ಮಂಗಳೂರು: ತುಳು ಸಿನಿಮಾ ರಂಗದ ಹಿರಿಯ ನಟ ದೇವದಾಸ್ ಕಾಪಿಕಾಡ್ ಅವರು 'ರಾಪಟ' ಎಂಬ ತುಳು ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದಿದ್ದಾರೆ. ಇದರ ಜೊತೆಗೆ, ಸಿನಿಮಾದಲ್ಲಿ ಪ್ರಮುಖ ಪಾತ್ರಕ್ಕೆ ಬಣ್ಣ ಕೂಡ ಹಚ್ಚಿದ್ದಾರೆ. ಈ ಸಿನಿಮಾವನ್ನು ಅವರ ಪುತ್ರ ಅರ್ಜುನ್ ಕಾಪಿಕಾಡ್ ನಿರ್ದೇಶನ ಮಾಡಿದ್ದು, ಇಂದು ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ.
ನಾಯಕ ನಟನಾಗಿ ಹಲವು ತುಳು ಸಿನಿಮಾಗಳಲ್ಲಿ ಕಾಣಿಸಿಕೊಂಡ ಅರ್ಜುನ್ ಕಾಪಿಕಾಡ್ ನಿರ್ದೇಶನದ ಎರಡನೇ ಸಿನಿಮಾ ಇದಾಗಿದೆ. 'ಅಬತರ' ಎಂಬ ತುಳು ಸಿನಿಮಾವನ್ನು ಇವರು ಈ ಮೊದಲು ನಿರ್ದೇಶಿಸಿದ್ದರು. ಇದರ ಯಶಸ್ಸಿನ ಬಳಿಕ ರಾಪಟ ನಿರ್ದೇಶಿಸಿದ್ದಾರೆ. ತಂದೆ ದೇವದಾಸ್ ಕಾಪಿಕಾಡ್ ಬರೆದ ಕಥೆಗೆ ಮಗನೇ ನಿರ್ದೇಶನ ಮಾಡಿರುವುದು ಸಿನಿಮಾದ ವಿಶೇಷತೆ.
ಈ ಬಗ್ಗೆ ಮಾತನಾಡಿದ ದೇವದಾಸ್ ಕಾಪಿಕಾಡ್, "ನನ್ನ ಮಗ ಅರ್ಜುನ್ ಕಾಪಿಕಾಡ್ ನಿರ್ದೇಶನದಲ್ಲಿ ಎರಡನೇ ಸಿನಿಮಾ ಬರುತ್ತಿದೆ. ಹುಡುಗರು ಕಷ್ಟ ಪಟ್ಟು ಸಿನಿಮಾ ಮಾಡಿದ್ದಾರೆ. ಗಲ್ಫ್ ರಾಷ್ಟ್ರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿನಿಮಾದಲ್ಲಿ ನಟಿಸಿದ್ದ ಹಿರಿಯ ನಟರೆಲ್ಲರೂ ಅರ್ಜುನ್ ಕಾಪಿಕಾಡ್ನನ್ನು ಸಣ್ಣಂದಿನಿಂದಲೇ ಕಂಡವರು. ಅವರನ್ನೆಲ್ಲಾ ಇವನು ಮಾಮ, ಮಾಮ ಎಂದು ಕರೆಯುತ್ತಿದ್ದನು. ಆದ್ದರಿಂದ ಸಿನಿಮಾ ನಿರ್ದೇಶನ ಮಾಡುವಾಗ ಆತನಿಗೆ ಭಯವಾಗಿಲ್ಲ" ಎಂದರು.
ಬಳಿಕ ಮಾತನಾಡಿದ ಅರ್ಜುನ್ ಕಾಪಿಕಾಡ್, "ತಂದೆಯ ಬರವಣಿಗೆಯನ್ನು ಚಿಕ್ಕಂದಿನಿಂದಲೂ ನೋಡಿಕೊಂಡು ಬಂದಿದ್ದೇನೆ. ಅವರ ಬರವಣಿಗೆಯ ದೊಡ್ಡ ಅಭಿಮಾನಿ ನಾನು. ಇದೀಗ ಅವರು ಬರೆದ ಕಥೆಯನ್ನು ನಿರ್ದೇಶನ ಮಾಡುವ ಅವಕಾಶ ಕೊಟ್ಟಿದ್ದಾರೆ. ಜನರಿಗೆ ಈ ಸಿನಿಮಾ ಇಷ್ಟವಾದರೆ ಅವರ ಬರವಣಿಗೆಗೆ ನ್ಯಾಯ ಕೊಡಿಸಿದ್ದೇನೆ ಎಂದು ಭಾವಿಸುತ್ತೇನೆ. ಹಿರಿಯ ನಟರೆಲ್ಲರನ್ನು ಚಿಕ್ಕಂದಿನಿಂದಲೇ ನೋಡಿಕೊಂಡು ಬಂದಿದ್ದೇನೆ. ನನಗೆ ನಿರ್ದೇಶನ ಮಾಡುವಾಗ ಯಾವುದೇ ಭಯ ಆಗಿಲ್ಲ. ಎಲ್ಲರೂ ಸಪೋರ್ಟ್ ಮಾಡಿದ್ದಾರೆ" ಎಂದು ಹೇಳಿದರು.
