ಸಿಸಿಎಲ್ ಕ್ರಿಕೆಟ್ ಆಟದಿಂದ ತಮ್ಮದೇ ಆದ ಐಡೆಂಟಿಟಿ ಕ್ರಿಯೇಟ್ ಮಾಡಿಕೊಂಡಿರುವ ನಟ ರಾಜೀವ್. ಸದ್ಯ ಉಸಿರೇ ಉಸಿರೇ ಸಿನಿಮಾ ಮೂಲಕ ಮತ್ತೆ ತೆರೆ ಮೇಲೆ ರಂಜಿಸಲು ಬರುತ್ತಿದ್ದಾರೆ. ಉಸಿರೇ ಉಸಿರೇ ಸಿನಿಮಾದ ಚಿತ್ರೀಕರಣ ಈಗಾಗಲೇ ಅಂತಿಮ ಹಂತದಲ್ಲಿದ್ದು, ಬಿಡುಗಡೆಗೆ ಸಜ್ಜಾಗಿರೋ
ಚಿತ್ರಕ್ಕೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಯಹಸ್ತ ಸಿಕ್ಕಿದೆ. ಸಿ ಎಂ ವಿಜಯ್ ನಿರ್ದೇಶನದ ಉಸಿರೇ ಉಸಿರೇ ಚಿತ್ರದ ಟ್ರೇಲರ್ನ್ನು ಇತ್ತೀಚಿಗೆ ಕಿಚ್ಚ ಸುದೀಪ್ ಬಿಡುಗಡೆ ಮಾಡಿ ಚಿತ್ರ ತಂಡಕ್ಕೆ ಆಲ್ ದಿ ಬೆಸ್ಟ್ ಹೇಳಿದರು.
ಓರಾಯನ್ ಮಾಲ್ನ ಸುಂದರ ಹೊರಾಂಗಣದ ಜಗಮಗಿಸುವ ವೇದಿಕೆಯಲ್ಲಿ ನಡೆದ ಸಮಾರಂಭದಲ್ಲಿ, ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ಕಿಚ್ಚ ಸುದೀಪ್, "ಉಸಿರೇ ಉಸಿರೇ" ನನ್ನ ಗೆಳೆಯ ರಾಜೀವ್ ನಾಯಕನಾಗಿ ನಟಿಸಿರುವ ಚಿತ್ರ. ಟ್ರೇಲರ್ ತುಂಬಾ ಚೆನ್ನಾಗಿ ಮೂಡಿಬಂದಿದೆ. ದೇವರಾಜ್, ತಾರಾ, ಬ್ರಹ್ಮಾನಂದಂ, ಅಲಿ ಮುಂತಾದ ಹಿರಿಯ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ನಾನು ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದೇನೆ. ನಿರ್ಮಾಪಕ ಪ್ರದೀಪ್ ಯಾದವ್, ನಿರ್ದೇಶಕ ಸಿ ಎಂ ವಿಜಯ್ ಹಾಗೂ ನಾಯಕ ರಾಜೀವ್ ಸಾಕಷ್ಟು ಶ್ರಮಪಟ್ಟು ಉತ್ತಮವಾದ ಚಿತ್ರ ಮಾಡಿದ್ದಾರೆ. ಸದ್ಯದಲ್ಲೇ ಬಿಡುಗಡೆಯಾಗಲಿರುವ ಈ ಚಿತ್ರವನ್ನು ತಾವೆಲ್ಲ ನೋಡಿ ಪ್ರೋತ್ಸಾಹಿಸಬೇಕು ಎಂದರು.
ಬಳಿಕ ನಟ ರಾಜೀವ್ ಮಾತನಾಡಿ, ನಮ್ಮ ಚಿತ್ರದ ಹೆಸರು "ಉಸಿರೇ ಉಸಿರೇ". ನನ್ನ ಉಸಿರು ಸುದೀಪ್ ಸರ್. ಅವರನ್ನು ಕಂಡರೆ ನನಗೆ ಅಷ್ಟು ಪ್ರೀತಿ. ಅವರು ನನಗೆ ನೀಡುತ್ತಿರುವ ಸಹಕಾರಕ್ಕೆ ನಾನು ಆಭಾರಿ. ಇಡೀ ಚಿತ್ರತಂಡದ ಶ್ರಮದಿಂದ ಒಂದೊಳ್ಳೆ ಚಿತ್ರ ನಿರ್ಮಾಣವಾಗಿದೆ. ಟ್ರೇಲರ್ ಬಿಡುಗಡೆಯಾಗಿದ್ದು ಎಲ್ಲರಿಗೂ ಇಷ್ಟ ಆಗುತ್ತೆ ಎಂದು ಹೇಳಿದರು.
ನಿರ್ದೇಶಕ ಸಿ. ಎಂ ವಿಜಯ್ ಮಾತನಾಡಿ, ಸುದೀಪ್ ಸರ್ ಅವರ ಮುಂದೆ ನನಗೆ ಮಾತೇ ಬರುತ್ತಿಲ್ಲ. ಇಡೀ ತಂಡದ ಸಹಕಾರದಿಂದ "ಉಸಿರೇ ಉಸಿರೇ" ಉತ್ತಮವಾಗಿ ಮೂಡಿಬಂದಿದೆ. ಈ ಚಿತ್ರ ಪ್ರೇಕ್ಷಕರಿಗೆ ಇಷ್ಟ ಆಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.