ಸೋಷಿಯಲ್ ಮೀಡಿಯಾ ಸ್ಟಾರ್ ಉರ್ಫಿ ಜಾವೇದ್ ತಾವು ಆಯ್ದುಕೊಳ್ಳುವ ಬಟ್ಟೆ ವಿಚಾರವಾಗಿ ಸದಾ ಸುದ್ದಿಯಲ್ಲಿರುತ್ತಾರೆ. ವಿಭಿನ್ನ, ವಿಚಿತ್ರ ಶೈಲಿಯ ಉಡುಗೆ ತೊಡುವ ಮೂಲಕ ಜನಪ್ರಿಯರಾಗಿದ್ದಾರೆ. ಅವರ ಅಧಿಕೃತ ಇನ್ಸ್ಟಾ ಖಾತೆಗೆ ನೀವು ಭೇಟಿ ಕೊಟ್ಟರೆ ಈ ನಟಿ ಕಟೌಟ್ ಚೆಲುವೆ ಅನ್ನೋದು ಪಕ್ಕಾ ಆಗುತ್ತೆ. ಸದಾ ಉಡುಗೆ ಮತ್ತು ಹೇಳಿಕೆಗಳ ವಿಚಾರವಾಗಿ ಸುದ್ದಿಯಲ್ಲಿರುವ ಉರ್ಫಿ ಜಾವೇದ್ ಇದೀಗ ಮತ್ತೊಂದು ವಿಷಯವಾಗಿ ಸಖತ್ ಸೌಂಡ್ ಮಾಡುತ್ತಿದ್ದಾರೆ. ಹೌದು, ನಟಿಯನ್ನು ರೆಸ್ಟೊರೆಂಟ್ ಒಳಗೆ ಪ್ರವೇಶಿಸಲು ಅವಕಾಶ ಕೊಟ್ಟಿಲ್ಲ. ಇದನ್ನು ಸ್ವತಃ ಉರ್ಫಿ ಜಾವೇದ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಟೇಬಲ್ ಬುಕ್ ಮಾಡಿದ್ದರೂ ಕೂಡ ಮುಂಬೈ ರೆಸ್ಟೋರೆಂಟ್ವೊಂದು ಅವರಿಗೆ ಪ್ರವೇಶ ನಿರಾಕರಿಸಿದೆ. ಅವರ ಉಡುಪಿನ ಆಯ್ಕೆ ಹಿನ್ನೆಲೆ ರೆಸ್ಟೋರೆಂಟ್ ಈ ನಿರ್ಧಾರ ಕೈಗೊಂಡಿತ್ತು ಎನ್ನಲಾಗಿದೆ. ಈ ಹಿನ್ನೆಲೆ ನಟಿ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಹಂಚಿಕೊಂಡು ರೆಸ್ಟೋರೆಂಟ್ ನಡೆಯನ್ನು ಪ್ರಶ್ನೆ ಮಾಡಿದ್ದಾರೆ. ಆದರೆ ವಿಡಿಯೋದಲ್ಲಿ, ರೆಸ್ಟೋರೆಂಟ್ ಮ್ಯಾನೇಜರ್ ನಟಿಯನ್ನು ಶಾಂತಗೊಳಿಸಲು ಯತ್ನಿಸಿದ್ದಾರೆ. ರೆಸ್ಟೋರೆಂಟ್ ಫುಲ್ ಆಗಿದೆ ಎಂದು ತಿಳಿಸಲು ಪ್ರಯತ್ನಿಸಿದ್ದಾರೆ. ನಟಿ ಮ್ಯಾನೇಜರ್ಗೆ ಮಾತನಾಡಲು ಅವಕಾಶ ಮಾಡಿಕೊಡದೇ ಕೋಪಗೊಂಡು ತಮ್ಮ ಮಾತನ್ನು ಮುಂದುವರಿಸಿದ್ದಾರೆ. ನನ್ನ ಉಡುಪಿನ ಶೈಲಿಯಿಂದಲೇ ಹೀಗೆಲ್ಲಾ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಸ್ಟೋರಿ ಒಂದನ್ನು ಶೇರ್ ಮಾಡಿರುವ ಬಿಗ್ ಬಾಸ್ ತಾರೆ ಉರ್ಫಿ ಜಾವೇದ್, ಇದು ನಿಜವಾಗಿಯೂ ಆಧುನಿಕ ಮುಂಬೈಯೇ?, ರೆಸ್ಟೋರೆಂಟ್ ಒಂದು ನನ್ನನ್ನು ಒಳಗೆ ಬಿಡಲು ನಿರಾಕರಿಸಿದೆ. ನನ್ನ ಫ್ಯಾಷನ್ ಆಯ್ಕೆಗಳನ್ನು ನೀವು ಇಷ್ಟಪಡಬೇಕಾಗಿಲ್ಲ. ಆದರೆ ಅದಕ್ಕಾಗಿ ನನಗೆ ದಂಡ ವಿಧಿಸುವುದು ಸರಿಯಲ್ಲ. ನೆಪ ಕೊಡಬೇಡಿ, ನಾನು ಕಿರಿಕಿರಿಗೊಂಡಿದ್ದೇನೆ. ದಯವಿಟ್ಟು ಇದನ್ನು ಪರಿಶೀಲಿಸಿ ಎಂದು ಬರೆದುಕೊಂಡಿದ್ದಾರೆ. ರೆಸ್ಟೋರೆಂಟ್ನ ವಿಡಿಯೋ ಶೇರ್ ಮಾಡಿದ್ದು, ಉರ್ಫಿ ಜಾವೇದ್ ಅಧಿಕೃತ ಇನ್ಸ್ಟಾ ಖಾತೆಯಲ್ಲಿ ನೀವು ಇದನ್ನು ಗಮನಿಸಬಹುದು.