ನ್ಯೂಯಾರ್ಕ್: ವಿಶ್ವಸಂಸ್ಥೆಯ ಸಾಮಾನ್ಯ ಸಭೆ 2022ರಲ್ಲಿ UNICEF Goodwill ರಾಯಭಾರಿ, ನಟಿ ಪ್ರಿಯಾಂಕಾ ಚೋಪ್ರಾ, ಜಾಗತಿಕ ಒಗ್ಗಟ್ಟು, ಸುಸ್ಥಿರ ಅಭಿವೃದ್ಧಿ, ಕೋವಿಡ್, ಬಡತನ, ಹವಾಮಾನ ಬಿಕ್ಕಟ್ಟಿನ ಕುರಿತು ಮಾತನಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಸಭೆಯಲ್ಲಿ 'ವಿಶ್ವದಲ್ಲಿ ಎಲ್ಲವೂ ಸರಿಯಾಗಿಲ್ಲ' ಎಂದು ಕೂಡ ಹೇಳಿದ್ದಾರೆ. ಸುಸ್ಥಿರ ಅಭಿವೃದ್ಧಿ ಗುರಿಗಳನ್ನು (SDGs) ಸಾಧಿಸಲು ಕೇವಲ ಎಂಟು ವರ್ಷಗಳು ಉಳಿದಿವೆ. ಸುರಕ್ಷಿತ ಮತ್ತು ಆರೋಗ್ಯಕರ ಜಗತ್ತು ಎಂಬುದು ಪ್ರತಿಯೊಬ್ಬ ವ್ಯಕ್ತಿಯ ಹಕ್ಕು, ಗುರಿ ಸಾಧನೆಗೆ ಜಾಗತಿಕ ಒಗ್ಗಟ್ಟು ಅಗತ್ಯ ಎಂದಿದ್ದಾರೆ.
"ನಾವಿಂದು ನಮ್ಮ ಜಗತ್ತಿನ ನಿರ್ಣಾಯಕ ಹಂತದಲ್ಲಿದ್ದೇವೆ. ಜಾಗತಿಕ ಒಗ್ಗಟ್ಟು ಎಂದಿಗಿಂತಲೂ ಹೆಚ್ಚು ಮುಖ್ಯವಾದ ಸಮಯವಿದು. ಪ್ರತೀ ದೇಶಗಳು ಸಾಂಕ್ರಾಮಿಕ ಕೋವಿಡ್, ಹವಾಮಾನ ಬಿಕ್ಕಟ್ಟಿನಂತಹ ಸಮಸ್ಯೆಗಳನ್ನು ಎದುರಿಸಿವೆ. ಸಂಘರ್ಷ, ಕ್ರೋಧ, ಬಡತನ, ಸ್ಥಳಾಂತರ, ಹಸಿವು ಮತ್ತು ಅಸಮಾನತೆಗಳು ಪ್ರಪಂಚದ ಅಡಿಪಾಯವನ್ನು ನಾಶಪಡಿಸುತ್ತವೆ ಎಂದು ಪ್ರಿಯಾಂಕಾ ಸೋಮವಾರ ಯುಟ್ಯೂಬ್ ಮೂಲಕ ಯುಎನ್ ಹಂಚಿಕೊಂಡ ಭಾಷಣದಲ್ಲಿ ಹೇಳಿದರು.
"ನಮ್ಮ ಪ್ರಪಂಚದಲ್ಲಿ ಎಲ್ಲವೂ ಸರಿಯಾಗಿಲ್ಲ" ಎಂದು ಕೂಡ ಹೇಳಿದರು. "ಈ ಬಿಕ್ಕಟ್ಟುಗಳು ಆಕಸ್ಮಿಕವಾಗಿ ಸಂಭವಿಸಿಲ್ಲ. ಆದರೆ ಅವುಗಳನ್ನು ಸೂಕ್ತ ಯೋಜನೆಯಿಂದ ಸರಿಪಡಿಸಬಹುದು'' ಎಂದು ಹೇಳಿದರು.