ಬೆಂಗಳೂರು :ಕನ್ನಡ ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಜಮಾನ ಜೋರಾಗಿದೆ. ಇದೀಗ ಸೌತ್ ಸಿನಿಮಾ ಇಂಡಸ್ಟ್ರಿಯ ವಿವಾದಾತ್ಮಕ ಡೈರೆಕ್ಟರ್ ರಾಮ್ ಗೋಪಾಲ್ ವರ್ಮಾ ಕಿಲ್ಲಿಂಗ್ ವೀರಪ್ಪನ್ ಸಿನಿಮಾ ಬಳಿಕ ಕನ್ನಡ ಚಿತ್ರರಂಗದ ಕಡೆ ಮುಖ ಮಾಡಿದ್ದಾರೆ. ಖಾತ್ರಾ ಡೇಂಜರಸ್ ಸಿನಿಮಾ ಬಳಿಕ ಸೌತ್ ಇಂಡಸ್ಟ್ರಿ ತಿರುಗಿ ನೋಡುವಂತೆ, ಗ್ಯಾಂಗ್ ಸ್ಟಾರ್ ಸಿನಿಮಾ ಮಾಡಲು ರೆಡಿಯಾಗಿದ್ದಾರೆ.
ಬಾಲಿವುಡ್ನ ಅಮಿತಾಭ್ ಬಚ್ಚನ್, ವಿವೇಕ್ ಓಬೆರಾಯ್, ಜೆಡಿ ಚಕ್ರವರ್ತಿ ಹಾಗೂ ಸೂರ್ಯ ಜೊತೆ ಸಿನಿಮಾ ಮಾಡಿ ಸೈ ಎನಿಸಿಕೊಂಡ ನಿರ್ದೇಶಕ, ರಾಮ್ ಗೋಪಾಲ್ ವರ್ಮಾ ಕಿಲ್ಲಿಂಗ್ ವೀರಪ್ಪನ್ ಸಿನಿಮಾ ಬಳಿಕ ಈಗ ರಿಯಲ್ ಸ್ಟಾರ್ ಉಪೇಂದ್ರ ಜೊತೆ ಸಿನಿಮಾ ಮಾಡ್ತಾ ಇದ್ದಾರೆ. ಈ ಸಿನಿಮಾದ ಆಫೀಶಿಯಲ್ ಟೈಟಲ್ ಲಾಂಚ್ ಕಾರ್ಯಕ್ರಮ ಖಾಸಗಿ ಹೋಟೆಲ್ನಲ್ಲಿ ನಿನ್ನೆ ನಡೆದಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಈ ಟೈಟಲ್ ಅನಾವರಣ ಮಾಡುವ ಮೂಲಕ, ಇಡೀ ಚಿತ್ರತಂಡಕ್ಕೆ ಗುಡ್ ಲಕ್ ಹೇಳಿದರು.
ಡಾ.ರಾಜ್ ಕುಮಾರ್ ಅಭಿನಯದ ಭಲೇ ರಾಜ, ಪ್ರೇಮದ ಕಾಣಿಕೆ ಅಂತಹ ಸೂಪರ್ ಹಿಟ್ ಸಿನಿಮಾಗಳನ್ನ ನಿರ್ಮಾಣ ಮಾಡಿ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಚಾಪು ಮೂಡಿಸಿರುವ ಹಿರಿಯ ನಿರ್ಮಾಪಕ ಯಜಮಾನ್ ಮೋತಿ ಸುಪುತ್ರ, ರಾಜ್ ಯಜಮಾನ್, ಎ ಸ್ಕೈಯರ್ ಪ್ರೊಡಕ್ಷನ್ ಅಡಿಯಲ್ಲಿ ರಾಮ್ ಗೋಪಾಲ್ ವರ್ಮ ನಿರ್ದೇಶನದ ಹಾಗೂ ಉಪೇಂದ್ರ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಈ ವೇಳೆ ಮಾತನಾಡಿದ ಸುದೀಪ್, ಈ ಟೈಟಲ್ ಇಡೀ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಕೌತುಕ ಹುಟ್ಟಿಸುವ ಹಾಗೆ ಇದೆ. ಸಿಕ್ಕಾಪಟ್ಟೇ ಸ್ಟೈಲ್ ಆಗಿ ಇರುವ ಉಪೇಂದ್ರ ಸರ್, ಸಿನಿಮಾ ಚಿತ್ರೀಕರಣದಲ್ಲಿ ಸೌಂಡ್ ಇಲ್ಲದೇ ಕೆಲಸ ಮಾಡುವ ಆರ್‌ಜಿವಿ ಸರ್ ಡೆಡ್ಲಿ ಕಾಂಬಿನೇಷನ್ ಸೂಪರ್ ಆಗಿದೆ. ನಾನು ಉಪೇಂದ್ರ ಸರ್ ದೊಡ್ಡ ಅಭಿಮಾನಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಮೂಲಕ ಇಡೀ ಚಿತ್ರತಂಡಕ್ಕೆ ಹಾರೈಸಿದರು.