ಕರ್ನಾಟಕ

karnataka

ETV Bharat / entertainment

'ಯುಐ' ಟೀಸರ್​ ಅನ್ನು 'ಪ್ರೇಕ್ಷಕರ ಕಲ್ಪನೆ'ಗೆ ಬಿಟ್ಟ 'ಬುದ್ಧಿವಂತ' ಉಪ್ಪಿ​ - etv bharat kannada

ರಿಯಲ್​ ಸ್ಟಾರ್​ ಉಪೇಂದ್ರ ಜನ್ಮದಿನದ ಸಲುವಾಗಿ ಊರ್ವಶಿ ಥಿಯೇಟರ್​ನಲ್ಲಿ 'ಯುಐ' ಸಿನಿಮಾದ ಟೀಸರ್​ ಅನ್ನು ಅನಾವರಣಗೊಳಿಸಲಾಗಿದೆ.

ui movie teaser
ಯುಐ ಟೀಸರ್​

By ETV Bharat Karnataka Team

Published : Sep 18, 2023, 8:42 PM IST

Updated : Sep 18, 2023, 10:43 PM IST

ಅಭಿಮಾನಿಗಳೊಂದಿಗೆ ಉಪ್ಪಿ ಬರ್ತ್​ಡೇ ಆಚರಣೆ

ಕನ್ನಡ ಚಿತ್ರರಂಗದಲ್ಲಿ ನಟ ಮತ್ತು ನಿರ್ದೇಶಕರಾಗಿ ಗುರುತಿಸಿಕೊಂಡಿರುವ ರಿಯಲ್​ ಸ್ಟಾರ್​ ಉಪೇಂದ್ರ ಅವರಿಗೆ ಇಂದು ಜನ್ಮದಿನದ ಸಂಭ್ರಮ. 55ನೇ ವಸಂತಕ್ಕೆ ಕಾಲಿಟ್ಟಿರುವ ಉಪ್ಪಿಗೆ ಈ ವರ್ಷದ ಬರ್ತ್​ಡೇ ಬಹಳ ಸ್ಪೆಷಲ್​. ಒಂದೆಡೆ ಇಡೀ ದೇಶವೇ ಗಣೇಶ ಚತುರ್ಥಿಯ ಸಂಭ್ರಮದಲ್ಲಿ ಮುಳುಗಿದ್ರೆ, ಈ ಕಡೆ ಉಪ್ಪಿ ಎಂಟು ವರ್ಷಗಳ ಬಳಿಕ ಆ್ಯಕ್ಷನ್ ಕಟ್​ ಹೇಳಿರುವ 'ಯುಐ' ಸಿನಿಮಾದ ಟೀಸರ್​ ಕೂಡ ಬಿಡುಗಡೆಯಾಗಿದೆ. ಇಂದು ಉಪೇಂದ್ರ ಜನ್ಮದಿನದ ಸಲುವಾಗಿ ಊರ್ವಶಿ ಥಿಯೇಟರ್​ನಲ್ಲಿ ಟೀಸರ್​ ಅನ್ನು ಅನಾವರಣಗೊಳಿಸಲಾಗಿದೆ.

ಪ್ರತಿವರ್ಷ ಕತ್ರಿಗುಪ್ಪೆ ಮನೆಯಲ್ಲಿ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುತ್ತಿದ್ದ ಉಪೇಂದ್ರ ಈ ಬಾರಿ ಊರ್ವಶಿ ಚಿತ್ರಮಂದಿರದಲ್ಲಿ ಸಾವಿರಾರು ಅಭಿಮಾನಿಗಳ ಜೊತೆ ಉಪೇಂದ್ರ ಕೇಕ್​ ಕಟ್ ಮಾಡುವ ಮೂಲಕ ತಮ್ಮ ಬರ್ತ್​ಡೇಯನ್ನು ಆಚರಿಸಿದರು. ದೂರದ ಊರುಗಳಿಂದ ಬಂದಿದ್ದ ಅಭಿಮಾನಿಗಳು ಉಪೇಂದ್ರ ಜೊತೆ ಸೆಲ್ಫಿ ತೆಗೆದುಕೊಂಡು ಖುಷಿಪಟ್ಟರು‌. ಇನ್ನು ಮಹಾರಾಷ್ಟ್ರದಿಂದ ಆಗಮಿಸಿದ್ದ ಉಪ್ಪಿ ಅಭಿಮಾನಿಯೊಬ್ಬ ಹಣ್ಣಿನ ಹಾರ ಮಾಡಿಕೊಂಡು ಬಂದಿದ್ದು ವಿಶೇಷವಾಗಿತ್ತು.

