ಗಂಗಾವತಿ: ಇಲ್ಲಿನ ನಗರಸಭೆಯ ಆಡಳಿತ ಮಂಡಳಿಯ ಹಿರಿಯ ಸದಸ್ಯ ಶಾಮೀದ್ ಮನಿಯಾರ ನಗರಸಭೆಯ ವಿಶೇಷ ಸಭೆಯಲ್ಲಿ ಕಮೀಷನರ್ ವಿರೂಪಾಕ್ಷಮೂರ್ತಿ ಅವರನ್ನು ಸೆಕ್ರೆಟರಿ ಎಂದು ಸಂಬೋಧನೆ ಮಾಡಿದ ಪ್ರಸಂಗ ನಡೆದಿದೆ. ಪರಿಣಾಮ ಇಡೀ ಸಭೆ ರಣರಂಗವಾದ ಘಟನೆ ನಡೆಯಿತು.
ಗಂಗಾವತಿಯ ನಗರಸಭೆಯ ವಿಶೇಷ ಸಭೆಯಲ್ಲಿ ಕೋಲಾಹಲ ಇಲ್ಲಿನ ಮಂಥನ ಸಭಾಂಗಣದಲ್ಲಿ ನಡೆದ ತುರ್ತು ವಿಶೇಷ ಸಭೆಯ ಸಂದರ್ಭದಲ್ಲಿ ಲಕ್ಷ್ಮಿಕ್ಯಾಂಪ್ನ ವಿವಾದಿತ ಮಸೀದಿ ಜಾಗಕ್ಕೆ ಸಂಬಂಧಿಸಿದಂತೆ ಮಾತನಾಡುತ್ತಿದ್ದ ಮನಿಯಾರ್, ಸಾರ್ವಜನಿಕ ಜಾಗವಾಗಿದ್ದರೂ ಅದನ್ನು ಮಸೀದಿಗೆ ಕೊಡಲು ಅವಕಾಶವಿದೆ. ಈ ಸಂಬಂಧ ಅಜೆಂಡಾ ಬರೆಯಲು ಸಭೆಯ ಅಧ್ಯಕ್ಷರಿಗೆ ಸಂಪೂರ್ಣ ಹಕ್ಕಿದ್ದು, ಸೆಕ್ರೆಟರಿಗೆ (ಪೌರಾಯುಕ್ತರಿಗೆ) ಸೂಚನೆ ನೀಡುವ ಮೂಲಕ ದಾಖಲೆ ಬರೆಯಿಸಿ ಎಂದರು.
ಕಮಿಷನರ್ ಹುದ್ದೆಯಲ್ಲಿರುವ ನನಗೆ ಸೆಕ್ರೆಟರಿ ಎಂದು ಸಂಭೋಧಿಸುವುದು ಎಷ್ಟು ಸರಿ? ಎಂದು ವಿರೂಪಾಕ್ಷಮೂರ್ತಿ ಕೆರಳಿ ಕೆಂಡವಾದರು. ಇದು ನಗರಸಭೆಯ ತುರ್ತು ಸಭೆಯ ರಣರಂಗವಾಗಿ ಮಾರ್ಪಟಿತು. ಸರ್ಕಾರದ ಒಬ್ಬ ಪ್ರತಿನಿಧಿ ಸಭೆಯಲ್ಲಿ ಕುಳಿತು ಅವಮಾನ ಮಾಡ್ತೀರಾ? ಎಂದು ರೇಗಿದರು. ಇದು ಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾಯಿತು.
ಆಡಳಿತ ಮಂಡಳಿ ಸದಸ್ಯರು ಮನಿಯಾರ ಬೆಂಬಲಕ್ಕೆ ನಿಂತರೆ, ಬಿಜೆಪಿಗರು ಕಮಿಷನರ್ ಅವರನ್ನು ಸಮಾಧಾನ ಮಾಡಲು ಯತ್ನಿಸಿದರು. ಸಿಬ್ಬಂದಿ ಪೌರಾಯುಕ್ತರ ಪರವಾಗಿ ನಿಂತು ಸಮಾಧಾನ ಮಾಡಿ ವಾತಾವರಣ ತಿಳಿ ಮಾಡಿದರು.
ಓದಿ:ಬೆಳಗ್ಗೆ ವಿಧಾನಸೌಧಕ್ಕೆ ಬಂದು ಸೇರುವಂತೆ ಪಕ್ಷದ ಶಾಸಕರಿಗೆ ಸಿಎಂ ಸೂಚನೆ