ಮುಂಬೈ, ಮಹಾರಾಷ್ಟ್ರ:ತುನಿಶಾ ಶರ್ಮಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟ ಹಲವು ಆರೋಪಗಳನ್ನು ಎದುರಿಸುತ್ತಿರುವ ಶೀಜನ್ ಖಾನ್ ಕುಟುಂಬ ಸೋಮವಾರ ಸುದ್ದಿಗೋಷ್ಠಿ ನಡೆಸಿ ಹಲವಾರು ಪ್ರಶ್ನೆಗಳಿಗೆ ಉತ್ತರ ನೀಡಿದೆ. ಕುಟುಂಬದ ಪರವಾಗಿ ಹೇಳಿಕೆ ನೀಡಿದ ಶೀಜನ್ ಅವರ ವಕೀಲರು, ತುನಿಶಾ ಅವರನ್ನು ಅವರ ತಾಯಿ ನಿಯಂತ್ರಿಸುತ್ತಿದ್ದರು ಎಂದು ಆರೋಪಿಸಿದ್ದಾರೆ. ತುನಿಶಾ ದರ್ಗಾಕ್ಕೆ ಭೇಟಿ ನೀಡಿ ಹಿಜಾಬ್ ಧರಿಸಿರುವ ಬಗ್ಗೆ ಎದ್ದಿರುವ ಪ್ರಶ್ನೆಗಳಿಗೂ ಶೀಜನ್ ಕುಟುಂಬಸ್ಥರು ಇದೇ ವೇಳೆ ಉತ್ತರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶೀಜನ್ ಕುಟುಂಬಸ್ಥರು, ತುನಿಶಾ ಕುಟಂಬ ಮಾಡಿರುವ ಆರೋಪವನ್ನು ತಳ್ಳಿಹಾಕಿದೆ. ರಕ್ತ ಸಂಬಂಧ ಇಲ್ಲದಿದ್ದರೂ ತುನಿಶಾ ನನಗೆ ಸಹೋದರಿ ಸಮಾನವಾಗಿದ್ದರು. ನಾನು ತುನಿಶಾಳ ಸಹೋದರಿ ಇದ್ದಂತೆ ಎಂದು ಭಾವಿಸಿದ್ದೇನೆ. ಯಾವುದೇ ಸಂದರ್ಭದಲ್ಲಿ ತುನಿಶಾರನ್ನು ನೋವಿನಿಂದ ಬಳಲುತ್ತಿರುವುದನ್ನು ನಾವು ನೋಡುತ್ತಿರಲಿಲ್ಲ ಎಂದರು.
ಹಿಜಾಬ್ ಮತ್ತು ದರ್ಗಾದ ಪ್ರಶ್ನೆಯು ಉದ್ಭವಿಸುವುದಿಲ್ಲ. ನಾವು ನಂಬುವ ಧರ್ಮ ನಮ್ಮ ವೈಯಕ್ತಿಕ ವಿಷಯ. ಅದು ನಮ್ಮ ವೈಯಕ್ತಿಕ ಜಾಗದಲ್ಲಿ ನಡೆಯುತ್ತದೆ. ಅದಕ್ಕಾಗಿ ನಾವು ಯಾರನ್ನೂ ಒತ್ತಾಯಿಸುವುದಿಲ್ಲ. ಹಾಗೆಯೇ ಯಾರನ್ನೂ ಒತ್ತಾಯಿಸುವ ಹಕ್ಕು ನಮಗಿಲ್ಲ ಎಂದು ಶೀಜನ್ ಸಹೋದರಿ ಫಲಕ್ ನಾಜ್ ಹೇಳಿದ್ದಾರೆ.
ತುನಿಶಾ ಹಾಕಿಕೊಂಡಿರುವ ಹಿಜಾಬ್ ಫೋಟೋ ಚಿತ್ರಿಕರಣದ ಭಾಗವಾಗಿದೆ. ಅವರು ಶುದ್ಧ ಹಿಂದಿ ಮಾತನಾಡುತ್ತಾರೆ. ಪಾತ್ರದಲ್ಲಿದ್ದಾಗ ನಾವು ಧರಿಸಿದ್ದ ಉಡುಪಿನಲ್ಲಿಯೇ ಸುಮಾರು 12-13 ಗಂಟಗಳ ಕಾಲ ಕಳೆಯುತ್ತೇವೆ. ಆ ವೇಳೆ, ನಾವು ಅದೇ ಭಾಷೆಯಲ್ಲಿ ಮಾತನಾಡುವುದು ಸಹಜ. ಭಾಷೆಗೂ ಧರ್ಮಕ್ಕೂ ಏನು ಸಂಬಂಧ ಎಂದು ಶಫಾಕ್ ಪ್ರಶ್ನಿಸಿದರು.
ತುನಿಶಾ ಶರ್ಮಾ ಆತ್ಮಹತ್ಯೆ: ಡಿಸೆಂಬರ್ 24ರಂದು ಟಿವಿ ಧಾರಾವಾಹಿಯೊಂದರ ಸೆಟ್‌ನಲ್ಲೇ ಕಿರುತೆರೆ ನಟಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿತ್ತು. 20 ವರ್ಷದ ತುನೀಶಾ ಶರ್ಮಾ ಸಾವಿಗೆ ಶರಣಾದ ನಟಿ ಎಂದು ಗುರುತಿಸಲಾಗಿತ್ತು.