ಮುಂಬೈ (ಮಹಾರಾಷ್ಟ್ರ):ಬಾಲಿವುಡ್ ನಟಿ ಊರ್ವಶಿ ರೌಟೇಲಾ ತಮ್ಮ ತಲೆ ಕೂದಲನ್ನು ಕತ್ತರಿಸುವ ಮೂಲಕ ನಡೆಯುತ್ತಿರುವ ಕ್ರೂರ ಕೃತ್ಯಗಳನ್ನು ಖಂಡಿಸಿದ್ದಾರೆ. ಹಿಜಾಬ್ ವಿಚಾರವಾಗಿ ಇರಾನ್ ದೇಶದಲ್ಲಿ ನಡೆಯುತ್ತಿರುವ ಮಹಿಳೆಯರ ಪ್ರತಿಭಟನೆ ಹಾಗೂ ಇತ್ತೀಚೆಗೆ ಉತ್ತರಾಖಂಡ್ ರಾಜ್ಯದಲ್ಲಿ ನಡೆದ 19 ವರ್ಷದ ರೆಸಾರ್ಟ್ ರಿಸೆಪ್ಷನಿಸ್ಟ್ ಅಂಕಿತಾ ಭಂಡಾರಿ ಅವರ ಕೊಲೆ ಪ್ರಕರಣವನ್ನು ಖಂಡಿಸಿ ಊರ್ವಶಿ ರೌಟೇಲಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಈ ಪೋಸ್ಟ್ ಹಾಕಿದ್ದಾರೆ.
ನಟಿಯ ಈ ಪೋಸ್ಟ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ ಮತ್ತು ವಿರೋಧ ವ್ಯಕ್ತವಾಗಿದೆ. ಹಲವರು ಪ್ರಚಾರ ಗಿಟ್ಟಿಸಿಕೊಳ್ಳಲು ನೀವು ಮಾಡುತ್ತಿರುವ ಗಿಮಿಕ್ಗಳಲ್ಲಿ ಇದೊಂದು ಎಂದು ಕಾಮೆಂಟ್ ಮಾಡಿದರೆ, ಇನ್ನೂ ಹಲವರು ತುಂಬಾ ಬೇಗ ಪ್ರತಿಕ್ರಿಯೆ ನೀಡಿದ್ದೀರಿ, ನಿಮಗೆ ಧನ್ಯವಾದಗಳು ಎಂದು ಕಾಲೆಳೆದಿದ್ದಾರೆ. ಇನ್ನೂ ಹಲವರು ನಟಿಯನ್ನು ಬೆಂಬಲಿಸಿ ಕಾಮೆಂಟ್ ಮಾಡಿದ್ದಾರೆ.
ಇರಾನ್‌ನ ಕಟ್ಟುನಿಟ್ಟಾದ ಡ್ರೆಸ್ ಕೋಡ್ ಅನ್ನು ಉಲ್ಲಂಘಿಸಿದ ಆರೋಪದ ಮೇಲೆ ಸೆ. 13 ರಂದು ಟೆಹ್ರಾನ್ ಜೈಲಿನಲ್ಲಿ ಬಂಧಿಸಲ್ಪಟ್ಟಿದ್ದ 22 ವರ್ಷದ ಮಹ್ಸಾ ಅಮಿನಿ ಮೃತಪಟ್ಟಿರುವ ಘಟನೆ ಖಂಡಿಸಿ ಭಾರಿ ಪ್ರತಿಭಟನೆ ನಡೆಸಲಾಗುತ್ತಿದೆ. ಹಿಜಾಬ್ ವಿರೋಧಿಸಿ ಹಾಗೂ ನೈತಿಕ ಪೊಲೀಸ್ ಗಿರಿಯ ವಿರುದ್ಧ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆ ಸೇರಿದಂತೆ ಉತ್ತರಾಖಂಡದ ಋಷಿಕೇಶ ಬಳಿಯ ರೆಸಾರ್ಟ್‌ನಲ್ಲಿ ಹತ್ಯಗೀಡಾದ ರಿಸೆಪ್ಷನಿಸ್ಟ್ ಅಂಕಿತಾ ಭಂಡಾರಿ ಘಟನೆ ಖಂಡಿಸಿ ತಾವು ತಲೆ ಕೂದಲನ್ನು ಕತ್ತರಿಸಿರುವುದಾಗಿ ಇನ್ಸ್ಟಾದಲ್ಲಿ ಒಂದು ಪೋಸ್ಟ್ ಹಾಕಿಕೊಂಡಿದ್ದಾರೆ. ಆದರೆ ಈ ಪೋಸ್ಟ್ ಹಳೆಯದ್ದು ಎಂದು ಹೇಳಲಾಗುತ್ತಿದೆ.
