದ್​, ಸಂಧ್ಯಾ ಮುಖೋಪಾಧ್ಯಾಯ ಅವರ ಪುಣ್ಯತಿಥಿಯಂದು ಕಲಾವಿದರಿಗೆ ಅಂತಿಮ ನಮನ ಸಲ್ಲಿಸಲು ರವೀಂದ್ರ ಸದನಕ್ಕೆ ಬಂದಿದ್ದರು.

ಕಳೆದ ಕೆಲವು ದಿನಗಳಿಂದ ಖಾನ್ ಅವರ ದೈಹಿಕ ಸ್ಥಿತಿ ಹದಗೆಟ್ಟಿದೆ ಎಂದು ವರದಿಯಾಗಿದೆ. ಒಂದೆಡೆ ಮಾರಣಾಂತಿಕ ಕಾಯಿಲೆಯ ವಿರುದ್ಧ ಹೋರಾಡುತ್ತಿದ್ದರೆ, ಮತ್ತೊಂದೆಡೆ ಅಧಿಕ ರಕ್ತದೊತ್ತಡ ಅವರನ್ನು ಭಾದಿಸಿದೆ. ಅವರ ದೈಹಿಕ ಸ್ಥಿತಿಯ ಬಗ್ಗೆ ವೈದ್ಯರು ಮತ್ತು ಅಭಿಮಾನಿಗಳು ಚಿಂತಿತರಾಗಿದ್ದಾರೆ.

ಉಸ್ತಾದ್ ರಶೀದ್​​ ಖಾನ್ ಬಗ್ಗೆ: ಖಾನ್ ಉತ್ತರ ಪ್ರದೇಶದ ಬದೌನ್‌ನಲ್ಲಿ ಜನಿಸಿದರು. ಇವರು ಗುಲಾಮ್ ಮುಸ್ತಫಾ ಖಾನ್ (ಭಾರತೀಯ ಶಾಸ್ತ್ರೀಯ ಸಂಗೀತಗಾರ) ಅವರ ಸೋದರಳಿಯ. ಬಾಲ್ಯದಿಂದಲೂ ಸಂಗೀತದಲ್ಲಿ ಆಸಕ್ತಿ ಹೊಂದಿದ್ದ ಅವರು ಉಸ್ತಾದ್ ನಿಸಾರ್ ಹುಸೇನ್ ಖಾನ್ ಅವರಿಂದ ಸಂಗೀತ ಪಾಠ ಕಲಿಯಲು ಪ್ರಾರಂಭಿಸಿದರು. ಬೆಳಗಿನ ಜಾವ ನಾಲ್ಕು ಗಂಟೆಯಿಂದ ತರಬೇತಿ ಆರಂಭಿಸುತ್ತಿದ್ದ ಅವರು ಇಡೀ ದಿನ ಒಂದು ಹಾಡಿನ ಟಿಪ್ಪಣಿಯನ್ನು ಅಭ್ಯಾಸ ಮಾಡುತ್ತಿದ್ದರು. ಅವರು ತಮ್ಮ 11ನೇ ವಯಸ್ಸಿನಲ್ಲಿ ಮೊದಲ ಪ್ರದರ್ಶನ ನೀಡಿದರು.

ಉಸ್ತಾದ್ ರಶೀದ್​​ ಖಾನ್ ಅನೇಕ ಬಂಗಾಳಿ ಹಾಡಿಗೆ ಖ್ಯಾತಿ ಪಡೆದಿದ್ದಾರೆ. ಜನಪ್ರಿಯ ಬಾಲಿವುಡ್ ಹಾಡುಗಳಾದ 'ತೋರೆ ಬಿನಾ ಮೋಹೆ ಚೈನ್ ನಹಿ' ಮತ್ತು 'ಆಯೋಗೆ ಜಬ್ ತುಮ್' ಇವರ ಖ್ಯಾತಿಗೆ ಸೇರಿದೆ. 'ಮೈ ನೇಮ್ ಈಸ್ ಖಾನ್', 'ರಾಜ್ 3', 'ಬಾಪಿ ಬರಿ ಜಾ', 'ಕಾದಂಬರಿ', 'ಶಾದಿ ಮೈನ್ ಜರೂರ್ ಅಣ್ಣಾ', 'ಮಂಟೋ' ಮತ್ತು 'ಮೀಟಿನ್ ಮಾಸಿ' ರಶೀದ್​ ಖಾನ್​ ಧ್ವನಿ ನೀಡಿದ ಕೆಲವು ಚಿತ್ರಗಳು. ಇವರಿಗೆ 2006 ರಲ್ಲಿ ಪದ್ಮಶ್ರೀ ಮತ್ತು 2012 ರಲ್ಲಿ ಬಂಗಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. 2022ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಯಿತು.

ಇದನ್ನೂ ಓದಿ:ಇಳಿಕೆ ಕಂಡ 'ಡಂಕಿ' ಗಳಿಕೆ: 'ಸಲಾರ್​' ಅಬ್ಬರದೆದುರು ಮಂಕಾಯ್ತಾ ಶಾರುಖ್​ ಸಿನಿಮಾ?

ABOUT THE AUTHOR

...view details