ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಐಡೆಂಟಿಟಿ ಹೊಂದಿರುವ ನಟ ಉಪೇಂದ್ರ. ಕೇವಲ ನಟನಾಗಿ ಮಾತ್ರವಲ್ಲದೇ ನಿರ್ದೇಶಕ, ನಿರ್ಮಾಪಕ, ಕಥೆಗಾರನಾಗಿಯೂ ಸ್ಯಾಂಡಲ್ವುಡ್ನಲ್ಲಿ ಸದಾ ಸುದ್ದಿಯಲ್ಲಿರುತ್ತಾರೆ. ಈ ಬುದ್ಧಿವಂತನ ಬತ್ತಳಿಕೆಯಿಂದ ಬರುತ್ತಿರೋ ಮತ್ತೊಂದು ಬಾಣವೇ ಯು ಐ ಸಿನಿಮಾ. ನೈಜತೆಗೆ ಹೆಚ್ಚು ಒತ್ತು ಕೊಡೋ ಉಪ್ಪಿ ಯು ಐ ಚಿತ್ರದಲ್ಲೂ ತನ್ನ ಚಮತ್ಕಾರ ತೋರಿಸಲು ಸಜ್ಜಾಗಿದ್ದಾರೆ. ಜೊತೆಗೆ ತಂತ್ರಜ್ಞಾನವನ್ನು ಹೆಚ್ಚು ಬಳಸಿಕೊಳ್ಳಲಾಗಿದೆ.
ಉಪ್ಪಿ ಸಿನಿಮಾಗಳು ಎಂದರೆ ಹಾಗೆ, ಅಭಿಮಾನಿಗಳಿಗಾಗಿ ಒಂದು ವಿಶೇಷ ಸಂದೇಶ ಇರುತ್ತದೆ. ಅದನ್ನು ಪ್ರಸ್ತುತ ಪಡಿಸೋ ಕೆಲಸ ಕೂಡ ಅದ್ಭುತ. ತರ್ಲೆ ನನ್ ಮಗ ಸಿನಿಮಾದಿಂದ ಹಿಡಿದು ಉಪ್ಪಿ 2 ಚಿತ್ರದವರೆಗೂ ಉಪ್ಪಿ ಹೊಸ ಆಲೋಚನೆಯೊಂದಿಗೆ ನಿರ್ದೇಶನ ಮಾಡಿದ್ದಾರೆ. ಅದನ್ನು ಸಿನಿಪ್ರಿಯರಿಗೆ ತಲುಪಿಸಿ ಗೆದ್ದಿದ್ದಾರೆ ಕೂಡ. ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿರೋ ರಿಯಲ್ ಸ್ಟಾರ್ ತಮ್ಮ ಅಲೋಚನೆಗಳನ್ನು ಯು ಐ ಚಿತ್ರಕ್ಕೆ ಸಂಪೂರ್ಣವಾಗಿ ಬಳಸಿಕೊಳ್ಳಲು ಸಕಲ ಸಿದ್ಧತೆ ಮಾಡಿಕೊಂಡು ಶೂಟಿಂಗ್ ಅಖಾಡದಲ್ಲಿ ಬ್ಯುಸಿಯಾಗಿದ್ದಾರೆ.
ಈಗಿನ ಟ್ರೆಂಡ್ಗೆ ತಕ್ಕಂತೆ ಉತ್ತಮ ಕಥೆ ಅಷ್ಟೇ ಅಲ್ಲ, ಹೊಸ ಹೊಸ ತಂತ್ರಜ್ಞಾನವನ್ನೂ ಬಳಕೆ ಮಾಡಿ ಶೂಟಿಂಗ್ ಮಾಡ್ತಿದ್ದಾರೆ ಅನ್ನೋ ಇಂಟ್ರೆಸ್ಟಿಂಗ್ ವಿಚಾರ ಈಗ ಗಾಂಧಿನಗರದಲ್ಲಿ ಚರ್ಚೆ ಆಗ್ತಿದೆ. ಯು ಐ ಸಿನಿಮಾದಲ್ಲಿ ಒಂದೇ ಸೀನ್ಗಾಗಿ 400 ಕ್ಯಾಮರಾಗಳನ್ನು ಬಳಸಿ ಅದ್ಧೂರಿಯಾಗಿ ಶೂಟಿಂಗ್ ಮಾಡಲಾಗಿದೆಯಂತೆ.