ಮಹ್ಸಾ ಮತ್ತು ಅಂಕಿತಾಗೆ ನ್ಯಾಯಕ್ಕಾಗಿ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಗೆ ನಟಿ ಊರ್ವಶಿ ಈ ಮೂಲಕ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಪೋಸ್ಟ್ ಜೊತೆಗೆ 'ನನ್ನ ಕೂದಲನ್ನು ಕತ್ತರಿಸಿದೆ! ಇರಾನ್‌ನ ನೈತಿಕ ಪೊಲೀಸ್ ಗಿರಿ. ಇಲ್ಲಿನ ಕ್ರಮ ಖಂಡಿಸಿ ಪ್ರಾಣ ಕಳೆದುಕೊಂಡ ಮಹ್ಸಾ ಅಮಿನಿಯ ಸಾವು ನೋವು ತರಿಸಿದೆ. ಮಹಿಳೆಯರಿಗೆ ಏನು ಬೇಕೋ ಅದನ್ನು ಧರಿಸುವ ಸ್ವಾತಂತ್ರ್ಯವಿದೆ. ಯಾರೂ ಅವಳನ್ನು ತಡೆಯಲು ಸಾಧ್ಯವಿಲ್ಲ ಎಂದು ಆ ದೇಶದಲ್ಲಿ (ಇರಾನ್) ನಡೆಯುತ್ತಿರುವ ಪ್ರತಿಭಟನೆಗೆ ನನ್ನ ಬೆಂಬಲವಿದೆ. ಅಲ್ಲದೇ ದೇಶದಲ್ಲಿ ಇತ್ತೀಚೆಗೆ ಹತ್ಯೆಗೀಡಾದ ಅಂಕಿತಾ ಭಂಡಾರಿ ಅವರ ಪರ ನ್ಯಾಯಕ್ಕಾಗಿ ನಾನು ಕೂದಲನ್ನು ಕತ್ತರಿಸುವ ಮೂಲಕ ಖಂಡಿಸುತ್ತಿದ್ದೇನೆ.
ಮಹಿಳೆಯರನ್ನು ಗೌರವಿಸಿ! ಮಹಿಳಾ ಕ್ರಾಂತಿಗೆ ಜಾಗತಿಕ ಸಂಕೇತವಿದೆ. ಕೂದಲು ಮಹಿಳೆಯರ ಸೌಂದರ್ಯದ ಸಂಕೇತ. ಏನು ಧರಿಸಬೇಕು, ಏನು ಧರಿಸಬಾರದು ಅನ್ನೋದು ಅವಳ ನಿರ್ಧಾರ. ಮಹಿಳೆಯರು ಸಮಾಜದ ಧರ್ಮದ ಅಥವಾ ಸಮಾಜದ ಕಟ್ಟುಪಾಡುಗಳ ಬಗ್ಗೆ ಕಾಳಜಿ ವಹಿಸುವುದಿಲ್ಲ ಎಂದು ಹೇಳುವ ಹಕ್ಕು ಯಾರಿಗೂ ಇಲ್ಲ. ಮಹಿಳೆಯರೆಲ್ಲ ಒಗ್ಗೂಡಿ ಓರ್ವ ಮಹಿಳೆಯ ಸಮಸ್ಯೆಯನ್ನು ಇಡೀ ಮಹಿಳಾ ಕುಲದ ಸಮಸ್ಯೆ ಎಂದು ಪರಿಗಣಿಸಿ ಹೋರಾಟ ಮಾಡಿದರೆ ಸ್ತ್ರೀವಾದಕ್ಕೆ ಹೊಸ ಚೈತನ್ಯ ಬರುತ್ತದೆ ಎಂದು ಅವರು ವಿಸ್ತೃತವಾಗಿ ಶೀರ್ಷಿಕೆ ಬರೆದುಕೊಂಡಿದ್ದಾರೆ. ಸದ್ಯ ಅವರ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಆದರೆ, ಈ ಪೋಸ್ಟ್ ಹಳೆಯದ್ದು ಎಂದು ಹೇಳಲಾಗುತ್ತಿದ್ದು, ಹಲವರು ಕಾಲೆಳೆದಿದ್ದಾರೆ. ನಟಿ ಊರ್ವಶಿ ಇದನ್ನು ಹಂಚಿಕೊಂಡ ಕೂಡಲೇ ವೆಂಕಟೇಶ್ವರ ಸ್ವಾಮಿಯ ತಿರುಪತಿ ದೇವಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ನೆಟಿಜನ್‌ಗಳು ವ್ಯಂಗ್ಯವಾಡಿದ್ದಾರೆ. ಕಳೆದ ವರ್ಷ ತಮ್ಮ ಸಹೋದರ ಯಶರಾಜ್ ರೌಟೇಲಾ ಅವರೊಂದಿಗೆ ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಆವಾಗಿನ ಫೋಟೋ ಇದಾಗಿದೆ. ಕ್ರಿಕೆಟ್ ಪಟು ರಿಷಬ್ ಪಂತ್ ಅವರನ್ನು ಹಿಂಬಾಲಿಸುತ್ತಿರುವ ಊರ್ವಶಿ ಸದ್ಯ ಆಸ್ಟ್ರೇಲಿಯಾದಲ್ಲಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಲಾಂಭಿಸಿದ್ದಾರೆ. ಈ ಟ್ರೋಲ್ಗಳು ಸದ್ಯ ನಟಿಗೆ ಗೊತ್ತಾಗಿದ್ದು, ಬೆದರಿಸುವ ನಿಮ್ಮ ಕೆಲಸವನ್ನು ನಿಲ್ಲಿಸಿ ಎಂದು ಮಗದೊಂದು ಪೋಸ್ಟ್ ಮಾಡಿದ್ದಾರೆ. ಆದರೂ ಅವರ ಬಗ್ಗೆ ಜಾಲತಾಣದಲ್ಲಿ ಹರಿದಾಡುತ್ತಿರುವ ಟ್ರೋಲ್ಗಳು ನಿಂತಿಲ್ಲ.
ಇದನ್ನೂ ಓದಿ: ದಾಖಲೆ ಬರೆದ ಕಾಂತಾರ: ಬಾಕ್ಸ್ ಆಫೀಸ್‌ನಲ್ಲಿ ಒಂದೇ ದಿನ 15 ಕೋಟಿ ರೂಪಾಯಿ ಗಳಿಕೆ