'ಮೋಜೋ' ಸಿನಿಮಾ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದ ಯುವನಟ ಮನು ಇದೀಗ ನಿರ್ದೇಶನಕ್ಕಿಳಿದಿದ್ದಾರೆ. 'ಯೂಸ್‌ಲೆಸ್ ಫೆಲೋ' ಎಂಬ ವಿಭಿನ್ನ ಕಥೆಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿಸಿರುವ ಈ ಸಿನಿಮಾದ ಟ್ರೇಲರ್ ಅನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಯಿತು.
ಈ ವೇಳೆ ಮಾತನಾಡಿದ ನಟ ಹಾಗೂ ನಿರ್ದೇಶಕ ಮನು, "ಮೋಜೋ ಮತ್ತು ನಾನು ನನ್ ಜಾನು ಸಿನಿಮಾ ಮೂಲಕ ನಾನು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟೆ. ಈ ಎರಡು ಚಿತ್ರಗಳು ನನ್ನ ಗುರುತಿಸುವಂತೆ ಮಾಡಿದವು. ಈಗ 'ಯೂಸ್‌ಲೆಸ್ ಫೆಲೋ' ಸಿನಿಮಾಗೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಜೊತೆಗೆ ಹೀರೋ ಆಗಿ ನಟಿಸುತ್ತಿದ್ದೇನೆ. ಕಾಣದ ಕಡಲಿಗೆ, ಬ್ರೋಕನ್, ನೆನಪಿದೆಯಾ ಎಂಬ ಕಿರುಚಿತ್ರಗಳನ್ನು ಈ ಮೊದಲು ನಿರ್ದೇಶಿಸಿದ್ದೆ. ಈಗ ಯೂಸ್‌ಲೆಸ್ ಫೆಲೋ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದೇನೆ" ಎಂದು ತಿಳಿಸಿದರು.
ಬಾಲ್ಯದಿಂದಲೇ ಸಿನಿಮಾ ಕನಸು ಕಟ್ಟಿಕೊಂಡಿದ್ದ ಮನು ಯು.ಬಿ, ಒಂದಷ್ಟು ವರ್ಷಗಳ ಕಾಲ ಐಟಿ ಉದ್ಯೋಗಿಯಾಗಿ ಕೆಲಸ ನಿರ್ವಹಿಸಿದ್ದರು. ಆದರೆ ಸಿನಿಮಾ ಮೇಲಿನ ಸೆಳೆತ ಅವರನ್ನು ಚಿತ್ರರಂಗಕ್ಕೆ ಕರೆತಂದು ನಿಲ್ಲಿಸಿದೆ. ನಾಯಕನಾಗಿ ಗಮನ ಸೆಳೆದಿರುವ ಅವರೀಗ ನಿರ್ದೇಶನದಲ್ಲೂ ಛಾಪು ಮೂಡಿಸುವ ಎಲ್ಲಾ ಸೂಚನೆ ಸಿಕ್ಕಿದೆ. ಈಗಾಗಲೇ 'ಯೂಸ್‌ಲೆಸ್ ಫೆಲೋ' ಸಿನಿಮಾದ ಮೆರವಣಿಗೆ ಹಾಗೂ ಡೋಂಟ್ ಕೇರ್ ಹಾಡಿಗೆ ಎಲ್ಲೆಡೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ.
