ಕನ್ನಡ ಚಿತ್ರರಂಗದಲ್ಲಿ ಮಂಗಳೂರು ಪ್ರತಿಭೆ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಾಣುತ್ತಿದ್ದಾರೆ. ಇಂತಹ ಸಮಯದಲ್ಲಿ ತುಳು ಚಿತ್ರರಂಗದ ಪ್ರಖ್ಯಾತ ಡೈರೆಕ್ಟರ್ ದೇವದಾಸ್ ಕಾಪಿಕಾಡ್ ಅವರು 'ಪುರುಷೋತ್ತಮನ ಪ್ರಸಂಗ' ಚಿತ್ರದ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ಈಗಾಗಲೇ ಪುರುಷೋತ್ತಮನ ಪ್ರಸಂಗ ಚಿತ್ರ ತಂಡವು ಶೂಟಿಂಗ್ ಮುಗಿಸಿ ಪ್ರೇಕ್ಷಕರ ಮುಂದೆ ಬರ್ತಾ ಇದೆ. ಈ ಚಿತ್ರದ ಅನುಭವದ ಬಗ್ಗೆ ನಿರ್ದೇಶಕ ದೇವದಾಸ್ ಕಾಪಿಕಾಡ್, ಯುವ ನಟ ಅಜಯ್, ನಟಿ ರಿಷಿಕಾ ನಾಯ್ಕ್ ಮತ್ತು ನಿರ್ಮಾಪಕ ರವಿಕುಮಾರ್ ಅವರು ಈ ಚಿತ್ರದ ವಿಶೇಷತೆ ಬಗ್ಗೆ ತನ್ನ ಅಭಿಪ್ರಾಯ ಹಂಚಿಕೊಂಡಿದ್ದಾರೆ.
'ಪುರುಷೋತ್ತಮನ ಪ್ರಸಂಗ' ಚಿತ್ರದಲ್ಲಿ ಕೌಟುಂಬಿಕ ಕಥಾಹಂದರ:ಮೊದಲು ಮಾತು ಶುರು ಮಾಡಿದ ನಿರ್ದೇಶಕ ದೇವದಾಸ್ ಕಾಪಿಕಾಡ್ ಅವರು, ''ತುಳುವಿನಲ್ಲಿ ಒಂಭತ್ತು ಸಿನಿಮಾಗಳನ್ನು ನಿರ್ದೇಶಿಸಿರುವ ನನಗೆ ಕನ್ನಡದಲ್ಲಿ ಇದು ಮೊದಲ ಚಿತ್ರ. ಕನ್ನಡದಲ್ಲಿ ನನಗೆ ಮೊದಲ ಚಿತ್ರ ಬಹಳ ಚಾಲೆಂಜಿಂಗ್ ಆಗಿತ್ತು. 'ಪುರುಷೋತ್ತಮನ ಪ್ರಸಂಗ' ಕೌಟುಂಬಿಕ ಕಥಾಹಂದರ ಹೊಂದಿರುವ ನೈಜಘಟನೆ ಆಧಾರಿತ ಚಿತ್ರ. ಪುರುಷೋತ್ತಮನ ಪಾತ್ರದಲ್ಲಿ ನಿರ್ಮಾಪಕ ರವಿಕುಮಾರ್ ಅವರ ಪುತ್ರ ಅಜಯ್ ಅಭಿನಯಿಸಿದ್ದಾರೆ. ಈ ಪಾತ್ರಕ್ಕೆ ಹೇಳಿ ಮಾಡಿಸಿದ ನಟ ಅಜಯ್. ಹೊರದೇಶದಲ್ಲಿ ಸಿನಿಮಾ ಕುರಿತು ಅಧ್ಯಯನ ಮಾಡಿ ಬಂದಿದ್ದಾರೆ. ರಿಷಿಕಾ ನಾಯ್ಕ್ ಈ ಚಿತ್ರದ ನಾಯಕಿ. ನವೀನ್ ಡಿ. ಪಡೀಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರು ಮುಂತಾದ ಕಲಾವಿದರು ಅಭಿನಯಿಸಿದ್ದಾರೆ. ನಾನು ಕೂಡ ನಟಿಸಿದ್ದೇನೆ. ನನ್ನ ಮಗ ಅರ್ಜುನ್ ಸಹ ನಿರ್ದೇಶನ ಮಾಡಿದ್ದಾರೆ'' ಎಂದು ಅವರು ತಿಳಿಸಿದರು.
ಈ ಚಿತ್ರದ ಬಗ್ಗೆ ಯುವ ನಟ ಅಜಯ್ ಹೇಳಿದ್ದು ಹೀಗೆ:ಯುವ ನಟ ಅಜಯ್ ಮಾತನಾಡಿ, ''ನಾನು ಈ ಹಿಂದೆ ಕಿಸ್, ಮೆಹಬೂಬ, ನಾಟ್ಔಟ್ ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ನಾಯಕನಾಗಿ ನಟಿಸಿರುವ ಮೊದಲ ಚಿತ್ರವಿದು. ತುಳು ರಂಗಭೂಮಿ ಹಾಗೂ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿರುವ ನಿರ್ದೇಶಕ ದೇವದಾಸ್ ಕಾಪಿಕಾಡ್ ಅವರ ನಿರ್ದೇಶನದಲ್ಲಿ ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ನನ್ನ ಪಾತ್ರವೂ ಕೂಡ ಚೆನ್ನಾಗಿದೆ'' ಎಂದರು.