ನಿನ್ನೆ (ಫೆಬ್ರವರಿ 7, ಮಂಗಳವಾರ) ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ನಟಿ ಕಿಯಾರಾ ಅಡ್ವಾಣಿ ದಾಂಪತ್ಯ ಜೀವನ ಆರಂಭಿಸಿದ್ದಾರೆ. ರಾಜಸ್ಥಾನದ ಜೈಸಲ್ಮೇರ್‌ನ ಸೂರ್ಯಗಢ ಪ್ಯಾಲೆಸ್ ಹೋಟೆಲ್‌ನಲ್ಲಿ ಅದ್ಧೂರಿ ವಿವಾಹ ಸಮಾರಂಭ ನಡೆದಿದೆ. ಈ ಕಾರ್ಯಕ್ರಮಕ್ಕೆ ಕುಟುಂಬಸ್ಥರು, ಆತ್ಮೀಯರು ಸೇರಿದಂತೆ ಬಾಲಿವುಡ್ನ ಕೆಲವು ಗಣ್ಯರು ಸಾಕ್ಷಿಯಾಗಿದ್ದರು. ಚಿತ್ರರಂಗದವರಿಗಾಗಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.
ಮದುವೆ ಶಾಸ್ತ್ರಗಳು ಪೂರ್ಣಗೊಂಡ ಕೂಡಲೇ ನವದಂಪತಿ ನಿನ್ನೆ ಸಂಜೆ ತಮ್ಮ ಮದುವೆಯ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮದುವೆಯ ಚಿತ್ರಗಳು ಹೊರಬರುತ್ತಿದ್ದಂತೆ ನವ ಜೋಡಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಅಭಿಮಾನಿಗಳು, ಸೆಲೆಬ್ರಿಟಿಗಳು ಶುಭ ಕೋರಿದ್ದಾರೆ. ಆಹ್ವಾನಿತರ ಪಟ್ಟಿಯಲ್ಲಿದ್ದ ರಾಮ್ಚರಣ್ ಪತ್ನಿ ಉಪಾಸನಾ ಕಾಮಿನೇನಿ ಸೋಶಿಯಲ್ ಮೀಡಿಯಾದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಬಳಿ ಕ್ಷಮೆ ಯಾಚಿಸಿದ್ದಾರೆ.
ಫೆಬ್ರವರಿ 7ರ ರಾತ್ರಿ 10.30 ರ ವೇಳೆಗೆ ಕಿಯಾರಾ ಅಡ್ವಾಣಿ ಮದುವೆಯ ಸುಂದರ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಮದುವೆಯ ಚಿತ್ರಗಳನ್ನು ಹಂಚಿಕೊಂಡ ಕೂಡಲೇ ಮೆಚ್ಚುಗೆಯ ಮಳೆ ಸುರಿದಿದೆ. ಸೆಲೆಬ್ರಿಟಿಗಳು ಸೇರಿದಂತೆ ಅಭಿಮಾನಿಗಳು ಮದುವೆಗೆ ಶುಭಾಶಯಗಳನ್ನು ನೀಡಲು ಪ್ರಾರಂಭಿಸಿದರು. ಈ ಶುಭಾಶಯ ಸಂದೇಶ ಇನ್ನೂ ಮುಂದುವರೆದಿದೆ. 'ಆರ್‌ಆರ್‌ಆರ್' ಖ್ಯಾತಿಯ ಸೂಪರ್ ಸ್ಟಾರ್ ರಾಮ್ ಚರಣ್ ಅವರ ಪತ್ನಿ ಉಪಾಸನಾ ಕಾಮಿನೇನಿ ಕೊನಿಡೇಲಾ ಅವರು ಸಿದ್ಧಾರ್ಥ್-ಕಿಯಾರಾ ಅವರ ಮದುವೆಯ ಚಿತ್ರಗಳನ್ನು ಇಷ್ಟಪಟ್ಟಿದ್ದಾರೆ. ಜೊತೆಗೆ ಕ್ಷಮೆಯನ್ನೂ ಕೇಳಿದ್ದಾರೆ.