ಇದನ್ನೂ ಓದಿ:ಕರ್ನಾಟಕ ನಂದಿ ಫಿಲ್ಮ್ ಅವಾರ್ಡ್: ರಿಷಬ್ ಶೆಟ್ಟಿಗೆ ಅತ್ಯುತ್ತಮ ನಟ-ನಿರ್ದೇಶಕ ಪ್ರಶಸ್ತಿ
ಈ ಸಿನಿಮಾದಲ್ಲಿ ವಿಶೇಷ ಪಾತ್ರ ಮಾಡಿರುವ ನಟ ವಿಜಯ್ ಸೂರ್ಯ ಮಾತನಾಡಿ, "ಮನು ಇಂಡಸ್ಟ್ರಿಗೆ ಬರುವ ಮೊದಲೇ ನನಗೆ ಪರಿಚಯ. ಅವರ ಎರಡು ಸಿನಿಮಾ ನೋಡಿದ್ದೇನೆ. ಗುಡ್ ಪರ್ಫಾಮರ್ ಅವನು. ನಟನೆಯಲ್ಲಿ ಒಂದು ಹಿಡಿತವಿದೆ. ತುಂಬಾ ಕಡಿಮೆ ನಟರಲ್ಲಿ ನಾನು ಅದನ್ನು ನೋಡಿದ್ದೇನೆ. ಮನು ಕಣ್ಣು ತುಂಬಾ ಪವರ್‌ಫುಲ್. ಇದು ಮನು ಮೂರನೇ ಸಿನಿಮಾ. ಮೂರನೇ ಚಿತ್ರಕ್ಕೆ ಡೈರೆಕ್ಷನ್, ಸ್ಕ್ರೀನ್ ಪ್ಲೇ, ಡೈಲಾಗ್, ಪ್ರೊಡಕ್ಷನ್ ಎಲ್ಲವನ್ನೂ ತಲೆಮೇಲೆ ಹೊತ್ತುಕೊಂಡು ಈ ಸಿನಿಮಾ ಮಾಡಿದ್ದಾನೆ. ತುಂಬಾ ಪ್ರಾಮಾಣಿಕವಾಗಿ ಕಷ್ಟಪಟ್ಟು ಮಾಡಿರುವ ಈ ಸಿನಿಮಾಗೆ ನಿಮ್ಮ ಬೆಂಬಲವಿರಲಿ" ಎಂದು ಪ್ರೇಕ್ಷಕರಲ್ಲಿ ಕೇಳಿಕೊಂಡರು.
'ಯೂಸ್ ಲೆಸ್ ಫೆಲೋ'ಗೆ ನಿರ್ದೇಶಕರಾದ 'ಮೋಜೋ' ನಟ ಮನು
ಲವ್ ಕಮ್ ಆ್ಯಕ್ಷನ್ ಕಥಾಹಂದರ ಹೊಂದಿರುವ 'ಯೂಸ್‌ಲೆಸ್ ಫೆಲೋ' ಸಿನಿಮಾದಲ್ಲಿ ಮನುಗೆ ಜೋಡಿಯಾಗಿ ದಿವ್ಯಾ ಗೌಡ ನಟಿಸಿದ್ದಾರೆ. ವಿಜಯ್ ಸೂರ್ಯ ಗೆಸ್ಟ್ ಅಪಿಯರೆನ್ಸ್ನಲ್ಲಿ ಕಾಣಿಸಿಕೊಂಡಿದ್ದು ವಿನೋದ್ ಗೊಬ್ಬರಗಾಲ, ಜೆ.ಕೆ.ಮೈಸೂರು, ಸುರೇಶ್ ತಾರಾಬಳಗದಲ್ಲಿದ್ದಾರೆ. ರಾಜರತ್ನ ಎಂಬ ಪ್ರೊಡಕ್ಷನ್ ಹೌಸ್ನಡಿ ಮನು ತಾಯಿ ರತ್ನ ಬಸವರಾಜು ಚಿತ್ರ ನಿರ್ಮಾಣ ಮಾಡುತ್ತಿದ್ದು ಹರಿವು, ಪಿಂಗಾರ ಸಿನಿಮಾಗಳಿಗೆ ರಾಷ್ಟ್ರಪ್ರಶಸ್ತಿ ಪಡೆದಿರುವ ನಿರ್ಮಾಪಕ ಅವಿನಾಶ್ ಶೆಟ್ಟಿ ಸಹ ನಿರ್ಮಾಪಕರಾಗಿ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಶ್ಯಾಮ್ ಸಿಂಧನೂರು ಛಾಯಾಗ್ರಹಣ, ವಿಜಯ್ ಸಿಂದಿಗಿ ಸಂಕಲನ, ಶಿವಪ್ರಸಾದ್ ಸಂಗೀತ ಚಿತ್ರಕ್ಕಿದೆ. ಹಾಸನ, ಸಕಲೇಶಪುರ, ಹುಬ್ಬಳ್ಳಿ, ಮಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಸಿನಿಮಾ ಡಿಸೆಂಬರ್ 15ಕ್ಕೆ ತೆರೆಗೆ ಬರಲಿದೆ.
ಇದನ್ನೂ ಓದಿ:ಒಟಿಟಿಯಲ್ಲಿ 'ಘೋಸ್ಟ್' ಹವಾ; ಶಿವಣ್ಣನ ಮುಂದಿನ ಸಿನಿಮಾದಲ್ಲಿ ನಾನಿ ನಟನೆ