ಚಿತ್ರದ ಟೀಸರ್ ಬಿಡುಗಡೆ ವೇಳೆ ಮಾತನಾಡುತ್ತಿರುವುದು ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ, ನಟಿಸುತ್ತಿರುವ 'ಯುಐ' ಚಿತ್ರದ ಟೀಸರ್ ಇಂದು ರಿಲೀಸ್ ಆಗಿದೆ. ನಗರದ ಖಾಸಗಿ ಹೋಟೆಲ್ನಲ್ಲಿ ನಟ ಶಿವ ರಾಜ್‌ಕುಮಾರ್ ಟೀಸರ್ ಬಿಡುಗಡೆಗೊಳಿಸಿದರು. ಟಾಲಿವುಡ್ ನಿರ್ಮಾಪಕ ಅಲ್ಲು ಅರವಿಂದ್ ಜೊತೆಗಿದ್ದರು.
ಡಿಜಿಟಲ್ ವೇದಿಕೆಯ ಮೂಲಕ ಕಿಚ್ಚ ಸುದೀಪ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಪ್ರಿಯಾಂಕಾ ಉಪೇಂದ್ರ, ನಿರ್ಮಾಪಕ ಮೈಲಾರಿ ಶ್ರೀಕಾಂತ್, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ನಾಯಕಿಯರಾದ ರೀಷ್ಮಾ ನಾಣಯ್ಯ, ನಿಧಿ ಸುಬ್ಬಯ್ಯ ಸೇರಿದಂತೆ ಹಲವರು ಟೀಸರ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ನಟ ಶಿವ ರಾಜ್‌ಕುಮಾರ್ ಮಾತನಾಡಿ, ''ಉಪೇಂದ್ರ ಟೈಟಲ್ ಇಡುವುದರಲ್ಲಿ ನಿಸ್ಸೀಮರು. ಅವರ ನಿರ್ದೇಶನದ ಬತ್ತಳಿಕೆಯಲ್ಲಿ ಹೊರಬಂದ ಶ್!, ತರ್ಲೆ ನನ್ಮಗ, ಓಂ.. ಎಲ್ಲವೂ ಸೂಪರ್ ಹಿಟ್ ಚಿತ್ರಗಳೇ. ಶ್! ಚಿತ್ರವನ್ನು ನಾನು 15-20 ಸಾರಿ ನೋಡಿರಬಹುದು. ಈ ಟೈಟಲ್ ನನ್ನನ್ನು ಅಷ್ಟು ಆಕರ್ಷಿಸಿತ್ತು. ಓಂ ಚಿತ್ರ ಬಂದಾಗ ಅವರ ಮತ್ತು ನಮ್ಮ ನಡುವಿನ ಒಡನಾಟ ಹೆಚ್ಚಾಯಿತು. ಉಪ್ಪಿ ಕೆಲಸ ಮಾಡುವ ರೀತಿಯೇ ವಿಭಿನ್ನ. ಅವರ ವಿಚಾರಗಳೇ ಅದ್ಭುತ. ಯುಐ ಕೂಡ ಅದೇ ರೀತಿ ಅರ್ಥ ಹೇಳುತ್ತದೆ. ಉಪ್ಪಿ ಈ ಚಿತ್ರದಲ್ಲಿ ವಿಶ್ವವನ್ನೇ ತೋರಿಸಲು ಹೊರಟಿದ್ದಾರೆ" ಎಂದು ಹೇಳಿದರು.
"ಎಲ್ಲಾ ಭಾಷೆಯವರು ಬೆಂಗಳೂರಿನಲ್ಲಿರುವುದರಿಂದ ಬೆಂಗಳೂರು ಎಲ್ಲರಿಗೂ ಇಷ್ಟವಾಗುತ್ತೆ. ನಮ್ಮ ಫ್ಯಾಮಿಲಿಗೂ ಇವರ ಫ್ಯಾಮಿಲಿಗೂ 40 ವರ್ಷದ ಸಂಬಂಧವಿದೆ. ಶಿವ ರಾಜ್‌ಕುಮಾರ್ ನಮ್ಮ ಫ್ಯಾಮಿಲಿ ಸದಸ್ಯರಿದ್ದಂತೆ. ಉಪೇಂದ್ರ ನಿರ್ದೇಶಿಸಿ, ನಟಿಸುತ್ತಿರುವ ಯುಐ ಚಿತ್ರವನ್ನು ಕೇವಲ ಎರಡು ನಿಮಿಷದ ತುಣುಕುಗಳನ್ನು ನೋಡಿ ನನಗೆ ಬಹಳ ಇಷ್ಟವಾಯಿತು. ಈ ಸಿನಿಮಾವನ್ನು ಅವರು ಎಂಟು ಭಾಷೆಯಲ್ಲಿ ಅದ್ಧೂರಿಯಾಗಿ ಬಿಡುಗಡೆ ಮಾಡುವ ಆಲೋಚನೆ ಹೊಂದಿದ್ದಾರೆ. ಅವರಿಗೂ ಹಾಗೂ ಚಿತ್ರತಂಡಕ್ಕೂ ಒಳ್ಳೆಯದಾಗಲಿ" ಎಂದು ತೆಲುಗಿನ ಸಿನಿಮಾ ನಿರ್ಮಾಪಕ ಅಲ್ಲು ಅರವಿಂದ್ ಶುಭ ಹಾರೈಸಿದರು.
