ಇಂಫಾಲ್, ಮಣಿಪುರ:ಕೋಮು ಘರ್ಷಣೆಯ ಬೆಂಕಿಯಲ್ಲಿ ಬೇಯುತ್ತಿರುವ ಮಣಿಪುರದಲ್ಲಿ ಸುಮಾರು 25 ವರ್ಷಗಳ ಬಳಿಕ ಹಿಂದಿ ಚಿತ್ರವೊಂದು ಸಾರ್ವಜನಿಕವಾಗಿ ಪ್ರದರ್ಶನಗೊಂಡಿದೆ. ರಾಜಧಾನಿ ಇಂಫಾಲದಿಂದ 63 ಕಿ.ಮೀ ದೂರದಲ್ಲಿರುವ ಚುರಚಂದಪುರ ಜಿಲ್ಲೆಯ ರೆಂಗ್ಕೈ ಎಂಬಲ್ಲಿನ ಬಯಲು ಥಿಯೇಟರ್ನಲ್ಲಿ ಮಂಗಳವಾರ ಪ್ರದರ್ಶನಗೊಂಡಿತು.
ವಿಕ್ಕಿ ಕೌಶಲ್ ಅಭಿನಯದ ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಚಿತ್ರವನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸಿದ್ದರು. ಮೈತೇಯಿ ಉಗ್ರಗಾಮಿ ಸಂಘಟನೆ ನಿಷೇಧಿತ ಪೀಪಲ್ಸ್ ಲಿಬರೇಶನ್ ಆರ್ಮಿಯ ರಾಜಕೀಯ ವಿಭಾಗವಾದ 'ರೆವಲ್ಯೂಷನರಿ ಪೀಪಲ್ಸ್ ಫ್ರಂಟ್' ಸೆಪ್ಟೆಂಬರ್ 2000 ರಲ್ಲಿ ಹಿಂದಿ ಚಲನಚಿತ್ರಗಳ ಮೇಲಿನ ನಿಷೇಧ ಹೇರಿತ್ತು. ಅಂದಿನಿಂದ ಸ್ಥಗಿತಗೊಂಡಿದ್ದ ಹಿಂದಿ ಚಿತ್ರಗಳ ಪ್ರದರ್ಶನ ಮಂಗಳವಾರ ‘ಹಮರ್ ಸ್ಟೂಡೆಂಟ್ಸ್ ಅಸೋಸಿಯೇಷನ್’ (ಎಚ್‌ಎಸ್‌ಎ) ನಿಂದ ಮತ್ತೆ ಪುನರಾರಂಭಗೊಂಡಿತು.
ಇಂದಿನ ನಡೆ ಮೈತೇಯಿ ಗುಂಪುಗಳ ದೇಶವಿರೋಧಿ ನೀತಿಗಳನ್ನು ಧಿಕ್ಕರಿಸುವುದು ಮತ್ತು ಭಾರತದ ಮೇಲಿನ ನಮ್ಮ ಪ್ರೀತಿಯನ್ನು ತೋರಿಸುವುದಾಗಿದೆ ಎಂದು ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆಯ ವಕ್ತಾರ ಗಿಂಜಾ ವುಲ್ಜಾಂಗ್ ತಿಳಿಸಿದ್ದಾರೆ. ಚಲನಚಿತ್ರದ ಪ್ರದರ್ಶನದ ಮೊದಲು, ಬಯಲು ಚಿತ್ರಮಂದಿರದಲ್ಲಿ ರಾಷ್ಟ್ರಗೀತೆಯನ್ನು ನುಡಿಸಲಾಯಿತು. ಮಣಿಪುರದಲ್ಲಿ ಸಾರ್ವಜನಿಕವಾಗಿ 1998ರಲ್ಲಿ ಪ್ರದರ್ಶನಗೊಂಡ ಕೊನೆಯ ಹಿಂದಿ ಚಲನಚಿತ್ರ ಎಂದರೆ ಅದು "ಕುಚ್ ಕುಚ್ ಹೋತಾ ಹೈ" ಎಂದು ಎಚ್‌ಎಸ್‌ಎ ಹೇಳಿದೆ.