ತುಳುನಾಡಿನ ಹಾಸ್ಯ ದಿಗ್ಗಜರು ಚಿತ್ರದಲ್ಲಿ ನಟಿಸಿದ್ದು, ತಾಂತ್ರಿಕ ವಿಭಾಗದಲ್ಲೂ ಅನುಭವಿ ತಂಡ ಕೆಲಸ ಮಾಡಿದೆ. ಹಾಸ್ಯ, ಮನರಂಜನೆಯ 'ರಾಪಟ' ಸಿನಿಮಾದ ವಿಭಿನ್ನವಾದ ಕಥೆ ಹೊಂದಿದೆ. ಈ ಚಿತ್ರದಲ್ಲಿ ಖ್ಯಾತ ಕಲಾವಿದರು ಅಭಿನಯಿಸಿದ್ದಾರೆ. ಅನೂಪ್ ಸಾಗರ್ ನಾಯಕ ನಟನಾಗಿ ಹಾಗೂ ನಿರೀಕ್ಷ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ತುಳು ಚಿತ್ರ ರಂಗದ ದಿಗ್ಗಜರಾದ ದೇವದಾಸ್ ಕಾಪಿಕಾಡ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ಸಾಯಿ ಕೃಷ್ಣ ಕುಡ್ಲ, ದೀಪಕ್ ರೈ ಪಾಣಾಜೆ, ರೂಪಶ್ರೀ ವರ್ಕಾಡಿ , ಪ್ರಕಾಶ್ ತೂಮಿನಾಡು, ವಿಕೀಶಾ, ರವಿರಾಮ ಕುಂಜ ಮುಂತಾದವರು ನಟಿಸಿದ್ದು, ಸಹ ನಿರ್ದೇಶಕರಾಗಿ ಶನಿಲ್ ಗುರು, ಸಿನಿಮಾಟೋಗ್ರಾಫರ್ ಆಗಿ ಸಚಿನ್ ಎಸ್.ಶೆಟ್ಟಿ, ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಸಂದೀಪ್ ಶೆಟ್ಟಿ, ಎಡಿಟರ್ ಯಶ್ವಿನ್.ಕೆ. ಶೆಟ್ಟಿಗಾರ್, ಸಂಗೀತ ಪ್ರಸಾದ್.ಕೆ. ಶೆಟ್ಟಿ, ನಿರ್ಮಾಪಕರಾಗಿ ಸಂತೋಷ್ ಸುವರ್ಣ, ಸೂರ್ಯಕಾಂತ್ ಸುವರ್ಣ, ರಾಜನ್ ರಾಕೇಶ್ ಶೆಟ್ಟಿ, ಆಶಿಕಾ ಸುವರ್ಣ, ದೇವಿಕಾ ಆಚಾರ್ಯ, ಶೈಲರಾಜ್ ಪೂಜಾರಿ, ಅಭಿಶೆಟ್ಟಿ, ಮನೋಜ್‌ಶೆಟ್ಟಿ, ಯಕ್ಷಿತ್ ಶೆಟ್ಟಿ, ಮಧು ಕುಮಾರ್ ಕಾರ್ಯನಿರ್ವಹಿಸಿದ್ದಾರೆ.
ಇದನ್ನೂ ಓದಿ:ಅನಿಮಲ್ ಬಿಡುಗಡೆ: ಪ್ರೇಕ್ಷಕರ ಮನ ಗೆದ್ದ ರಣಬೀರ್ ಕಪೂರ್; ನೆಟ್ಟಿಗರು ಹೇಳಿದ್ದೇನು?
ರಾಪಟ ಸೆಪ್ಟೆಂಬರ್ 9 ಮತ್ತು 10 ರಂದು ಯುಎಇ, ಸೆ. 15 ರಂದು ಬಹರೈನ್, ಸೆ.22 ರಂದು ಮಸ್ಕತ್, ಸೆ.29 ರಂದು ಕತಾರ್‌ನಲ್ಲಿ ಪ್ರೀಮಿಯರ್ ಶೋ ನಡೆದಿದ್ದು, ಸಿನಿಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಂಡಿದೆ.