ವಿದೇಶಿ ಸೆನ್ಸಾರ್ ಮಂಡಳಿಯ ಸದಸ್ಯ ಉಮೈರ್ ಸಂಧು ಅವರು ಈಗಾಗಲೇ ಹಲವರ ವಿರುದ್ಧ ವಿವಾದಿತ ಹೇಳಿಕೆ, ಟ್ವೀಟ್‌ಗಳನ್ನು ಮಾಡುವ ಮೂಲಕ ಸಾಕಷ್ಟು ಸುದ್ದಿಯಾಗಿದ್ದಾರೆ. ಇದೀಗ ಬಾಲಿವುಡ್ ನಟಿ ಸೆಲೀನಾ ಜೇಟ್ಲಿ ಅವರ ಸರದಿ. ನಟಿಯ ವಿರುದ್ಧ ಅಶ್ಲೀಲ ಟ್ವೀಟ್ ಮಾಡಿದ್ದು, ಹೊಸ ವಿವಾದದಲ್ಲಿ ಸಿಲುಕಿದ್ದಾರೆ. ಈ ಟ್ವೀಟ್ಗೆ ನಟಿ ಸೆಲೀನಾ ಜೇಟ್ಲಿ ಕೂಡಾ ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ.
ಆನ್ಲೈನ್ ಸಾಮಾಜಿಕ ಜಾಲತಾಣ ವೇದಿಕೆಯಾದ ಟ್ವಿಟರ್ನಲ್ಲಿ ಸಾಕಷ್ಟು ಸಕ್ರಿಯರಾಗಿರುವ ಉಮೈರ್ ಸಂಧು, ಸೆಲೀನಾ ಜೇಟ್ಲಿ ಅವರನ್ನು ಗುರಿಯಾಗಿಸಿಕೊಂಡಿದ್ದಾರೆ. ಫಿರೋಜ್ ಖಾನ್ ಮತ್ತು ಫರ್ದೀನ್ ಖಾನ್ ಅವರ ಜೊತೆ ಸೆಲಿನಾ ಜೇಟ್ಲಿ ದೈಹಿಕ ಸಂಬಂಧ ಹೊಂದಿದ್ದರು ಎಂದು ಹೇಳಿದ್ದಾರೆ. ಉಮೈರ್ ಸಂಧು ಟ್ವಿಟರ್ ಪೋಸ್ಟ್ ಕಂಡು ನಟಿ ಸಿಕ್ಕಾಪಟ್ಟೆ ಗರಂ ಆಗಿದ್ದಾರೆ. ತಮ್ಮ ಬಗ್ಗೆ ಅಪಪ್ರಚಾರ ಮಾಡುತ್ತಿರುವ 'ಸ್ವಯಂಘೋಷಿತ ವಿಮರ್ಶಕ'ನ ವಿರುದ್ಧ ಕಿಡಿ ಕಾರಿದ್ದಾರೆ. ಉಮೈರ್ ಸಂಧು ಬಳಸಿರುವ ಭಾಷೆಯಲ್ಲೇ ನಟಿ ಕೂಡ ತಿರುಗೇಟು ಕೊಟ್ಟಿದ್ದಾರೆ. ಸಾಮಾಜಿಕ ಜಾಲತಾಣ ಬಳಕೆದಾರರೂ ಸಹ ಉಮೈರ್ ಸಂಧು ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಉಮೈರ್ ಸಂಧು ವಿದೇಶಿ ಸೆನ್ಸಾರ್ ಮಂಡಳಿಯ ಸದಸ್ಯ. ಹೆಚ್ಚಾಗಿ ಬಾಲಿವುಡ್ ಸಿನಿಮಾಗಳನ್ನು ವಿಮರ್ಶಿಸುತ್ತಿರುತ್ತಾರೆ. ನಟ, ನಟಿಯರ ಸಂಬಂಧದ ಕುರಿತು ಮಾತನಾಡುತ್ತಾರೆ. ವಿವಾದಾತ್ಮಕ ಟ್ವೀಟ್ ಮೂಲಕವೂ ಸಾಮಾಜಿಕ ಜಾಲತಾಣದಲ್ಲಿ ಗುರುತಿಸಿಕೊಂಡಿದ್ದಾರೆ. ಇವರ ಖಾತೆಯನ್ನು ಹೆಚ್ಚಿನ ಸಂಖ್ಯೆಯ ಜನರು ಫಾಲೋ ಮಾಡುತ್ತಾರೆ. ಈ ಹಿಂದೆ ಹಲವು ಬಾಲಿವುಡ್ ತಾರೆಯರ ಬಗ್ಗೆ ಮಾತನಾಡಿದ್ದು, ಸೆಲೀನಾ ಜೇಟ್ಲಿ ಅವರನ್ನು ಟಾರ್ಗೆಟ್ ಮಾಡಿದ್ದಾರೆ.
ನಟರೊಂದಿಗೆ ದೈಹಿಕ ಸಂಬಂಧದ ಬಗ್ಗೆ ಪೋಸ್ಟ್ ಮಾಡಿದ ಬೆನ್ನಲ್ಲೇ ಸೆಲೀನಾ ಜೇಟ್ಲಿ ಕೂಡ ಟ್ವೀಟ್ ಮಾಡಿದ್ದಾರೆ. ಮಿಸ್ಟರ್ ಸಂಧು, "ಈ ಟ್ವೀಟ್ ಮೂಲಕ ನಿಮಗೆ ಪುರುಷತ್ವ ಬಂದಿದೆ ಎನಿಸುತ್ತಿದೆ. ನಿಮ್ಮ ಆ ಸಮಸ್ಯೆ ಸರಿಪಡಿಸಿಕೊಳ್ಳಲು ಅನೇಕ ಮಾರ್ಗಗಳಿವೆ. ನೀವು ವೈದ್ಯರ ಸಲಹೆ ಪಡೆಯಬಹುದು. ಒಮ್ಮೆ ಪಯತ್ನಿಸಿ" ಎಂಬರ್ಥದಲ್ಲಿ ಖಾರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಟ್ವಿಟರ್ ಸಂಸ್ಥೆಗೂ ಮನವಿ ಮಾಡಿದ್ದಾರೆ.
ನಟಿಯ ರೀಟ್ವೀಟ್ಗೆ ಪ್ರತಿಕ್ರಿಯಿಸಿರುವ ವಿಮರ್ಶಕ, ನೀವು ಸಿ ಗ್ರೇಡ್ ನಟಿ. ನಿಮ್ಮ ಸಿನಿಮಾಗಳನ್ನೊಮ್ಮೆ ನೋಡಿ. ಸಾಫ್ಟ್ ಪೋರ್ನ್ ಚಿತ್ರಗಳನ್ನು ಮಾಡಿದ್ದೀರಿ. ಬಳಿಕ ಶ್ರೀಮಂತ ವ್ಯಕ್ತಿಯೊಂದಿಗೆ ಮದುವೆಯಾಗಿ ಸೆಟ್ಲ್ ಆಗಿದ್ದೀರಿ. ಸ್ವಾರ್ಥಿ ಮಹಿಳೆ ಎಂದು ಹೇಳಿದ್ದಾರೆ.