ಟಾಲಿವುಡ್ ನಟ ವಿಜಯ್ ದೇವರಕೊಂಡ ಮತ್ತು ಬೋಲ್ಡ್ ನಟಿ ಅನನ್ಯಾ ಪಾಂಡೆ ಅಭಿನಯದ ಬಹು ನಿರೀಕ್ಷಿತ ಲೈಗರ್ ಸಿನಿಮಾ ತೆಲುಗು, ತಮಿಳು, ಹಿಂದಿ, ಮಲಯಾಳಂ ಹಾಗೂ ಕನ್ನಡ ಭಾಷೆಯಲ್ಲಿ ಆಗಸ್ಟ್ 25ಕ್ಕೆ ತೆರೆ ಕಾಣಲು ಸಜ್ಜಾಗಿದೆ. ಈ ಸಿನಿಮಾ ಮೂಲಕ ವಿಜಯ್ ದೇವರಕೊಂಡ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರ ಹೊಮ್ಮಲಿದ್ದಾರೆ. ಲೈಗರ್ ಚಿತ್ರತಂಡ ಭರ್ಜರಿ ಪ್ರಚಾರ ಕೈಗೊಳ್ಳುತ್ತಿದೆ. ಆದ್ರೆ ಟ್ವಿಟರ್ನಲ್ಲಿ ಸಿನಿಮಾ ಬಹಿಷ್ಕರಿಸುವಂತೆ ಅಭಿಯಾನ ಆರಂಭವಾಗಿದೆ.
ಈ ಚಿತ್ರಕ್ಕೆ ಬಾಲಿವುಡ್ ಖ್ಯಾತ ನಿರ್ಮಾಣ ಸಂಸ್ಥೆ ಧರ್ಮ ಪ್ರೊಡಕ್ಷನ್ ಮತ್ತು ಪುರಿ ಕನೆಕ್ಟ್ಸ್ ಬಂಡವಾಳ ಹೂಡಿದೆ. ವಿಶ್ವ ಬಾಕ್ಸಿಂಗ್ ಲೆಜೆಂಡ್ ಮೈಕ್ ಟೈಸನ್ ಈ ಚಿತ್ರದಲ್ಲಿ ಗೆಸ್ಟ್ ರೋಲ್ನಲ್ಲಿ ನಟಿಸಿದ್ದು, ಹಿರಿಯ ನಟಿ ರಮ್ಯಾ ಕೃಷ್ಣ ಅವರು ವಿಜಯ್ ದೇವರಕೊಂಡ ತಾಯಿಯಾಗಿ ಅಭಿನಯಿಸಿದ್ದಾರೆ. ಇನ್ನೇನು ನಾಲ್ಕು ದಿನಗಳಲ್ಲಿ ಸಿನಿಮಾ ತೆರೆ ಕಾಣಲಿದೆ. ಆದರೆ ಅದಕ್ಕೂ ಮುನ್ನವೇ '#BoycottLigerMovie' ಎಂದು ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್ ಪ್ರಾರಂಭವಾಗಿದೆ.
ಲೈಗರ್ ನಿಷೇಧಕ್ಕೆ ಕರೆ ನೀಡುವ ನೆಟಿಜನ್‌ಗಳು ವಿವಿಧ ಕಾರಣಗಳನ್ನು ಟ್ವಿಟರ್ನಲ್ಲಿ ಉಲ್ಲೇಖಿಸುತ್ತಿದ್ದಾರೆ. ಚಿತ್ರಕ್ಕೆ ಧರ್ಮ ಪ್ರೊಡಕ್ಷನ್, ಕರಣ್ ಜೋಹರ್ ಬೆಂಬಲವಿರುವ ಹಿನ್ನೆಲೆ ಲೈಗರ್ ನಿಷೇಧಕ್ಕೆ ಬೆಂಬಲ ಕೊಡುತ್ತೇವೆಂದು ಹಲವರು ಟ್ವಿಟರ್ನಲ್ಲಿ ಉಲ್ಲೇಖಿಸಿದ್ದಾರೆ. ಡ್ರಗ್ಸ್ ಪ್ರಕರಣದಲ್ಲಿ ನಟಿ ಅನನ್ಯಾ ಪಾಂಡೆ ಹೆಸರು ಕೇಳಿ ಬಂದಿದೆ ಎಂದು ಆರೋಪಿಸಿ ಲೈಗರ್ ನಿಷೇಧಕ್ಕೆ ಹಲವರು ಒತ್ತಾಯಿಸಿದ್ದಾರೆ.
ಸದ್ಯ ನಟ ವಿಜಯ್ ದೇವರಕೊಂಡ ವಿರುದ್ಧ ಸಾಕಷ್ಟು ಋಣಾತ್ಮಕ ಕಾಮೆಂಟ್‌ಗಳು ಸಾಮಾಜಿಕ ಜಾಲತಾಣದ ವೇದಿಕೆಗಳಲ್ಲಿ ಹರಿದಾಡುತ್ತಿವೆ. ವಿಜಯ್ ಮಾತ್ರವಲ್ಲ, ಸಾಮಾಜಿಕ ಮಾಧ್ಯಮ ಟ್ರೋಲ್‌ಗಳು ಚಿತ್ರದ ನಾಯಕಿ ಅನನ್ಯಾ ಪಾಂಡೆ ಮತ್ತು ನಿರ್ಮಾಪಕ ಕರಣ್ ಜೋಹರ್ ಅವರನ್ನು ಗುರಿಯಾಗಿಸಿಕೊಂಡು ಆಕ್ರೋಶ ಹೊರಹಾಕುತ್ತಿವೆ.