ಮಧ್ಯಾಹ್ನ ಎರಡು ಗಂಟೆಯಿಂದ ಊರ್ವಶಿ ಚಿತ್ರಮಂದಿರದಲ್ಲಿ ಅಭಿಮಾನಿಗಳ ಜೊತೆ ಉಪೇಂದ್ರ ಕಾಲ ಕಳೆದರು. ಸಂಜೆ ಆರು ಗಂಟೆಗೆ ಊರ್ವಶಿ ಚಿತ್ರಮಂದಿರದಲ್ಲಿ ಯುಐ ಚಿತ್ರದ ಟೀಸರ್​ ಅನ್ನು ಹ್ಯಾಟ್ರಿಕ್ ಹೀರೋ ಶಿವ ರಾಜ್​ಕುಮಾರ್ ಬಿಡುಗಡೆ ಮಾಡುವ ಮೂಲಕ ಉಪೇಂದ್ರ ಸಿನಿಮಾಗೆ ಸಾಥ್ ನೀಡಿದರು. ಇನ್ನು ಅನಾವರಣ ಆಗಿರುವ ಯುಐ ಚಿತ್ರದ ಟೀಸರ್​ನಲ್ಲೂ ಉಪೇಂದ್ರ ನಾನು ಬುದ್ದಿವಂತ ನಟ ಅಂತಾ ಮತ್ತೊಮ್ಮೆ ಫ್ರೂವ್ ಮಾಡಿದ್ದಾರೆ.

ಟೀಸರ್ ಅಂದಾಕ್ಷಣ ಆ ಚಿತ್ರದಲ್ಲಿ ಬರುವ ಕಥೆ, ಆಕ್ಷನ್, ಲವ್, ಸೆಂಟಿಮೆಂಟ್ ಹೀಗೆ ಒಂದು ಸಿನಿಮಾಗೆ ಬೇಕಾಗುವ ಎಲಿಮೆಂಟ್ಸ್​ಗಳು ಇರುತ್ತವೆ. ಆದರೆ ಉಪೇಂದ್ರ ಯುಐ ಚಿತ್ರದ ಟೀಸರ್ ಬರೀ ಕತ್ತಲೆಯಲ್ಲಿ ಕುದುರೆ ಸವಾರಿ ಸೌಂಡ್, ಆಕ್ಷನ್ ಸೌಂಡ್ ಮಾತ್ರ ಇದೆ. ಅಲ್ಲಿಗೆ ಟೀಸರ್​ ಕೂಡ ಮುಕ್ತಾಯವಾಗುತ್ತದೆ. ಈ ಕತ್ತಲೆಯ ಕಲ್ಪನೆಯನ್ನು ಯಾರು ಏನು ಬೇಕಾದರೂ ಊಹಿಸಿಕೊಳ್ಳಬಹುದು ಅಂತ ಮತ್ತೆ ಉಪೇಂದ್ರ ಅಭಿಮಾನಿಗಳ ಮೆದುಳಿಗೆ ಕೈ ಹಾಕಿದ್ದಾರೆ.

ಯುಐ ಸಿನಿಮಾ ವಿಶೇಷತೆ: ಸದ್ಯ ಯುಐ ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿದಿದ್ದು, ಎಡಿಟಿಂಗ್​ ಕೆಲಸ ನಡೆಯುತ್ತಿದೆ. ಉಪೇಂದ್ರ ಈ ಚಿತ್ರದಲ್ಲಿ 3ಡಿ ಬಾಡಿ ಸ್ಕ್ಯಾನ್​ ಅನ್ನು ಬಳಸಿದ್ದಾರೆ. ಸುಮಾರು 200ಕ್ಕೂ ಹೆಚ್ಚು ಕ್ಯಾಮರಾಗಳನ್ನು ಬಳಸಿ ಶೂಟ್​ ಮಾಡಲಾಗಿದ್ದು, ಈ ತಂತ್ರಜ್ಞಾನ ಬಳಸಿದ್ದು ಏಷ್ಯಾದಲ್ಲಿಯೇ ಮೊದಲ ಸಿನಿಮಾ ಎನ್ನಲಾಗಿದೆ. ಈ ತಂತ್ರಜ್ಞಾನವನ್ನು ಜೇಮ್ಸ್​ ಕ್ಯಾಮರಾನ್​ 'ಅವತಾರ್​ 2' ಸಿನಿಮಾಗೆ ಬಳಸಲಾಗಿತ್ತು. ಇಷ್ಟೇ ಅಲ್ಲದೇ ಸುಮಾರು 14 ಸಾವಿರ ವಿಎಫ್​ಎಕ್ಸ್​ ಶಾಟ್ಸ್​ ಅನ್ನು ಬಳಸಲಾಗಿದೆ. ಹಿಂದೆಂದೂ ಕನ್ನಡದಲ್ಲಿ ಈ ಟೆಕ್ನಾಲಜಿ ಬಳಸಿಲ್ಲ ಅನ್ನೋದು ಗಮನಾರ್ಹ.

ಇನ್ನು ಉಪ್ಪಿ ನಿರ್ದೇಶಿಸಿದ ಈವರೆಗಿನ ಸಿನಿಮಾಗಳಲ್ಲಿ ಇದು ದುಬಾರಿ ಎನ್ನಲಾಗಿದೆ. ಸಿನಿಮಾ ಬಜೆಟ್​ ಸುಮಾರು 100 ಕೋಟಿ ರೂಪಾಯಿ ಎಂದು ವರದಿಯಾಗಿದೆ. ಅಲ್ಲದೇ ತಾಂತ್ರಿಕವಾಗಿಯೂ ಈ ಚಿತ್ರ ಅಡ್ವಾನ್ಸ್​ ಆಗಿರುತ್ತೆ ಅನ್ನೋದು ಗೊತ್ತಾಗಿದೆ. ಮತ್ತೊಂದೆಡೆ ಯುಐ ಚಿತ್ರ ರಿಲೀಸ್​ ಯಾವಾಗ? ಅನ್ನೋ ಪ್ರಶ್ನೆ ಅಭಿಮಾನಿಗಳ ವಲಯದಲ್ಲಿದೆ. ನಿರ್ಮಾಪಕರ ಮೂಲಗಳ ಪ್ರಕಾರ, ಈ ಸಿನಿಮಾ ಈ ವರ್ಷದ ಕೊನೆಯಲ್ಲಿ ಬಿಡುಗಡೆಯಾಗಬಹುದು ಎನ್ನಲಾಗಿದೆ. ಸದ್ಯ ಕನ್ನಡ ಚಿತ್ರರಂಗದಲ್ಲಿ ನಿರ್ಮಾಣವಾಗುತ್ತಿರುವ ಹೈ ಬಜೆಟ್​ ಚಿತ್ರಗಳಲ್ಲಿ ಯುಐ ಕೂಡ ಒಂದು. ಹಲವಾರು ಸ್ಪೆಷಾಲಿಟಿಗಳಿಗೆ ಸೌತ್​ ಇಂಡಸ್ಟ್ರಿಯಲ್ಲಿ ಟಾಕ್​ ಆಗುತ್ತಿರುವ ಈ ಚಿತ್ರದ ಮೂಲಕ ಉಪ್ಪಿ ಪ್ರೇಕ್ಷಕರಿಗೆ ಏನು ಹೇಳಲು ಹೊರಟಿದ್ದಾರೆ ಅನ್ನೋದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ:ಬರ್ತ್​ಡೇ ದಿನ ಮನೆಯಲ್ಲಿ ಸಿಗಲ್ಲ, 18ರಂದು ಇಲ್ಲಿ ಬನ್ನಿ, ಕೇಕ್‌ ಕತ್ತರಿಸಿ ಸಂಭ್ರಮಿಸೋಣ ಎಂದ ಉಪ್ಪಿ!- ವಿಡಿಯೋ

Last Updated : Sep 18, 2023, 10:43 PM IST

ABOUT THE AUTHOR

...view details