ಚಿತ್ರದ ಟೀಸರ್ ಬಿಡುಗಡೆ ವೇಳೆ ಸನ್ಮಾನ
ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮಾತನಾಡುತ್ತಾ, "ಶಿವ ರಾಜ್‌ಕುಮಾರ್ ಮತ್ತು ಉಪೇಂದ್ರ ಅವರ ಸಿನಿಮಾಗಳನ್ನು ನೋಡಿಕೊಂಡು ಬೆಳೆದವನು ನಾನು. ಎಕೆ 47 ಹಾಗೂ ಉಪೇಂದ್ರ ಸಿನಿಮಾಗಳನ್ನು ಲೆಕ್ಕವಿಲ್ಲದಷ್ಟು ಸಲ ನೋಡಿರಬಹುದು. ಅವರ ಸಿನಿಮಾಗಳೇ ಇಂದು ನನಗೆ ಸ್ಫೂರ್ತಿ. ಅಂತತಹ ದಿಗ್ಗಜರ ಜೊತೆ ಕೆಲಸ ಮಾಡುತ್ತಿರುವುದು ಖುಷಿ ನೀಡಿದೆ" ಎಂದರು.
ಉಪೇಂದ್ರ ಮತ್ತು ಶಿವರಾಜ್ ಕುಮಾರ್
"ಯುಐ ಹೊಸ ಪ್ರಪಂಚಕ್ಕೆ ಕರೆದುಕೊಂಡು ಹೋಗುತ್ತದೆ" ಎಂದು ನಟಿಯರಾದ ರೀಷ್ಮಾ ನಾಣಯ್ಯ ಮತ್ತು ನಿಧಿ ಸುಬ್ಬಯ್ಯ ತಮ್ಮ ಮನದಾಳದ ಮಾತು ವ್ಯಕ್ತಪಡಿಸಿದರು. ಪ್ರಿಯಾಂಕಾ ಉಪೇಂದ್ರ ಕೂಡ ಚಿತ್ರಕ್ಕೆ ಶುಭ ಹಾರೈಸಿದರು.
"ಚಿತ್ರದ ಬಗ್ಗೆ ನಾನು ಹೇಳಬಾರದು, ಅಭಿಮಾನಿಗಳು ಹೇಳಬೇಕು. ಮನುಷ್ಯನಿಗೆ ಮೂರು ಹಂತಗಳಿದ್ದಂತೆ ನನ್ನಲ್ಲಿಯೂ ಹಂತಗಳು ಇದ್ದವು. ಆಯಾ ಕಾಲಘಟ್ಟಕ್ಕೆ ತಕ್ಕಂತೆ ಸಿನಿಮಾ ಮಾಡುತ್ತಲೇ ಬಂದಿದ್ದೇನೆ. ಮೊದಮೊದಲು ನಾನು ಸರಿ ಇದ್ದು, ಪ್ರಪಂಚ ಸರಿ ಇಲ್ಲ ಅಂತ ಅನ್ನಿಸಿದಾಗ ಕೆಲವು ಸಿನಿಮಾ ಮಾಡಿದೆ. ಕ್ರಮೇಣ ಸ್ವಲ್ಪ ಬುದ್ಧಿವಂತಿಕೆ ಬರುತ್ತಿದ್ದಂತೆ ಹೊರಗೆಲ್ಲವೂ ಸರಿ ಇದೆ, ನನ್ನಲ್ಲಿ ಮಾತ್ರ ಸಮಸ್ಯೆ ಇದೆ ಅಂತ ಅನ್ನಿಸಿತು. ಆಗ ಮತ್ತೊಂದಿಷ್ಟು ಸಿನಿಮಾ ಮಾಡಿದೆ. ಈಗ ನಾನು ಸರಿ ಇದ್ದು, ಎಲ್ಲವೂ ಸರಿ ಇದೆ, ಎಲ್ಲರೂ ಸರಿಯಾಗಿದ್ದಾರೆ ಅನ್ನಿಸುತ್ತಿದೆ. ಹಾಗಾಗಿ ಹೇಳಲು ಯಾವ ವಿಚಾರಗಳು ಉಳಿದಿಲ್ಲವೆಂದು ತಿಳಿದಾಗ ಬಂದ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಾ ಬಂದೆ. ಆದರೂ, ಇನ್ನೂ ಏನೋ ಹೇಳುವುದಿದೆ ಎಂಬ ಶಕ್ತಿ ಈ ಸಿನಿಮಾ ಮಾಡಿಸಿದೆ. ನಾನು ಮಾತನಾಡಬಾರದು, ನೀವು ಮಾತನಾಡಬೇಕು ಅನ್ನೋದೇ ಈ ಚಿತ್ರದ ಉದ್ದೇಶ. ನೀವೆಲ್ಲರೂ (U) ನಾನು (I) ಆಗಬೇಕು ಎಂಬುದೇ ಈ ಚಿತ್ರದ ಹೈಲೈಟ್ಸ್" ಎನ್ನುತ್ತಾ ಉಪೇಂದ್ರ ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿದರು.